ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡವಿಗೆರೆ: ಖಾಸಗಿಯವರ ಕೊಳವೆಬಾವಿಯೇ ಆಸರೆ

ಶ್ರೀರಾಂಪುರ ಹೋಬಳಿ; ಕುಡಿಯುವ ನೀರಿನ ಅಭಾವ, ಹಾಹಾಕಾರ
Published 16 ಏಪ್ರಿಲ್ 2024, 5:41 IST
Last Updated 16 ಏಪ್ರಿಲ್ 2024, 5:41 IST
ಅಕ್ಷರ ಗಾತ್ರ

ಶ್ರೀರಾಂಪುರ: ಕುಡಿಯುವ ನೀರಿಗೆ ಆಸರೆಯಾಗಿದ್ದ ಎರಡು ಕೊಳವೆಬಾವಿಗಳಲ್ಲಿ ಈಗಾಗಲೇ ಒಂದು ಕೊಳವೆಬಾವಿ ಬತ್ತಿಹೋಗಿದೆ. ಒಂದು ಕೊಳವೆಬಾವಿಯಿಂದ ದೊರೆಯುತ್ತಿರುವ ನೀರು ಸಾಲದೆ ಖಾಸಗಿಯವರ ಕೊಳವೆಬಾವಿ ಆಶ್ರಯಿಸುವಂತಾಗಿದೆ.

ಇದು ಹೋಬಳಿಯ ಹೆಗ್ಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡವಿಗೆರೆ ಗ್ರಾಮಸ್ಥರ ಸಮಸ್ಯೆಗೆ ಹಿಡಿದ ಕನ್ನಡಿ. ಗ್ರಾಮದಲ್ಲಿ 250ಕ್ಕೂ ಹೆಚ್ಚು ಕುಟುಂಬಗಳು ಇದ್ದು, ದಿನಕ್ಕೆ 2 ಗಂಟೆ ಮಾತ್ರ ನೀರು ಬಿಡಲಾಗುತ್ತಿದೆ.

‘ಒಂದು ಕೊಳವೆಬಾವಿಯಲ್ಲಿ ಅಲ್ಪಸ್ವಲ್ಪ ನೀರು ಬರುತ್ತಿದೆ. ಅದೂ ನಿಂತು ಹೋದರೆ, ಗ್ರಾಮದಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ಇನ್ನೂ ಬಿಗಡಾಯಿಸಲಿದೆ. ಇನ್ನೊಂದು ಕೊಳವೆಬಾವಿ ಕೊರೆಯಿಸಲು ಪಾಯಿಂಟ್ ನಿಗದಿಪಡಿಸಲಾಗಿದೆ. ಆದಷ್ಟು ಬೇಗ ಕೊಳವೆಬಾವಿ ಕೊರೆಯಿಸಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮದ ಕುಮಾರ್ ಮನವಿ ಮಾಡುತ್ತಾರೆ.

ಗ್ರಾಮದಲ್ಲಿ ಇನ್ನೊಂದು ಕೊಳವೆಬಾವಿ ಕೊರೆಯಿಸುವ ಅವಶ್ಯಕತೆ ಇದೆ. ಸಂಬಂಧಪಟ್ಟವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು.
ಕುಮಾರ್, ಗ್ರಾಮಸ್ಥ ಕಡವಿಗೆರೆ

‘ಗ್ರಾಮಕ್ಕೆ ಕೇವಲ 1 ಕಿ.ಮೀ. ದೂರದಲ್ಲಿರುವ ಪ್ರಸಿದ್ಧ ಉದ್ಭವ ಗಂಗೆ ‘ಕಡವಿಗೆರೆ ವಜ್ರ’ದಲ್ಲಿ ಎಷ್ಟೇ ಬರಗಾಲ ಬಂದರೂ ನೀರಿನ ಒರತೆ ಕಡಿಮೆಯಾಗುವುದಿಲ್ಲ. ಆದರೆ, ನಮ್ಮ ಗ್ರಾಮಕ್ಕೆ ನೀರಿನ ಅಭಾವ ಉಂಟಾಗುತ್ತಿದೆ. ಕೊಳವೆಬಾವಿಗಳಲ್ಲಿ ಕಡಿಮೆ ನೀರು ಬರುತ್ತಿದ್ದು, ಎಲ್ಲ ಬೀದಿಗಳಿಗೆ ನೀರು ಪೂರೈಸಲು ನೀರುಗಂಟಿಗಳು ಪರದಾಡುವಂತಾಗಿದೆ’ ಎನ್ನುತ್ತಾರೆ ಗ್ರಾಮದ ಧರಣಿಕುಮಾರ್.

ಒಂದೂವರೆ ವರ್ಷದ ಹಿಂದೆ ಹೋಬಳಿಯ ಬಹುತೇಕ ಎಲ್ಲ ಕೆರೆಗಳು ತುಂಬಿ ಕೋಡಿ ಹರಿದಿದ್ದವು. ಆದ್ದರಿಂದ ಇಲ್ಲಿಯವರೆಗೆ ಹೋಬಳಿಯ ಹಲವೆಡೆ ನೀರಿನ ಅಭಾವ ಅಷ್ಟಾಗಿ ಕಂಡುಬಂದಿರಲಿಲ್ಲ. ಆದರೆ, ಈಗ ತಾಪಮಾನ ಏರಿಕೆ, ಹೆಚ್ಚಿದ ನೀರಿನ ಬೇಡಿಕೆಯಿಂದಾಗಿ ಹಲವೆಡೆ ಕೊಳವೆಬಾವಿಗಳು ಹಾಗೂ ಕೆರೆಗಳಲ್ಲಿ ನೀರು ಬತ್ತಲಾರಂಭಿಸಿದೆ.

ಸದ್ಯಕ್ಕೆ ಖಾಸಗಿ ಕೊಳವೆಬಾವಿ ಸೇರಿ ಎರಡು ಕೊಳವೆಬಾವಿಗಳಿಂದ ಕಡವಿಗೆರೆ ಗ್ರಾಮಕ್ಕೆ ನೀರು ಪೂರೈಸಲಾಗುತ್ತಿದೆ. ಜೆ.ಜೆ.ಎಂ. ಯೋಜನೆಯಡಿ ಶೀಘ್ರ ಕೊಳವೆಬಾವಿ ಕೊರೆಯಿಸಿ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು.
ರಂಗಸ್ವಾಮಿ, ಪಿಡಿಒ, ಹೆಗ್ಗೆರೆ

‘ವರ್ಷದ ಹಿಂದೆ 150 ತೆಂಗಿನ ಸಸಿಗಳನ್ನು ನೆಡಲಾಗಿತ್ತು. ಎರಡು ತಿಂಗಳಿನಿಂದ ಕೊಳವೆಬಾವಿಯಲ್ಲಿ ನೀರು ನಿಂತು ಹೋಗಿದೆ. ತೆಂಗಿನ ಸಸಿಗಳು ಚಿಕ್ಕದಾಗಿರುವುದರಿಂದ ನೀರಿಲ್ಲದೆ ಒಣಗಿ ಹೋಗುತ್ತಿವೆ. ಅವುಗಳನ್ನು ಉಳಿಸಿಕೊಳ್ಳಲು 15 ದಿನಗಳಿಗೊಮ್ಮೆ ಟ್ಯಾಂಕರ್‌ ಮೂಲಕ ನೀರು ಹಾಯಿಸುತ್ತಿದ್ದೇನೆ. ಒಂದು ಟ್ಯಾಕರ್‌ಗೆ ₹ 1,300ರಿಂದ ₹ 1,500 ತೆರಬೇಕು’ ಎಂದು ಸಂಕಷ್ಟ ತೋಡಿಕೊಂಡರು ದಳವಾಯಿಕಟ್ಟೆ ಗ್ರಾಮದ ರೈತ ಜಗದೀಶ್.

ನೀರುಗಂಟಿಗಳಿಗೆ ಹೆಚ್ಚಿದ ಕೆಲಸದೊತ್ತಡ

ಹೋಬಳಿಯ ಬಹುತೇಕ ಎಲ್ಲ ಗ್ರಾಮಗಳ ಕೊಳವೆಬಾವಿಗಳಲ್ಲಿ ನೀರಿನ ಒರತೆ ಕಡಿಮೆಯಾಗಿದೆ. ನಿರಂತರವಾಗಿ ಮೋಟಾರ್ ಪಂಪ್‌ ಓಡಿಸುವುದರಿಂದ ಪಂಪ್‌ಗಳು ಸುಡುವುದು ಸ್ಟಾರ್ಟರ್ ಕೆಡುವುದು ಸಾಮಾನ್ಯವಾಗಿದೆ. ಇದರಿಂದ ಸಮರ್ಪಕವಾಗಿ ನೀರು ಪೂರೈಸಲು ನೀರುಗಂಟಿಗಳಿಗೆ ಸಾಧ್ಯವಾಗುತ್ತಿಲ್ಲ. ಓವರ್‌ಹೆಡ್ ಟ್ಯಾಂಕ್‌ಗಳಿಗೆ ನೀರು ಏರುವುದಿಲ್ಲ. ಕೆಲವೆಡೆ ರಾತ್ರಿ ವೇಳೆ ಮಿನಿ ಟ್ಯಾಂಕ್‌ಗಳನ್ನು ತುಂಬಿಸಿ ಹಗಲಿನಲ್ಲಿ ಬೀದಿ ನಲ್ಲಿಗಳಿಗೆ ನೀರು ಪೂರೈಸಬೇಕಾಗುತ್ತದೆ. ಇದರಿಂದ ನೀರುಗಂಟಿಗಳು ಹೈರಾಣಾಗಿದ್ದಾರೆ.

ಶ್ರಿರಾಂಪುರ ಹೋಬಳಿ ಕಡವಿಗೆರೆ ಗ್ರಾಮದಲ್ಲಿ ನೀರಿಗಾಗಿ ಸರದಿ ಸಾಲಿನಲ್ಲಿ ನಿಂತಿರುವ ಮಹಿಳೆಯರು
ಶ್ರಿರಾಂಪುರ ಹೋಬಳಿ ಕಡವಿಗೆರೆ ಗ್ರಾಮದಲ್ಲಿ ನೀರಿಗಾಗಿ ಸರದಿ ಸಾಲಿನಲ್ಲಿ ನಿಂತಿರುವ ಮಹಿಳೆಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT