ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲುಷಿತ ನೀರು ಪ್ರಕರಣ | ಕವಾಡಿಗರಹಟ್ಟಿ ಅಭಿವೃದ್ಧಿಗೆ ₹ 4 ಕೋಟಿ: ಸಚಿವ ಸುಧಾಕರ್

Published 15 ಆಗಸ್ಟ್ 2023, 9:49 IST
Last Updated 15 ಆಗಸ್ಟ್ 2023, 9:49 IST
ಅಕ್ಷರ ಗಾತ್ರ

ಚಿತ್ರದುರ್ಗ: ಕಲುಷಿತ ನೀರು ಕುಡಿದು ದುರಂತ ಸಂಭವಿಸಿದ ನಗರದ 17ನೇ ವಾರ್ಡ್ ವ್ಯಾಪ್ತಿಯ ಕವಾಡಿಗರಹಟ್ಟಿಗೆ ಮೂಲಸೌಲಭ್ಯ ಕಲ್ಪಿಸುವ ಉದ್ದೇಶದಿಂದ ನಗರಾಭಿವೃದ್ಧಿ ಇಲಾಖೆ ₹ 4 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ತಿಳಿಸಿದರು.

‘ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಸೇರಿ ಹಲವು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. 2.5 ಲಕ್ಷ ಲೀಟರ್‌ ಸಾಮರ್ಥ್ಯದ ನೂತನ ಓವರ್‌ ಹೆಡ್‌ ಟ್ಯಾಂಕ್‌, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗುತ್ತದೆ. ಪ್ರತಿ ಮನೆಗೆ ಹೊಸ ನಳ (ನಲ್ಲಿ) ಸಂಪರ್ಕ ಕಲ್ಪಿಸಲು ತೀರ್ಮಾನಿಸಲಾಗಿದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಪರಿಶಿಷ್ಟ ಜಾತಿ ಸಮುದಾಯ ಹೆಚ್ಚಾಗಿರುವ ಬಡಾವಣೆಯ ಅಭಿವೃದ್ಧಿಗೆ ಸಮಾಜ ಕಲ್ಯಾಣ ಇಲಾಖೆ ಕೂಡ ಯೋಜನೆ ರೂಪಿಸುತ್ತಿದೆ. ವಸತಿ ರಹಿತರಿಗೆ ಮನೆ ಕಟ್ಟಿಸಿಕೊಡುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದೆ. ಬಯಲು ಬಹಿರ್ದೆಸೆ ಮುಕ್ತಗೊಳಿಸಲು ವೈಯಕ್ತಿಕ ಹಾಗೂ ಸಾಮೂಹಿಕ ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ವಿವರಿಸಿದರು.

ಚರಂಡಿಯಲ್ಲಿ ಕಾಲರಾ ಬ್ಯಾಕ್ಟೀರಿಯ

ಕವಾಡಿಗರಹಟ್ಟಿಯ ಚರಂಡಿಯಲ್ಲಿ ಹರಿಯುವ ಕೊಳಚೆ ನೀರಿನಲ್ಲಿಯೂ ವಿಬ್ರಿಯೊ ಕಾಲರಾ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಚರಂಡಿ ಮೂಲಕ ಬ್ಯಾಕ್ಟೀರಿಯಾ ಕುಡಿಯುವ ನೀರಿನ ಪೈಪ್‌ಲೈನ್‌ ಸೇರಿರುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್‌.ಜೆ ಮಾಹಿತಿ ನೀಡಿದರು.

ಕುಡಿಯುವ ನೀರು ಕಲುಷಿತಗೊಂಡಿದ್ದು ಹೇಗೆ ಎಂಬುದನ್ನು ಪರಿಶೀಲಿಸಿದ ತಜ್ಞರ ತಂಡ ಚರಂಡಿಯಲ್ಲಿ ಪೈಪ್‌ಲೈನ್‌ ಹೋಗಿರುವುದನ್ನು ಪತ್ತೆ ಮಾಡಿದೆ. ಇಲ್ಲಿ ನೀರು ಕಲುಷಿತ ಆಗಿರುವ ಸಾಧ್ಯತೆ ಹೆಚ್ಚಾಗಿದೆ. ಹಟ್ಟಿ ವ್ಯಾಪ್ತಿಯಲ್ಲಿರುವ ಕೊಳವೆ ಬಾವಿ ಕುಡಿಯಲು ಯೋಗ್ಯವಾಗಿಲ್ಲ ಎಂಬುದು ಪರೀಕ್ಷೆಯ ಬಳಿಕ ಖಚಿತವಾಗಿದೆ. ಇದರಲ್ಲಿ ಯಾವ ಬ್ಯಾಕ್ಟೀರಿಯಾ ಇರಬಹುದು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ತಜ್ಞರ ತಂಡದ ಸಲಹೆ ಮೇರೆಗೆ ಚರಂಡಿಯನ್ನು ಶುಚಿಗೊಳಿಸಲಾಗಿದೆ. ಹಟ್ಟಿಯ ಸುತ್ತ ಸ್ವಚ್ಛತೆ ಕಾಪಾಡಲಾಗುತ್ತಿದೆ. ಸುತ್ತಲಿನ ಬಡಾವಣೆಗಳಿಗೆ ಕಾಲರಾ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಸಮಗ್ರ ವರದಿಯನ್ನು ಸರ್ಕಾರಕ್ಕೆ ಎರಡು ದಿನಗಳಲ್ಲಿ ಸಲ್ಲಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಹಟ್ಟಿಗೆ ಮೂಲಸೌಲಭ್ಯ ಕಲ್ಪಿಸುವ ತುರ್ತು ಅಗತ್ಯವಿದ್ದು, ಟೆಂಡರ್‌ ಕರೆಯದೇ ಕಾಮಗಾರಿ ಕೈಗೆತ್ತಿಕೊಳ್ಳಲು ಸರ್ಕಾರ ಸೂಚನೆ ನೀಡಿದೆ. ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.
–ದಿವ್ಯ ಪ್ರಭು ಜಿ.ಆರ್‌.ಜೆ , ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT