ಮಂಗಳವಾರ, ಆಗಸ್ಟ್ 20, 2019
23 °C
ಪತ್ರಿಕಾ ದಿನಾಚರಣೆ

ವಿಪ್‌ ನೀಡದೆಯೂ ಅನರ್ಹಗೊಳಿಸುವ ಕಠಿಣ ಕಾನೂನು ಜಾರಿಯಾಗಲಿ: ಬರಗೂರು ರಾಮಚಂದ್ರಪ್ಪ

Published:
Updated:
Prajavani

ಚಿತ್ರದುರ್ಗ: ‘ಪಕ್ಷವೊಂದರಿಂದ ಸ್ಪರ್ಧಿಸಿ, ಗೆದ್ದ ನಂತರ ಐದು ವರ್ಷ ಅವಧಿ ಪೂರ್ಣಗೊಳ್ಳುವ ಮುನ್ನವೇ ಕ್ಷೇತ್ರದ ಜನತೆಗೂ ವಂಚಿಸಿ ರಾಜೀನಾಮೆ ಸಲ್ಲಿಸುವ ಪಕ್ಷಾಂತರಿಗಳನ್ನು ವಿಪ್‌ ಜಾರಿಗೊಳಿಸದೆಯೂ ಅನರ್ಹಗೊಳಿಸುವ ಕಠಿಣ ಕಾನೂನು ಜಾರಿಯಾಗಬೇಕು. ಇಲ್ಲದಿದ್ದರೆ, ಸುಧಾರಣೆ ಸಾಧ್ಯವಿಲ್ಲ’ ಎಂದು ಸಾಹಿತಿ, ಚಿಂತಕ ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಇಲ್ಲಿ ಶನಿವಾರ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ವಿಧಾನಸಭೆಯಲ್ಲಿ 101, 105, 107 ಈ ರೀತಿ ಶಾಸಕರು ಸಂಖ್ಯೆ ಆಗುತ್ತಿದ್ದಾರೆಯೇ ಹೊರತು ವ್ಯಕ್ತಿಯಾಗಿ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಇಂತಹ ದುಸ್ಥಿತಿಗೆ ತಲುಪಿದ್ದು, ಪಂಚೇಂದ್ರಿಯ ವಂಚಿತ ಪ್ರಜಾಪ್ರಭುತ್ವ ನಿರ್ಮಾಣವಾಗುತ್ತಿದೆ’ ಎಂದು ವಿಷಾದಿಸಿದರು.

‘ನಿಜವಾಗಿಯೂ ಪ್ರಜಾಪ್ರಭುತ್ವಕ್ಕೆ ಬಿಕ್ಕಟ್ಟು ಎದುರಾಗಿದೆ. ತಾಂತ್ರಿಕ ಪ್ರಜಾಪ್ರಭುತ್ವ ದೇಶದಲ್ಲಿ ಅಸ್ಥಿತ್ವದಲ್ಲಿದ್ದು, ತಾತ್ವಿಕ ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟಾಗುವ ಅನೇಕ ಘಟನೆಗಳು ನಡೆಯುತ್ತಿವೆ. ಸೈದ್ಧಾಂತಿಕ ರಾಜಕಾರಣ ಮಾಡಿದರೆ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ. ಅಧಿಕಾರಕ್ಕಾಗಿ ಸಮಯ ಸಾಧಕ ರಾಜಕಾರಣ ಮಾಡಿದರೆ ವಿನಾಶ ಖಂಡಿತ’ ಎಂದರು.

‘ವಿಧಾನಸಭೆಯನ್ನು ನೋಡಿ, ಮಧ್ಯಮ ವರ್ಗದವರಲ್ಲಿ ಸಿನಿಕತನ ಸೃಷ್ಟಿಯಾಗಿದೆ. ಶಾಸನ ಸಭೆಯಲ್ಲಿ ಮಾತನಾಡಲು ಅವಕಾಶ ನೀಡದ ರೀತಿಯಲ್ಲಿ ಕೆಲವರು ವರ್ತಿಸುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆಯಲ್ಲ. ನಾನೂ ಯಾವ ಪಕ್ಷದ ಪರವೂ ಅಲ್ಲ, ವಿರೋಧಿಯೂ ಅಲ್ಲ. ಪ್ರಜಾಪ್ರಭುತ್ವ, ಸಂವಿಧಾನದ ಆಶಯ ಉಳಿಯಬೇಕು ಎಂಬುದಷ್ಟೇ ಮುಖ್ಯ’ ಎಂದು ತಿಳಿಸಿದರು.

‘ದೇಶದಲ್ಲಿ ಚುನಾವಣೆಯೂ ಒಂದು ದೊಡ್ಡ ಮಾರುಕಟ್ಟೆಯಾಗಿದೆ. ದೇವರು, ಧರ್ಮವನ್ನು ಬಳಸಿಕೊಳ್ಳಲಾಗುತ್ತಿದೆ. ಮನುಷ್ಯರಷ್ಟೇ ಅಲ್ಲ, ದೇವರನ್ನು ಬಹಳಷ್ಟು ಶೋಷಣೆ ಮಾಡಿರುವ ದೇಶ ನಮ್ಮದು. ಭಕ್ತಿ ಎಂಬುದು ತೋರುಂಬ ಲಾಭಕ್ಕೆ ಸೀಮಿತವಾಗಿದೆ. ಧರ್ಮ ಗುರುಗಳಾಗದೇ ಅನೇಕರು ಜಾತಿ ಗುರುಗಳಾಗಿದ್ದಾರೆ. ಇನ್ನೂ ಕೆಲ ಮಾಧ್ಯಮಗಳು ಚುನಾವಣೆಯನ್ನು ಯುದ್ಧವಾಗಿ ಪ್ರತಿಬಿಂಬಿಸಿ, ನಾಮಪತ್ರ ಸಲ್ಲಿಸುವವರನ್ನು ಶತ್ರುಗಳನ್ನಾಗಿ ಬಿಂಬಿಸುತ್ತಿವೆ. ಅವರು ಸ್ಪರ್ಧಿಗಳೇ ಹೊರತು ಶತ್ರುಗಳಲ್ಲ’ ಎಂದರು.

Post Comments (+)