ಚಿತ್ರದುರ್ಗ: ಗ್ರಾಮದ ಹಾಲುಸ್ವಾಮಿ ದೇವರು ಹೇಳಿದೆ. ನೋಡಿ ಸರ್, ಯಾವ ಕಾರಣಕ್ಕೂ ನಾವು ಲಸಿಕೆ ಹಾಕಿಸಿಕೊಳ್ಳುವುದಿಲ್ಲ. ಬಲವಂತ ಮಾಡಬೇಡಿ.. ಹೀಗೆಂದು ಆರೋಗ್ಯ ಇಲಾಖೆ ಅಧಿಕಾರಿಗಳ ಮುಂದೆ ಹೇಳಿದ್ದು, ತಾಲ್ಲೂಕಿನ ಕರಿಯಟ್ಟಿಯ ಕೆಲ ಗ್ರಾಮಸ್ಥರು.
ನಾಗರಿಕರಲ್ಲಿದ್ದ ಮೂಢನಂಬಿಕೆ ಹೋಗಲಾಡಿಸಲು ಹಾಲುಸ್ವಾಮಿ ದೇಗುಲ ಮುಂಭಾಗ ಗುರುವಾರ ಆರೋಗ್ಯ ಇಲಾಖೆ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಅಧಿಕಾರಿಗಳ ಮಾತಿಗೆ ಕೆಲವರು ಮೊದಲು ಒಪ್ಪಲಿಲ್ಲ. ಕೂಡಲೇ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ. ಗಿರೀಶ್ ಅರ್ಚಕರನ್ನು ಸ್ಥಳಕ್ಕೆ ಕರೆಸಿದರು.
‘ದೇವರು ಹೇಳಿದೆ ಎಂಬ ಕಾರಣ ಮುಂದಿಟ್ಟುಕೊಂಡು ಇವರೆಲ್ಲರೂ ಲಸಿಕೆ ನಿರಾಕರಿಸುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿ’ ಎಂದು ಗಿರೀಶ್ ಅರ್ಚಕರಿಗೆ ಪ್ರಶ್ನಿಸಿದರು. ‘ದೇವರು ಯಾವ ಅಪ್ಪಣೆಯನ್ನು ಕೊಟ್ಟಿಲ್ಲ. ಮಾರಮ್ಮ ದೇವಿ ಜಾತ್ರೆ ಅಂಗವಾಗಿ ಮಾಂಸಾಹಾರ, ಮದ್ಯ ಸೇವಿಸಿ ಅಡ್ಡಪರಿಣಾಮ ಆಗಬಹುದು ಎಂಬ ಕಾರಣಕ್ಕೆ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಅರ್ಚಕರು ತಿಳಿಸಿದರು.
‘ಮಾಂಸಾಹಾರ ಸೇವನೆ, ಮದ್ಯ ಸೇವನೆಗೂ ಕೋವಿಡ್ ಲಸಿಕೆಗೂ ಸಂಬಂಧ ಕಲ್ಪಿಸಬೇಡಿ. ಲಸಿಕೆ ಗುಣಮಟ್ಟದ್ದಾಗಿದ್ದು, ನಿಮ್ಮ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಸರ್ಕಾರ ಉಚಿತವಾಗಿ ನೀಡುತ್ತಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಿ’ ಎಂದು ಮನವೊಲಿಸಿದರು
ನಿರಾಕರಿಸಿದ 70 ಜನ ಲಸಿಕೆ ಹಾಕಿಸಿಕೊಂಡರು. ಡಾ.ಶೈಲಾ, ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ. ಮೂಗಪ್ಪ, ಮಂಜುನಾಥ್, ಜಾನಕಿ, ಆರೋಗ್ಯ ಸುರಕ್ಷಾಧಿಕಾರಿಗಳಾದ ಮಾರುತಿ ಪ್ರಸಾದ್, ದೇವೀರಮ್ಮ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.