ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳಲ್ಕೆರೆ | ದಿನಕ್ಕೆ ನಾಲ್ಕೇ ಕೊಡ ನೀರು !.. ನಮ್ಮ ಗೋಳು ಹೇಳತೀರದು…

ಬಿಗಡಾಯಿಸಿದ ನೀರಿನ ಸಮಸ್ಯೆ; ಟ್ಯಾಂಕರ್‌ ಮೂಲಕ ನೀರು ಪೂರೈಕೆ
ಸಾಂತೇನಹಳ್ಳಿ ಸಂದೇಶ್ ಗೌಡ
Published 14 ಏಪ್ರಿಲ್ 2024, 6:39 IST
Last Updated 14 ಏಪ್ರಿಲ್ 2024, 6:39 IST
ಅಕ್ಷರ ಗಾತ್ರ

ಹೊಳಲ್ಕೆರೆ: ‘ನಿತ್ಯ ಬಳಕೆಗೆ ನಾಲ್ಕೇ ಕೊಡ ನೀರು ಕೊಡುತ್ತಿದ್ದಾರೆ. ಟ್ಯಾಂಕರ್ ಮೂಲಕ ಕೆರೆ ನೀರು ವಿತರಿಸುತ್ತಿದ್ದು, ಅದೂ ಯಾವಾಗ ಬರುತ್ತದೋ ಗೊತ್ತಾಗಲ್ಲ. ಸ್ನಾನ ಮಾಡಲು, ಪಾತ್ರೆ ತೊಳೆಯಲು ಅದೇ ನೀರು ಬಳಸಬೇಕು. ನಮ್ಮ ಗೋಳು ಹೇಳತೀರದು…’

ತಾಲ್ಲೂಕಿನ ಬೊಮ್ಮನಕಟ್ಟೆ ನಿವಾಸಿ ಮಹಿಳೆಯರು ನೀರಿನ ಸಮಸ್ಯೆ ಬಗ್ಗೆ ಅಲವತ್ತುಕೊಂಡ ಪರಿ ಇದು.

‘ಹಿಂದೆಂದೂ ಇಂತಹ ಸ್ಥಿತಿ ಇರಲಿಲ್ಲ. ಕೊಳವೆಬಾವಿಗಳೆಲ್ಲ ಬತ್ತಿವೆ. ಕರೆಂಟ್ ಇದ್ದಾಗ ಕೊಳವೆ ಬಾವಿಯಿಂದ ಟ್ಯಾಂಕರ್‌ಗೆ ನೀರು ತುಂಬಿಸಿಕೊಂಡು ತರುತ್ತಾರೆ. ಕರೆಂಟ್ ಇಲ್ಲದಾಗ ಪಕ್ಕದ ಕೆರೆಯ ನೀರನ್ನು ತಂದು ಕೊಡುತ್ತಿದ್ದಾರೆ. ಒಂದು ಮನೆಗೆ ನಾಲ್ಕೈದು ಕೊಡ ನೀರು ಸಿಕ್ಕರೆ ಹೆಚ್ಚು. ಕೆರೆ ನೀರಿನ ಬದಲಿಗೆ ಕೊಳವೆ ಬಾವಿ ನೀರನ್ನು ಕೊಟ್ಟರೆ ಅನುಕೂಲ ಆಗುತ್ತದೆ. ಮಳೆ ಯಾವಾಗ ಬರುತ್ತದೋ ಎಂದು ಕಾಯುತ್ತಿದ್ದೇವೆ’ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.

ತಾಲ್ಲೂಕಿನ ತಾಳ್ಯ, ರಾಮಗಿರಿ, ಕಸಬಾ ಹೋಬಳಿಗಳ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇಂತಹ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಕೆಲವು ಕಡೆ 12 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ. ಸ್ಥಿತಿವಂತರು ಖಾಸಗಿ ಟ್ಯಾಂಕರ್ ಮೂಲಕ ನೀರು ತರಿಸಿಕೊಂಡು ಬಳಸುತ್ತಿದ್ದಾರೆ. ಗ್ರಾಮದ ಪಕ್ಕದಲ್ಲಿರುವ ತೋಟಗಳ ಕೊಳವೆ ಬಾವಿ ನೀರನ್ನೂ ಕೆಲವರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅಡಿಕೆ ತೋಟಗಳಿಗೆ ನೀರು ಕಡಿಮೆ ಆಗಿರುವುದರಿಂದ ತೋಟದ ಮಾಲೀಕರು ಜನರಿಗೆ ನೀರು ಕೊಡಲು ಹಿಂದೇಟು ಹಾಕುತ್ತಿದ್ದಾರೆ.

ಶಿವಪ್ರಕಾಶ್
ಶಿವಪ್ರಕಾಶ್

ಕೆಲವು ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳೂ ಕೆಟ್ಟು ಹೋಗಿವೆ. ಗುಡ್ಡದ ಸಾಂತೇನಹಳ್ಳಿಯಲ್ಲಿ ಸುಮಾರು ಆರು ತಿಂಗಳಿನಿಂದ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿದ್ದು, ಆವಿನಹಟ್ಟಿ, ತಿರುಲಾಪುರ, ಲೋಕದೊಳಲು ಗ್ರಾಮಗಳಿಗೆ ಹೋಗಿ ಕುಡಿಯುವ ನೀರು ತರುತ್ತಾರೆ. ಬೈಕ್ ಇಲ್ಲದವರು ನಲ್ಲಿ, ಟ್ಯಾಂಕರ್‌ನಲ್ಲಿ ಬರುವ ಕೊಳವೆ ಬಾವಿ ನೀರನ್ನೇ ಕುಡಿಯುವ ಪರಿಸ್ಥಿತಿ ಇದೆ.

ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಸಮರ್ಪಕವಾಗಿ ನಿಭಾಯಿಸುತ್ತಿದ್ದೇವೆ. ನೀರಿನ ಅಭಾವ ಇರುವ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದೇವೆ. ಈಗ ಮಳೆ ಆರಂಭವಾಗಿದ್ದು ನೀರಿನ ಸಮಸ್ಯೆ ಬಗೆಹರಿಯುವ ವಿಶ್ವಾಸ ಇದೆ.
ಶಿವಪ್ರಕಾಶ್ ತಾಲ್ಲೂಕು ಪಂಚಾಯಿತಿ ಇ.ಒ
ದಿನಕ್ಕೆ 4 ಕೊಡ ನೀರಿನಲ್ಲಿ ಜೀವನ ಮಾಡಲು ಆಗುವುದಿಲ್ಲ. ನಮ್ಮ ಊರಿಗೆ ಪ್ರತ್ಯೇಕ ಕೊಳವೆಬಾವಿ ಕೊರೆಯಿಸಿ ನೀರು ಕೊಟ್ಟರೆ ಅನುಕೂಲ ಆಗುತ್ತದೆ.
ಮೀನಾಕ್ಷಿ ಬೊಮ್ಮನಕಟ್ಟೆ ನಿವಾಸಿ
ಟ್ಯಾಂಕರ್ ನೀರು ಪಡೆಯುತ್ತಿರುವ ಗ್ರಾಮಗಳಿವು
ಕಾಲ್ಕೆರೆ ಕಾಲ್ಕೆರೆ ಲಂಬಾಣಿ ಹಟ್ಟಿ ದುಮ್ಮಿ ಗೊಲ್ಲರ ಹಟ್ಟಿ ಶಿರಾಪನಹಳ್ಳಿ ಆರ್.ಜಿ.ಕ್ಯಾಂಪ್ ಕುಮ್ಮಿನಘಟ್ಟ ಕೆಂಚಾಪುರ ಆರ್.ಡಿ.ಕಾವಲು ಕೊಳಾಳು ಚೌಡಗೊಂಡನ ಹಳ್ಳಿ ತಿರುಮಲಾಪುರ ವಿಶ್ವನಾಥನ ಹಳ್ಳಿ ಲೋಕದೊಳಲು ಬೊಮ್ಮನಕಟ್ಟೆ ಬೋರೇನಹಳ್ಳಿ ರಾಮೇನಹಳ್ಳಿ ನೆಲ್ಲಿಕಟ್ಟೆ ಜಯಂತಿ ನಗರ ಜೈಪುರ ಬಿದರಕೆರೆ ಗೊಲ್ಲರಹಟ್ಟಿ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT