ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಲ್ಲೂ ನೀರು: ಜನಜೀವನ ಅಸ್ತವ್ಯಸ್ತ

ವೇದಾವತಿ ನದಿ ಪ್ರವಾಹದಿಂದ ಮನೆಗಳಿಗೆ ನುಗ್ಗಿದ ನೀರು; ಬೆಳೆ ಹಾನಿ
Last Updated 7 ಸೆಪ್ಟೆಂಬರ್ 2022, 3:59 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಹಿರಿಯೂರು: ತಾಲ್ಲೂಕಿನ ವಾಣಿವಿಲಾಸ ಜಲಾಶಯ ಅಪರೂಪಕ್ಕೆ ಕೋಡಿ ಬಿದ್ದಾಗ ಕುಣಿದು ಕುಪ್ಪಳಿಸಿದ್ದ ಸಾರ್ವಜನಿಕರು, ಮುಂದುವರಿದ ಮಳೆಯಿಂದಾಗಿ ವೇದಾವತಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ವರುಣನನ್ನು ಶಪಿಸುವಂತಾಗಿದೆ.

ವಾರದಿಂದ ತಾಲ್ಲೂಕಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಬಹುತೇಕ ಚೆಕ್ ಡ್ಯಾಂಗಳು, ವೇದಾವತಿ ಮತ್ತು ಸುವರ್ಣಮುಖಿ ನದಿಗಳ ಪಾತ್ರದಲ್ಲಿ ನಿರ್ಮಿಸಿರುವ ಬ್ಯಾರೇಜುಗಳು, ಹತ್ತಾರು ಕೆರೆಗಳು ತುಂಬಿದ್ದು, ಎಲ್ಲೆಲ್ಲೂ ನೀರೇ ನೀರು ಎನ್ನುವಂತಾಗಿದೆ. ನಗರದ ಚಿಟುಗು
ಮಲ್ಲೇಶ್ವರ ಬಡಾವಣೆ ವರ್ಷದಲ್ಲಿ ಎರಡನೇ ಬಾರಿ ಜಲಾವೃತವಾಗಿದೆ. ಮನೆಯ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು, ಕಾರುಗಳು ಭಾಗಶ: ನೀರಿನಲ್ಲಿ ಮುಳುಗಿವೆ. ಅಂಬೇಡ್ಕರ್ ಶಾಲೆಯ ಮುಂಭಾಗದ 25–30 ಮನೆಗಳಿಗೆ ನೀರು ನುಗ್ಗಿದೆ.

ವಾಣಿ ವಿಲಾಸ ಜಲಾಶಯದ ಒಳ ಹರಿವು ಮಂಗಳವಾರ 7,467 ಕ್ಯುಸೆಕ್‌ಗೆ ಹೆಚ್ಚಿದ್ದರಿಂದ ಕೋಡಿಯ ಮೂಲಕ 7,312 ಕ್ಯುಸೆಕ್ ನೀರು ವೇದಾವತಿ ನದಿ ಸೇರಿದ್ದು, ಸೋಮವಾರ ರಾತ್ರಿ ಜಲಾಶಯದ ಕೆಳಭಾಗದಲ್ಲಿ ಭಾರಿ ಮಳೆಯಾದ ಪರಿಣಾಮ ಹಿರಿಯೂರು ನಗರದಲ್ಲಿ ವೇದಾವತಿ ಸೇತುವೆ ಸಮೀಪದ ಈಶ್ವರನ ದೇವಸ್ಥಾನ ಸಂಪೂರ್ಣ ಮುಳುಗಿದೆ. ಹುಲಿಗೆಮ್ಮ ದೇವಸ್ಥಾನದ ಸುತ್ತ 15ಕ್ಕೂ ಹೆಚ್ಚು ಮನೆಗಳು, ಮಾಂಸ ಮಾರುಕಟ್ಟೆಯ ಕೆಳಗಿನ ಏಳೆಂಟು ಮನೆಗಳು ಜಲಾವೃತವಾಗಿವೆ. ಲಕ್ಕವ್ವನಹಳ್ಳಿ ರಸ್ತೆ, ಮಾಂಸಮಾರುಕಟ್ಟೆ ಪ್ರದೇಶ, ಸುಣ್ಣಗಾರ ಬೀದಿ, ಆಜಾದ್ ಬಡಾವಣೆ, ತಾಲ್ಲೂಕು ಕಚೇರಿ ಹಿಂಭಾಗದ ಬಡಾವಣೆ, ಸಿದ್ದನಾಯಕ ವೃತ್ತ, ಬಬ್ಬೂರು ರಸ್ತೆ, ಗೋಪಾಲಪುರ, ಕಟುಗರಹಳ್ಳ, ಹನುಮಾನ್ ಸಾಮಿಲ್‌ವರೆಗೆ ವೇದಾವತಿ ನದಿ ಪಾತ್ರದ ಬಹುತೇಕ ಮನೆಗಳು, ತೋಟಗಳು ಸಂಪೂರ್ಣ ಜಲಾವೃತವಾಗಿವೆ. ವರುಣನ ಆರ್ಭಟಕ್ಕೆ ತಾಲ್ಲೂಕು ತತ್ತರಿಸಿ ಹೋಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

132 ಮನೆಗಳಿಗೆ ನೀರು: ‘ವೇದಾವತಿ ನದಿಯಲ್ಲಿ ಪ್ರವಾಹ ಉಂಟಾಗಿದ್ದರಿಂದ ನಗರದಲ್ಲಿ 132 ಮನೆಗಳಿಗೆ ನೀರು ನುಗ್ಗಿದೆ. ನಗರದ ಸರ್ಕಾರಿ ಪಾಲಿಟೆಕ್ನಿಕ್‌ನ ಒಬಿಸಿ ಹಾಸ್ಟೆಲ್, ಬನಶಂಕರಿ ಹಾಗೂ ಲಕ್ಷ್ಮಮ್ಮ ಕಲ್ಯಾಣ ಮಂಟಪಗಳು, ಮಸ್ಕಲ್ ಗ್ರಾಮದ ಪ್ರೌಢಶಾಲೆ ಹಾಗೂ ರಂಗನಾಥಪುರದ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರವಾಹ ಸಂತ್ರಸ್ತರಿಗೆ ಗಂಜಿ ಕೇಂದ್ರ ತೆರೆಯಲಾಗಿದೆ’ ಎಂದು ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಮಾಹಿತಿ ನೀಡಿದ್ದಾರೆ.

35 ಮನೆಗಳಿಗೆ ಹಾನಿ: ತಾಲ್ಲೂಕಿನಲ್ಲಿ ನಿರಂತರ ಮಳೆಗೆ 35 ಮನೆಗಳಿಗೆ ಹಾನಿಯಾಗಿದ್ದು, ಅವುಗಳಲ್ಲಿ 5 ಮನೆಗಳು ಸಂಪೂರ್ಣ ಬಿದ್ದು ಹೋಗಿವೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

6,267 ಹೆಕ್ಟೇರ್ ಬೆಳೆ ಹಾನಿ: ‘ತಾಲ್ಲೂಕಿನಲ್ಲಿ 1,646 ಹೆಕ್ಟೇರ್ ಶೇಂಗಾ, 1,138 ಹೆಕ್ಟೇರ್ ಮೆಕ್ಕೆಜೋಳ, 1,071 ಹೆಕ್ಟೇರ್ ಸೂರ್ಯಕಾಂತಿ, 375 ಹೆಕ್ಟೇರ್ ರಾಗಿ ಒಳಗೊಂಡಂತೆ ಒಟ್ಟು 6,267 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಉಲ್ಫತ್ ಜೈಬಾ ಹೇಳಿದ್ದಾರೆ.

ನೆರವಿಗೆ ಧಾವಿಸಿದ ಶಾಸಕಿ: ವೇದಾವತಿ ನದಿಯಲ್ಲಿನ ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿರುವ ಸಂತ್ರಸ್ತರಿಗೆ ಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ತಮ್ಮ ಪತಿ ಡಿ.ಟಿ. ಶ್ರೀನಿವಾಸ್ ಅವರೊಂದಿಗೆ ಉಪಾಹಾರ ವಿತರಿಸಿದರು.

‘ತಾಲ್ಲೂಕು ಆಡಳಿತ ಐದು ಕಡೆ ಪರಿಹಾರ ಕೇಂದ್ರಗಳನ್ನು ಆರಂಭಿಸಿದ್ದು, ಊಟ–ಉಪಹಾರ–ವಸತಿ ವ್ಯವಸ್ಥೆ ಮಾಡಿದೆ. ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ ಎಂದು ಮರಳಿ ಮನೆಗಳಿಗೆ ಹೋಗಬೇಡಿ. ಇನ್ನೂ ಮೂರ್ನಾಲ್ಕು ದಿನ ಮಳೆ ಮುಂದುವರಿಯುವ ಸೂಚನೆ ಇದ್ದು, ಅಲ್ಲಿಯವರೆಗೆ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯಿರಿ. ಅಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತದೆ. ಪಕ್ಷದ ಕಾರ್ಯಕರ್ತರನ್ನು ಒಳಗೊಂಡ ಸಹಾಯವಾಣಿ ತಂಡಗಳನ್ನು ರಚಿಸಿದ್ದು, 24 ಗಂಟೆಯೂ ಸಂತ್ರಸ್ತರಿಗೆ ನೆರವು ನೀಡಲಿದ್ದಾರೆ’ ಎಂದು ಶಾಸಕಿ ಪೂರ್ಣಿಮಾ ತಿಳಿಸಿದರು.

ನಾಲೆಗಳಿಗೆ ಜಲಾಶಯದ ನೀರು

ವಾಣಿವಿಲಾಸ ಜಲಾಶಯದ ಸಂಗ್ರಹಣಾ ಸಾಮರ್ಥ್ಯ 130 ಅಡಿ ಇದ್ದು, ಮಂಗಳವಾರ 133 ಅಡಿ ತಲುಪಿತ್ತು. ಅಣೆಕಟ್ಟೆಯ ಸುರಕ್ಷತೆ ಹಿನ್ನೆಲೆಯಲ್ಲಿ ವಿಶ್ವೇಶ್ವರಯ್ಯ ನೀರಾವರಿ ನಿಗಮದ ಅಧಿಕಾರಿಗಳು ಮಂಗಳವಾರ ಮಧ್ಯಾಹ್ನ ತೂಬಿನ ಮೂಲಕ ನಾಲೆಗಳಿಗೆ ನೀರು ಬಿಟ್ಟಿದ್ದಾರೆ. ಇದರಿಂದ ಬುಧವಾರ ಬೆಳಗಿನ ವೇಳೆಗೆ ವೇದಾವತಿ ನದಿಯಲ್ಲಿ ಮತ್ತೆ ನೀರಿನ ಮಟ್ಟ ಹೆಚ್ಚಲಿದೆ. ಮಂಗಳವಾರವೂ ಮಳೆ ಮುಂದುವರಿದರೆ ನದೀ ಪಾತ್ರದ ಮತ್ತಷ್ಟು ಜನರು ಅಪಾಯಕ್ಕೆ ಸಿಲುಕಲಿದ್ದಾರೆ.

ತುರ್ತು ಪರಿಸ್ಥಿತಿ ಎದುರಿಸಲು ಸಜ್ಜು

ನಿರಂತರ ಮಳೆಯ ಕಾರಣಕ್ಕೆ ಮಂಗಳವಾರ ನಗರದ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ತಾಲ್ಲೂಕು ಆಡಳಿತ ಮತ್ತು ನಗರಸಭೆ ಹಾಗೂ ಎಲ್ಲಾ ಸರ್ಕಾರಿ ಸಂಸ್ಥೆಗಳು ತುರ್ತು ಪರಿಸ್ಥಿತಿ ಎದುರಿಸಲು ಸಜ್ಜಾಗಿವೆ. ತುರ್ತು ಸಹಾಯಕ್ಕೆ ತಹಶೀಲ್ದಾರ್ (8105999707), ನಗರಸಭೆ ಪೌರಾಯುಕ್ತರು (9449580790), ಡಿವೈಎಸ್‌ಪಿ (9480803122) ಹಾಗೂ ತಾಲ್ಲೂಕು ಪಂಚಾಯಿತಿ ಇಒ (9480861110) ಅವರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.

ಮಳೆಹಾನಿ ಪರಿಶೀಲನೆ ನಿಮಿಷಗಳಲ್ಲಿ ಪೂರ್ಣ

ವೇದಾವತಿ ನದಿ ಪ್ರವಾಹ ಸಂತ್ರಸ್ತರ ಅಳಲು ಆಲಿಸಲು ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಪ್ರವಾಸ ಅಧಿಕಾರಿಗಳ ಭೇಟಿಗೆ ಸೀಮಿತವಾಯಿತು. ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ಕೆಲ ಮನೆಗಳಿಗೆ ಭೇಟಿ ನೀಡಿ ಪ್ರಯಾಣ ಮುಂದುವರಿಸಿದರು.

ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಧಾವಿಸಿದ್ದರು.

‘ಭಾರತ್ ತೋಡೋ ಯಾತ್ರೆ’: ಕನ್ಯಾಕುಮಾರಿಯಿಂದ ಕಾಂಗ್ರೆಸ್ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ ಭಾರತ್ ತೋಡೋ ಕಾಂಗ್ರೆಸ್ ಆಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಟೀಕಿಸಿದರು.

‘ಸಿದ್ದರಾಮಯ್ಯ ಅವರು ಜೆಡಿಎಸ್‌ನಲ್ಲಿದ್ದರು. ಅವರು ಕಾಂಗ್ರೆಸ್‌ಗೆ ವಲಸೆ ಹೋಗಿದ್ದಾರೆ. ಕಾಂಗ್ರೆಸ್‌ ಅನ್ನು ಆ ಪಕ್ಷದ ನಾಯಕರೇ ಹಾಳು ಮಾಡುತ್ತಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT