ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಮಾಳ ಸಾಗುವಳಿಗೆ ಬಂದವರನ್ನು ಓಡಿಸಿದ ಗ್ರಾಮಸ್ಥರು, 2 ಡೋಜರ್‌ ವಶಕ್ಕೆ

ಕಾಟನಾಯಕನಹಳ್ಳಿ: ಭೂಮಿ ಒತ್ತುವರಿ ಯತ್ನಕ್ಕೆ ತಡೆ
Last Updated 3 ಸೆಪ್ಟೆಂಬರ್ 2021, 3:47 IST
ಅಕ್ಷರ ಗಾತ್ರ

ಕಾಟನಾಯಕನಹಳ್ಳಿ (ಹಿರಿಯೂರು): ತಾಲ್ಲೂಕಿನ ಕಾಟನಾಯಕನಹಳ್ಳಿಯ ಗೋಮಾಳದ ಜಾಗದಲ್ಲಿ ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದವರನ್ನು ಗ್ರಾಮಸ್ಥರೆಲ್ಲ ಒಟ್ಟಾಗಿ ಸೇರಿ ಹೆದರಿಸಿ ಓಡಿಸಿದ ಘಟನೆ ಗುರುವಾರ ನಡೆದಿದೆ.

ಗ್ರಾಮದ ರಿ.ಸ.ನಂ. 45 ಮತ್ತು 46 ರಲ್ಲಿ 143 ಎಕರೆ ಗೋಮಾಳವಿದೆ. ದಿಂಡಾವರ ಗ್ರಾಮದ ಆರು ಜನ ಸಾರ್ವತ್ರಿಕ ರಜಾ ದಿನವಾಗಿದ್ದ ಆಗಸ್ಟ್ 28 ಮತ್ತು 29ರಂದು ಡೋಜರ್ ಬಳಸಿ ಉಳುಮೆ ಮಾಡಿದ್ದರು. ಗುರುವಾರ ಮತ್ತೆ ಸಾಗುವಳಿಗೆ ಬಂದಾಗ ಗ್ರಾಮಸ್ಥರ ಗಮನಕ್ಕೆ ಬಂದು ಸಾಗುವಳಿ ಮಾಡುವುದಕ್ಕೆ ವಿರೋಧಿಸಿ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರು.

ಗ್ರಾಮಸ್ಥರು ತಿಳಿಸಿದ ತಕ್ಷಣ ಪ್ರಭಾರ ಕಂದಾಯ ಇನ್‌ಸ್ಪೆಕ್ಟರ್ ಶಿವಮೂರ್ತಿ ಸ್ಥಳಕ್ಕೆ ಬರುತ್ತಿದ್ದಂತೆ ಅಕ್ರಮ ಸಾಗುವಳಿದಾರರು ಡೋಜರ್ ಬಿಟ್ಟು ಓಡಿ ಹೋಗಿದ್ದಾರೆ.

‘ಗೋಮಾಳದಲ್ಲಿ ನೀಲಗಿರಿ ಬೆಳೆದಿದ್ದ ಕಾರಣಕ್ಕೆ ಅರಣ್ಯ ಇಲಾಖೆಗೆ ಸೇರಿದ ಜಾಗವೆಂದು ಸುಮ್ಮನಿದ್ದರು. ಗೋಮಾಳ ಎಂದು ಮಾಹಿತಿ ಪಡೆದ ಕೆಲವರು ಅಕ್ರಮ ಸಾಗುವಳಿಗೆ ಮುಂದಾಗಿದ್ದಾರೆ. ವಾಸ್ತವವಾಗಿ ಪಹಣಿಯಲ್ಲಿ ‘ಅರಣ್ಯ ಇಲಾಖೆ’ (ಲ್ಯಾಂಡ್ ಬ್ಯಾಂಕ್ ಉದ್ದೇಶಕ್ಕೆ) ಎಂದೇ ಇದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ತಮಗೆ ಭೂಮಿ ಹಸ್ತಾಂತರ ಆಗಿಲ್ಲ ಎನ್ನುತ್ತಿದ್ದಾರೆ. ಏನೇ ಆದರೂ ಇದು ಸರ್ಕಾರಿ ಭೂಮಿ. ಅಕ್ರಮ ಸಾಗುವಳಿ ಮಾಡಿರುವ ಆರು ಜನರ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದು’ ಎಂದು ಶಿವಮೂರ್ತಿ ತಿಳಿಸಿದ್ದಾರೆ.

‘ಕಾಟನಾಯನಕಹಳ್ಳಿಯಲ್ಲಿ ಪಶು
ಪಾಲನೆ ವೃತ್ತಿಯವರು ಹೆಚ್ಚಿದ್ದು, ಕುರಿ–ಮೇಕೆ, ಜಾನುವಾರು ಸಾಕಣೆಗೆ ಸದರಿ ಜಾಗವನ್ನು ಬಿಟ್ಟರೆ ಬೇರೆ ಸ್ಥಳವೇ ಇಲ್ಲ. ನಮ್ಮೂರಿನಲ್ಲೂ ಭೂರಹಿತ ಕೃಷಿಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಸಾಗುವಳಿ ಮಾಡಬೇಕೆಂದಿದ್ದರೆ ನಮ್ಮೂರಿನ ಭೂರಹಿತ ಬಡವರೇ ಮಾಡುತ್ತಾರೆ. ಬೇರೆ ಊರಿನಿಂದ ಬಂದು ನಮ್ಮೂರಿನ ಭೂಮಿಯನ್ನು ಅತಿಕ್ರಮಿಸಿಕೊಳ್ಳಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ’ ಎಂದು ಗ್ರಾಮಸ್ಥರು
ಎಚ್ಚರಿಸಿದ್ದಾರೆ.

ಅಕ್ರಮ ಸಾಗುವಳಿ ತಡೆದ ವೇಳೆ ಜೆ.ಜಿ. ಹಳ್ಳಿ ಸ್ವಾಮಿ ವಿವೇಕಾನಂದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ. ಶಿವಕುಮಾರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕಾಳಿಬಾಯಿ, ಮಾಜಿ ಅಧ್ಯಕ್ಷ ರಾಜಾನಾಯ್ಕ, ಸದಸ್ಯ ಕಣ್ಣಪ್ಪ, ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ತಿಮ್ಮಣ್ಣ, ದಾಸಣ್ಣ, ಟಿ. ತಿಮ್ಮಣ್ಣ, ತಿರುಮಲೇಶ್, ನಿಜಲಿಂಗಪ್ಪ, ಮಂಜಾನಾಯಕ, ರಾಮು, ಸದಾರಾಮ್, ರಾಜಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT