ಮಂಗಳವಾರ, ಜೂನ್ 28, 2022
28 °C
ವೇದಾಂತ ಅದಿರು ಕಂಪನಿಯ 100 ಹಾಸಿಗೆ ಸಾಮರ್ಥ್ಯದ ಕೋವಿಡ್ ಆಸ್ಪತ್ರೆ ಉದ್ಘಾಟಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ವೇದಾಂತ ಕಂಪನಿಯ ಪ್ರಯತ್ನ ಶ್ಲಾಘನೀಯ: ಸಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಕೋವಿಡ್ ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರದೊಂದಿಗೆ ಕೈಜೋಡಿಸಿರುವ ವೇದಾಂತ ಕಂಪನಿಯ ಪ್ರಯತ್ನ ಶ್ಲಾಘನೀಯ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ವೇದಾಂತ ಕಂಪನಿ ನಿರ್ಮಿಸಿರುವ 12 ಐಸಿಯು ಹಾಸಿಗೆ, 88 ಆಮ್ಲಜನಕ ಸಹಿತ ಹಾಸಿಗೆ ಸೌಲಭ್ಯವುಳ್ಳ ತಾತ್ಕಾಲಿಕ ‘ಕೋವಿಡ್ ಫೀಲ್ಡ್‌ ಆಸ್ಪತ್ರೆ’ಯನ್ನು ಗುರುವಾರ ಆನ್‌ಲೈನ್‌ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರ ಕೋವಿಡ್‌ ಅನ್ನು ಯುದ್ಧೋಪಾದಿಯಲ್ಲಿ ಎದುರಿಸುತ್ತಿದೆ. ಉಚಿತ ಲಸಿಕೆ ಸೌಲಭ್ಯ ಒದಗಿಸುತ್ತಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಅನೇಕ ವೈದ್ಯಕೀಯ ಉಪಕರಣಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ವೇದಾಂತ ಕಂಪನಿಯ ಅಧ್ಯಕ್ಷ ಅನಿಲ್ ಅಗರ್ವಾಲ್ ನೆರವಿನ ರೂಪದಲ್ಲಿ 100 ಹಾಸಿಗೆ ಸಾಮರ್ಥ್ಯದ ಕೋವಿಡ್ ಆಸ್ಪತ್ರೆ ನಿರ್ಮಿಸಿರುವುದು ಸ್ವಾಗತಾರ್ಹ’ ಎಂದು ಹೇಳಿದರು.

‘ಸಮಾಜದಿಂದ ಪಡೆದುದ್ದನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವ ಮೂಲಕ ಕಂಪನಿ ಉತ್ತಮ ಕಾರ್ಯಕ್ಕೆ ಮುಂದಾಗಿದೆ. ಇದರಿಂದ ಹಾಸಿಗೆಗೆ ಉಂಟಾಗುತ್ತಿರುವ ಕೊರತೆ ಸ್ವಲ್ಪಮಟ್ಟಿಗೆ ಕಡಿಮೆಯಾಗಲಿದೆ. 6 ತಿಂಗಳ ನಿರ್ವಹಣೆಯ ಜವಾಬ್ದಾರಿಯನ್ನೂ ವಹಿಸಿದೆ. ಸರ್ಕಾರದ ವೈದ್ಯಕೀಯ ಸಿಬ್ಬಂದಿ ಇಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ’ ಎಂದರು.

ಮೂರನೇ ಅಲೆಗೆ ಸಿದ್ಧತೆ

‘ಕೋವಿಡ್ ಮೂರನೇ ಅಲೆಗೆ ಈಗಿನಿಂದಲೇ ಸರ್ಕಾರ ಸಿದ್ಧತೆಯಲ್ಲಿ ತೊಡಗಿದೆ. ವೈದ್ಯಕೀಯ ಉಪಕರಣಗಳ ಜತೆಗೆ ಸಿಬ್ಬಂದಿ ಹೆಚ್ಚಳಕ್ಕೂ ಕ್ರಮ ವಹಿಸಲಾಗಿದೆ. ಜನರ ಜೀವ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದೆ. ಅನೇಕ ಧಾರ್ಮಿಕ ಸಂಸ್ಥೆಗಳು, ಮಠಗಳು, ಸಂಘ–ಸಂಸ್ಥೆಗಳು ಕೈಜೋಡಿಸುತ್ತಿರುವುದು ಅವರಲ್ಲಿರುವ ಜನಪರ ಕಾಳಜಿ ತೋರಿಸುತ್ತಿದೆ’ ಎಂದು ಯಡಿಯೂರಪ್ಪ ಹೇಳಿದರು.

ವೇದಾಂತ ಅಧ್ಯಕ್ಷ ಅನಿಲ್ ಅಗರ್ವಾಲ್, ‘ಎರಡನೇ ಅಲೆಯಲ್ಲಿ ಹಲವರು ಜೀವ ಕಳೆದುಕೊಂಡಿರುವುದು ಅತ್ಯಂತ ನೋವಿನ ಸಂಗತಿ. ಈ ನಿಟ್ಟಿನಲ್ಲಿ ವೇದಾಂತ ಜವಾಬ್ದಾರಿಯುತ ಸಂಸ್ಥೆಯಾಗಿ, ಅತ್ಯಾಧುನಿಕ ವೈದ್ಯಕೀಯ ಸೌಲಭ್ಯವಿರುವ ಕೋವಿಡ್ ಆಸ್ಪತ್ರೆ ನಿರ್ಮಿಸಿದೆ. ಇದರಿಂದ ಸೋಂಕಿತರಿಗೆ ಅನುಕೂಲವಾಗಲಿದೆ. ಸೋಂಕಿತರು ಗುಣಮುಖರಾಗಬೇಕು ಎಂಬುದು ಕಂಪನಿಯ ಆಶಯ’ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ‘ಇದು ರಾಜಕೀಯ ಮಾಡುವ ಸಮಯವಲ್ಲ. ಜನರ ಜೀವ ಉಳಿಸುವ ಮಹತ್ತರ ಕಾರ್ಯಕ್ಕೆ ಕೈಜೋಡಿಸುವ ಸಮಯವಾಗಿದೆ. ವೇದಾಂತ ಕಂಪನಿ, ಪ್ರಕಾಶ್ ಸ್ಪಾಂಜ್ ಐರನ್ ಅಂಡ್ ಪವರ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಅನೇಕ ಸಂಘ–ಸಂಸ್ಥೆಗಳು ಚಿತ್ರದುರ್ಗದ ಜಿಲ್ಲಾಡಳಿತದೊಂದಿಗೆ ಸಹಕಾರ ನೀಡುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸದರಾದ ಜಿ.ಎಂ. ಸಿದ್ದೇಶ್ವರ, ಎ. ನಾರಾಯಣಸ್ವಾಮಿ, ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಎಂ. ಚಂದ್ರಪ್ಪ, ಪೂರ್ಣಿಮಾ ಶ್ರೀನಿವಾಸ್, ಟಿ. ರಘುಮೂರ್ತಿ, ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಲಿಂಗಮೂರ್ತಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ನಂದಿನಿದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು