ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ | ಪಾತಾಳಕ್ಕಿಳಿದ ಅಂತರ್ಜಲ; ಬರಿದಾದ ಜಲ ಮೂಲ

ಅಬ್ಬೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನೀರಿಗಾಗಿ ಹಾಹಾಕಾರ
ವಿ. ಧನಂಜಯ
Published 11 ಮೇ 2024, 6:38 IST
Last Updated 11 ಮೇ 2024, 6:38 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಬಿಸಿಲಿನ ಝಳಕ್ಕೆ ಹೋಬಳಿ ನಲುಗಿಹೋಗಿದ್ದು, ಗಡಿ ಪ್ರದೇಶವಾಗಿರುವ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲೂ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ.

ನಾಯಕನಹಟ್ಟಿ ಹೋಬಳಿ ಎಂದಾಕ್ಷಣ ನೆನಪಾಗುವುದು ಭೀಕರ ಬಿಸಿಲು ಮತ್ತು ಬರ ಪರಿಸ್ಥಿತಿ. ಹಿಂದಿನ 25 ವರ್ಷಗಳಲ್ಲಿ 20 ವರ್ಷಕ್ಕೂ ಹೆಚ್ಚು ಕಾಲ ಬರವನ್ನೇ ಹಾಸಿ ಹೊದ್ದುಕೊಂಡಿದೆ. ಹೋಬಳಿಯು ಭೌಗೋಳಿಕವಾಗಿ ಒಣಹವೆ ಮತ್ತು ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡಿದೆ.

ಈ ಭಾಗದ ರೈತರು ವಾರ್ಷಿಕ ಬೀಳುವ ಅತ್ಯಲ್ಪ ಮಳೆಯಲ್ಲೇ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಇಲ್ಲಿ ನೀರಿಗಾಗಿ ಅಣೆಕಟ್ಟುಗಳಾಗಲಿ, ಕಾಲುವೆಗಳಾಗಲಿ ಇಲ್ಲ. ಕೊಳವೆಬಾವಿಯಲ್ಲಿ ಸಿಗುವ ನೀರಿನಿಂದಲೇ ಈ ಭಾಗದಲ್ಲಿ ನೀರಾವರಿ ಕೃಷಿ ಸಾಗುತ್ತಿದೆ. ಪ್ರತಿವರ್ಷ ಬೇಸಿಗೆ ಬಂತೆಂದರೆ ಈ ಭಾಗದ ಜನ, ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿಗೆ ಹಾಹಾಕಾರ ಎದುರಾಗುತ್ತದೆ. ಎತ್ತ ನೋಡಿದರೂ ಬಯಲು, ಹೊಲಗಳೆಲ್ಲ ಬೀಳು ಬಿದ್ದಿರುವುದು ಕಂಡುಬರುತ್ತದೆ. ಕುರಿಗಾಹಿಗಳು ಮೇವು ಅರಸಿ ತಮ್ಮ ಕುರಿಗಳೊಂದಿಗೆ ವಲಸೆ ಹೋಗುವುದು ಕಾಯಂ ಆಗಿದೆ.

ಕೆರೆಕಟ್ಟೆಗಳು ಖಾಲಿ ಖಾಲಿ:

ಹೋಬಳಿಯ ಸಾರ್ವಜನಿಕರಿಗೆ ಕುಡಿಯುವ ನೀರು ಮತ್ತು ಕೃಷಿಗೆ ಸಹಕಾರಿಯಾಗಿರುವ ಜಲಮೂಲಗಳೆಂದರೆ ಕೆರೆಗಳು. ಪ್ರತಿ ಗ್ರಾಮಗಳಲ್ಲೂ ಕೆರೆ ಕಟ್ಟೆಗಳಿವೆ. ಕಳೆದ ವರ್ಷ ಮಳೆಯ ಅಭಾವದಿಂದ ಕೆರೆ–ಕಟ್ಟೆಗಳಿಗೆ ಒಂದು ಹನಿ ನೀರೂ ಸೇರಿರಲಿಲ್ಲ. ಇದರಿಂದ ಅವು ಬರಿದಾಗಿದ್ದವು. ಕೊಳವೆಬಾವಿಗಳು ಬತ್ತಿ ಹೋಗುತ್ತಿವೆ. 

ಬತ್ತಿದ ಕೊಳವೆಬಾವಿಗಳು:

ಅಬ್ಬೇನಹಳ್ಳಿ ಗ್ರಾಮಪಂಚಾಯಿತಿಯ ಚೌಳಕೆರೆ ಗ್ರಾಮವು 205 ಮನೆಗಳನ್ನು ಹೊಂದಿದೆ. 765 ರಿಂದ 800 ಜನಸಂಖ್ಯೆ ಇದೆ. ಈ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಇರುವುದು ಒಂದೇ ಕೊಳವೆಬಾವಿ. ಒಂದು ತಿಂಗಳಿನಿಂದ ಕೊಳವೆಬಾವಿಯು ಬತ್ತಿಹೋಗಿದ್ದು, ಗ್ರಾಮದಲ್ಲಿ ನೀರಿನ ಹಾಹಾಕಾರ ಉಂಟಾಗಿದೆ. ಗ್ರಾಮದ ಒಂದು ಕಿ.ಮೀ. ದೂರದಲ್ಲಿರುವ ರೈತರ ಜಮೀನುಗಳಲ್ಲಿ ಸಿಗುವ ಅತ್ಯಲ್ಪ ನೀರನ್ನೇ ಗ್ರಾಮಸ್ಥರು ಅವಲಂಬಿಸಿದ್ದಾರೆ. ಅಬ್ಬೇನಹಳ್ಳಿ, ಕೊರಡಿಹಟ್ಟಿ, ಮಲ್ಲೇಬೋರನಹಟ್ಟಿ, ಮುಸ್ಟಲಗುಮ್ಮಿ, ತೊರೆಕೋಲಮ್ಮನಹಳ್ಳಿ, ಗುಂತಕೋಮ್ಮನಹಳ್ಳಿ ಗ್ರಾಮಗಳ ಕೊಳವೆಬಾವಿಗಳು ಬತ್ತಿವೆ. 

ಟ್ಯಾಂಕರ್ ನೀರಿಗೆ ಮೊರೆ:

ಕುಡಿಯುವ ನೀರಿನ ಸರಬರಾಜಿಗಾಗಿ ಗ್ರಾಮ ಪಂಚಾಯಿತಿ 4 ಟ್ಯಾಂಕರ್‌ಗಳ ಮೂಲಕ ನೀರು ಒದಗಿಸುತ್ತಿದೆ. ಅಬ್ಬೇನಹಳ್ಳಿ, ಮುಸ್ಟಲಗುಮ್ಮಿ ಗ್ರಾಮಗಳ ಅನತಿ ದೂರದಲ್ಲೇ ಜಿನಗಿಹಳ್ಳ ಹಾದುಹೋಗಿದ್ದು, ಅಲ್ಲಿಯೂ ಕೊಳವೆಬಾವಿಗಳನ್ನು ಕೊರೆಯಿಸಲಾಗಿದೆ. ಕಳೆದ ವರ್ಷ ಮಳೆಯಿಲ್ಲದೆ ಜಿನಗಿಹಳ್ಳದಲ್ಲಿ ನೀರು ಹರಿಯದ ಪರಿಣಾಮ ಅವು ವಿಫಲವಾಗಿವೆ. ಸ್ಥಳೀಯ ಆಡಳಿತ ಮತ್ತು ಶಾಸಕರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ನೀರಿನ ವ್ಯವಸ್ಥೆ ಕಲ್ಪಿಸಲು ಹರಸಾಹಸ ಪಡುತ್ತಿದ್ದಾರೆ. ಆದರೆ ಈ ಭಾಗದಲ್ಲಿ ಎಲ್ಲಿಯೂ ನೀರಿನ ಲಭ್ಯತೆ ಇಲ್ಲದಂತಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಇನ್ನೂ 10 ರಿಂದ 15 ದಿನಗಳಲ್ಲಿ ಹೋಬಳಿಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಲಿದೆ.

ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿಯಿಂದ ಕೊಳವೆಬಾವಿ ಕೊರೆಸುತ್ತಿರುವುದು
ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿಯಿಂದ ಕೊಳವೆಬಾವಿ ಕೊರೆಸುತ್ತಿರುವುದು
ಒಂದು ತಿಂಗಳಿನಿಂದ ಚೌಳಕೆರೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇರುವ ಒಂದು ಕೊಳವೆಬಾವಿಯಲ್ಲಿ ನೀರಿಲ್ಲ. ತುರ್ತಾಗಿ ಗ್ರಾಮಕ್ಕೆ ಟ್ಯಾಂಕರ್ ನೀರು ಅಥವಾ ‌ ಕೊಳವೆಬಾವಿ ಕೊರೆಸಲು ಅಧಿಕಾರಿಗಳು ಮುಂದಾಗಬೇಕು.
ಸಣ್ಣಪಾಲಯ್ಯ ಅಧ್ಯಕ್ಷ ಚಳ್ಳಕೆರೆ ತಾಲ್ಲೂಕು ಗ್ರಾ.ಪಂ. ಸದಸ್ಯರ ಒಕ್ಕೂಟ
ಬೇಸಿಗೆ ಬಂತೆಂದರೆ ಅಬ್ಬೇನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗುತ್ತದೆ. ಹಾಗಾಗಿ ಜನಪ್ರತಿನಿಧಿಗಳು ಈ ಭಾಗಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಗಳನ್ನು ಅತಿ ಜರೂರಾಗಿ ತರಬೇಕು.
ಸುಪುತ್ರಬಾಬು ಅಬ್ಬೇನಹಳ್ಳಿ ಗ್ರಾಮಸ್ಥ

ನನೆಗುದಿಗೆ ಬಿದ್ದ ಶಾಶ್ವತ ಕುಡಿಯುವ ನೀರಿನ ಯೋಜನೆ ಭೀಕರ ಬರಪರಿಸ್ಥಿತಿಗೆ ಸಿಲುಕುವ ಮೊಳಕಾಲ್ಮುರು ಮತ್ತು ಚಳ್ಳಕೆರೆ ತಾಲ್ಲೂಕುಗಳ ಗ್ರಾಮಗಳಿಗೆ ಶಾಶ್ವತವಾಗಿ ಕುಡಿಯುವ ನೀರು ಒದಗಿಸಲು ತುಂಗಭದ್ರಾ ಹಿನ್ನೀರಿನಿಂದ ನೀರು ಒದಗಿಸುವ ಯೋಜನೆ ಅರ್ಧಕ್ಕೆ ನಿಂತಿದೆ. ಪ್ರತಿ ಗ್ರಾಮಗಳಲ್ಲೂ ನೀರಿನ ಸರಬರಾಜಿಗಾಗಿ ಓವರ್‌ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸಿ ಪೈಪ್‌ಲೈನ್‌ಗಳನ್ನು ಅಳವಡಿಸಲಾಗಿದೆ. ಜತೆಗೆ ಜಲಜೀವನ್ ಮಿಷನ್ ಯೋಜನೆಯಿಂದ ಮನೆ ಮನೆಗೂ ನೀರು ಎಂದು ನಲ್ಲಿಗಳ ಸಂಪರ್ಕ ಕಲ್ಪಿಸಿದರೂ 2 ವರ್ಷಗಳಿಂದ ಆ ನಲ್ಲಿಗಳಲ್ಲಿ ನೀರಿನ ಸರಬರಾಜು ಆಗಿಲ್ಲ. ಭದ್ರಾ ಮೇಲ್ದಂಡೆ ತುಂಗಭದ್ರಾ ಹಿನ್ನೀರು ಜಲಜೀವನ್ ಮಿಷನ್‌ನಂತಹ ಬೃಹತ್ ಯೋಜನೆಗಳು ನನೆಗುದಿಗೆ ಬಿದ್ದ ಪರಿಣಾಮ ಬರಪೀಡಿತ ಪ್ರದೇಶವಾದ ನಾಯಕನಹಟ್ಟಿ ಹೋಬಳಿಗೆ ಶಾಶ್ವತ ನೀರಿನ ವ್ಯವಸ್ಥೆಯಿಲ್ಲದೆ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT