ಬುಧವಾರ, ಸೆಪ್ಟೆಂಬರ್ 22, 2021
28 °C
ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಕಿಡಿ

ಮೀಸಲಾತಿ ತೀರ್ಪು: ಮೇಲ್ಮನವಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಮೀಸಲಾತಿ ಸೌಲಭ್ಯ ಮೂಲಭೂತ ಹಕ್ಕಲ್ಲ ಎಂಬ ಸುಪ್ರೀಂ ಕೋರ್ಟ್‌ ತೀರ್ಪು ಪ್ರಶ್ನಿಸಿ ವಿಸ್ತೃತ ಅಥವಾ ಸಾಂವಿಧಾನಿಕ ಪೀಠಕ್ಕೆ ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸಬೇಕು. ಮೀಸಲಾತಿ ತೀರ್ಪಿನ ಬಗ್ಗೆ ನಿರ್ಲಕ್ಷ್ಯ ತೋರಿದ ತಪ್ಪಿಗೆ ಪ್ರಧಾನಿ ನರೇಂದ್ರ ಮೋದಿ ದೇಶದ ಕ್ಷಮೆಯಾಚಿಸಬೇಕು ಎಂದು ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಒತ್ತಾಯಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೀಸಲಾತಿ ಭಿಕ್ಷೆಯಲ್ಲ. ಅದೊಂದು ಸಾಂವಿಧಾನಿಕ ಹಕ್ಕು. ಶೋಷಣೆಗೆ ಒಳಗಾದ ಜನರನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಮೇಲೆತ್ತಲು ಇರುವ ಸಾಧನ. ಸಂವಿಧಾನದ ಪ್ರಕಾರ ಇದೊಂದು ಮೂಲಭೂತ ಹಕ್ಕು. ಸುಪ್ರೀಂ ಕೋರ್ಟ್‌ ತೀರ್ಪು ಸಂವಿಧಾನದ ಆಶಯಗಳಿಗೆ ಧಕ್ಕೆಯುಂಟು ಮಾಡಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ತೀರ್ಪು ಪ್ರಕಟವಾಗಿ ವಾರ ಸಮೀಪಿಸುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮೀಸಲಾತಿ ಸೌಲಭ್ಯ ಕಿತ್ತು ಹಾಕುವ ಬಿಜೆಪಿಯ ಹುನ್ನಾರಕ್ಕೆ ತೀರ್ಪು ಪೂರಕವಾಗಿದೆ. ಕೇಂದ್ರ ಸರ್ಕಾರ ಸರಿಯಾಗಿ ಕಾರ್ಯನಿರ್ವಹಿಸಿದ್ದರೆ ಮೀಸಲಾತಿ ವಿರೋಧಿ ತೀರ್ಪು ಪ್ರಕಟ ಆಗುತ್ತಿರಲಿಲ್ಲ’ ಎಂದು ಹೇಳಿದರು.

‘ಶ್ರೇಣಿಕೃತ ವ್ಯವಸ್ಥೆ ಜಾರಿಗೆ ತರಲು ಬಿಜೆಪಿ ಹವಣಿಸುತ್ತಿದೆ. ಮೀಸಲಾತಿ ಸೌಲಭ್ಯ ಕಿತ್ತುಹಾಕುವ ಉದ್ದೇಶ ಹೊಂದಿರುವುದನ್ನು ಅನಂತಕುಮಾರ್‌ ಹೆಗಡೆ ಬಹಿರಂಗಪಡಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು ದೇಶದ ಮೂಲನಿವಾಸಿಗಳಲ್ಲವೆಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಹೇಳಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು ಭಿಕ್ಷುಕರಲ್ಲ. ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುವ ಪ್ರವೃತ್ತಿ ಬಿಡಬೇಕು’ ಎಂದು ಕಿಡಿಕಾರಿದರು.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಜಿಡಿಪಿ ದರ ಶೇ 9ರಿಂದ 3.5ಕ್ಕೆ ಕುಸಿದಿದೆ. ದೇಶದ ಸಾಲದ ಹೊರೆ ₹ 91 ಲಕ್ಷ ಕೋಟಿಗೆ ಏರಿಕೆಯಾಗಿದೆ. ಪ್ರತಿಯೊಬ್ಬರ ತಲೆಯ ಮೇಲೆ ₹ 27,200 ಸಾಲವಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಮತ್ತೆ ₹ 6 ಲಕ್ಷ ಕೋಟಿ ಸಾಲ ತರುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಬಡತನ, ನಿರುದ್ಯೋಗದಂತಹ ಸಮಸ್ಯೆ ಹೋಗಲಾಡಿಸುವ ಬದಲು ಜನರ ಭಾವನೆಗಳನ್ನು ಕೆಣಕಲಾಗುತ್ತಿದೆ’ ಎಂದು ದೂರಿದರು.

ದೆಹಲಿ ಜನರಿಗೆ ಕೃತಜ್ಞತೆ: ವಿಧಾನಸಭಾ ಚುನಾವಣೆಯಲ್ಲಿ ದೆಹಲಿ ಮತದಾರರು ನೀಡಿದ ತೀರ್ಪನ್ನು ಕಾಂಗ್ರೆಸ್‌ ಸ್ವೀಕರಿಸುತ್ತದೆ. ಜಾತ್ಯತೀತ ಮತಗಳು ಛಿದ್ರವಾದಂತೆ ತಡೆದು ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಟ್ಟ ಮತದಾರರ ಪ್ರಬುದ್ಧತೆಯನ್ನು ಕಾಂಗ್ರೆಸ್‌ ಅಭಿನಂದಿಸುತ್ತದೆ ಎಂದು ವಿ.ಎಸ್‌.ಉಗ್ರಪ್ಪ ಹೇಳಿದರು.

‘ಕಳೆದ ಚುನಾವಣೆಯಲ್ಲಿಯೂ ಕಾಂಗ್ರೆಸ್‌ ಯಾವುದೇ ಸ್ಥಾನ ಗೆದ್ದಿರಲಿಲ್ಲ. ಈ ಬಾರಿಯೂ ಕಾಂಗ್ರೆಸ್‌ ಪ್ರಯತ್ನ ವಿಫಲವಾಗಿರುವುದಕ್ಕೆ ಬೇಸರವಿದೆ. ಪಕ್ಷ ಇನ್ನಷ್ಟು ಸಶಕ್ತವಾಗಿ ಬೆಳೆಯಲು ಅವಕಾಶ ಸಿಕ್ಕಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎಎಪಿ ಎರಡೂ ಪಕ್ಷ ಸೋಲಿಸುವ ವಿಶ್ವಾಸವಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

‘ರಾಜಕಾರಣದ ಬಫೂನ್‌ ಕಟೀಲ್‌’: ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ ಎಂಬ ಸಾಮಾನ್ಯ ತಿಳಿವಳಿಕೆ ಹೊಂದಿರದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌, ರಾಜ್ಯ ರಾಜಕಾರಣದ ಬಫೂನ್ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಉಗ್ರಪ್ಪ ತಿರುಗೇಟು ನೀಡಿದರು.

‘ಬಿಜೆಪಿಯಲ್ಲಿ ಭುಗಿಲೆದ್ದ ಸಂಘರ್ಷವನ್ನು ಬಗೆಹರಿಸಲು ಗಮನ ಹರಿಸಿ. ನೂತನವಾಗಿ ಮಂತ್ರಿಯಾಗಿರುವವರು ಯಾವ ಪಕ್ಷಕ್ಕೆ ನಿಷ್ಠರಾಗಿದ್ದಾರೆ ಎಂಬುದನ್ನು ಬಹಿರಂಗಪಡಿಸಿ. ಅಧಿಕಾರದ ಆಸೆಗೆ ಬಿಜೆಪಿ ಅವಕಾಶವಾದಿ ರಾಜಕಾರಣ ಮಾಡುತ್ತಿದೆ. ಮೌಲ್ಯಗಳನ್ನು ಗಾಳಿಗೆ ತೂರುತ್ತಿದೆ’ ಎಂದು ದೂರಿದರು.

‘ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಲ್ಲಿಸಿದ ರಾಜೀನಾಮೆ ಉರ್ಜಿತವಾಗಿಲ್ಲ. ಹೀಗಾಗಿ, ಕಾಂಗ್ರೆಸ್‌ನಲ್ಲಿ ಯಾವುದೇ ಹುದ್ದೆ ಖಾಲಿ ಇಲ್ಲ’ ಎಂದರು.

ವಿಧಾನಪರಿಷತ್‌ ಸದಸ್ಯೆ ಜಯಮ್ಮ ಬಾಲರಾಜ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌, ಕಾರ್ಯಾಧ್ಯಕ್ಷ ಸಿ.ಶಿವು ಯಾದವ, ಮುಖಂಡರಾದ ಶಂಕರ್, ಅಲ್ಲಾಭಕ್ಷ್ಯ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು