ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಧರ್ಮಪುರ: ಕೆರೆ ತುಂಬಿಸಲಿದೆ ವೇದಾವತಿ ನದಿ ನೀರು

ಭರದಿಂದ ಸಾಗಿದ ಯೋಜನೆಯ ಕಾಮಗಾರಿ; ಶತಮಾನದ ಬೇಡಿಕೆ ಈಡೇರುವ ಹೊತ್ತು
Published 21 ಮೇ 2024, 6:21 IST
Last Updated 21 ಮೇ 2024, 6:21 IST
ಅಕ್ಷರ ಗಾತ್ರ

ಧರ್ಮಪುರ: ಸಮೀಪದ ಹೊಸಹಳ್ಳಿ ಬಳಿ ವೇದಾವತಿ ನದಿಯಿಂದ ಧರ್ಮಪುರ ಕೆರೆಗೆ ನೀರು ಹರಿಸುವ ಯೋಜನೆಯ ಕಾಮಗಾರಿ ಭರದಿಂದ ಸಾಗಿ‌ದೆ. ಈ ಭಾಗದ ಶತಮಾನದ ಬೇಡಿಕೆ ಈಡೇರುತ್ತಿರುವುದರಿಂದ ಸಹಜವಾಗಿಯೇ ಜನರಲ್ಲಿ ಹರ್ಷ ಉಂಟಾಗಿದೆ.

ನಿತ್ಯ ಆರೇಳು ಜೆಸಿಬಿ ಮತ್ತು ಹಿಟ್ಯಾಚಿ ಯಂತ್ರಗಳ ಮೂಲಕ ಗುಂಡಿ ಅಗೆಯುವ ಕೆಲಸ ಹಗಲು– ರಾತ್ರಿ ನಡೆಯುತ್ತಿದೆ. ಮೇ ಅಂತ್ಯದ ವೇಳೆಗೆ ಕಾಮಗಾರಿ ಮುಗಿದು ಜೂನ್ ತಿಂಗಳಿನಲ್ಲಿ ನೀರು ಹರಿಯಬಹುದು ಎಂಬ ನಿರೀಕ್ಷೆ ಇದೆ.

ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಧರ್ಮಪುರ ಏತ ನೀರಾವರಿ ಯೋಜನೆಗೆ ₹ 90 ಕೋಟಿ ಅನುದಾನ ಮಂಜೂರಾಗಿತ್ತು. ಹೋಬಳಿಯ ಗೂಳ್ಯ, ಅಬ್ಬಿನಹೊಳೆ, ಮುಂಗುಸುವಳ್ಳಿ, ಈಶ್ವರಗೆರೆ, ಸೂಗೂರು, ಶ್ರವಣಗೆರೆ, ಅಜ್ಜಿಕಟ್ಟೆ, ಧರ್ಮಪುರ ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗೆ 2022ರ ಜೂನ್‌ನಲ್ಲಿ, ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದ್ದರು.

ಮೊದಲ ಹಂತದ ಕಾಮಗಾರಿಗೆ ₹ 40 ಕೋಟಿ ಮೀಸಲಿಟ್ಟಿದ್ದು, ಪಂಪ್‌ಹೌಸ್, 1.5 ಕಿ.ಮೀ. ರೈಸಿಂಗ್ ಮೇನ್, ಜಾಕ್ವೆಲ್, ಪವರ್‌ ಸ್ಟೇಷನ್, 900 ಎಚ್‌.ಪಿ ಸಾಮರ್ಥ್ಯದ 4 ಮೋಟರ್ ಪಂಪ್ ಅಳವಡಿಸಲಾಗಿದೆ.

2ನೇ ಹಂತದ ಕಾಮಗಾರಿಗೆ ₹ 50 ಕೋಟಿ ಅನುದಾನ ಬಿಡುಗಡೆಯಾಗಿದ್ದು, ರೈಸಿಂಗ್‌ ಮೇನ್, ಕೆರೆಗಳಿಗೆ ಅಗತ್ಯ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಬಹುತೇಕ ಮುಗಿದಿದೆ. 15 ದಿನಗಳಿಂದ ಕಾಮಗಾರಿ ಭರದಿಂದ ಸಾಗಿದ್ದು, ಮೇ ಅಂತ್ಯಕ್ಕೆ ಕಾಮಗಾರಿ ಮುಗಿಯಲಿದೆ ಎಂದು ಎಂಜಿನಿಯರ್ ರಾಜಶೇಖರ್ ತಿಳಿಸಿದರು.

ಈಗಾಗಲೇ ಅಬ್ಬಿನಹೊಳೆ, ಈಶ್ವರಗೆರೆ, ಗೂಳ್ಯ, ಮುಂಗುಸುವಳ್ಳಿ, ಸೂಗೂರು ಕೆರೆಗಳಿಗೆ ನೀರು ಹರಿಸುವ ಕಾಮಗಾರಿ ಮುಗಿದಿದ್ದು, ಈಗಾಗಲೇ ಈ ಕೆರೆಗಳಿಗೆ ಪ್ರಯೋಗಾರ್ಥ ನೀರು ಹರಿಸಲಾಗಿದೆ. ಉಳಿದಂತೆ ಧರ್ಮಪುರ, ಶ್ರವಣಗೆರೆ ಮತ್ತು ಅಜ್ಜಿಕಟ್ಟೆ ಕೆರೆಗಳ ಕಾಮಗಾರಿ ಕೇವಲ 2 ಕಿ.ಮೀ. ಮಾತ್ರ ಬಾಕಿ ಇದ್ದು, ಜೂನ್ ತಿಂಗಳಲ್ಲಿ ಐತಿಹಾಸಿಕ ಧರ್ಮಪುರ ಕೆರೆ ಒಳಗೊಂಡಂತೆ ಹೋಬಳಿಯ 8 ಕೆರೆಗಳಿಗೂ ನೀರು ಹರಿಯಲಿದೆ ಎಂದು ಸಹಾಯಕ ಎಂಜಿನಿಯರ್‌ ಜಿ.ಭೀಮರಾಜ್‌ ತಿಳಿಸಿದರು.

ಶತಮಾನದ ಕನಸು ನನಸು:

1919ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತದ ಅವಧಿಯಲ್ಲಿ ಧರ್ಮಪುರ ಕೆರೆಗೆ ಪೂರಕ ನಾಲೆ ಕಲ್ಪಿಸಲು ದಿವಾನರು ಪ್ರಸ್ತಾವನೆ ಸಲ್ಲಿಸಿದ್ದರು. ಸ್ವಾತಂತ್ರ್ಯದ ನಂತರ ಸರ್ಕಾರಗಳು ಆಶ್ವಾಸನೆ ನೀಡುತ್ತ ಬಂದಿದ್ದವು. ಇತ್ತ ರೈತರ ಹೋರಾಟವೂ ನಿರಂತರವಾಗಿ ಮುಂದುವರಿದಿತ್ತು. ಧರ್ಮಪುರ ಹೋಬಳಿಯ ರೈತರು 200 ದಿನಗಳವರೆಗೆ ಸರದಿಯ ಮೇಲೆ ನಾಡಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದ್ದರು. ಆದರೂ, ಕೆರೆ ತುಂಬಿಸುವ ಕೆಲಸ ಮರೀಚಿಕೆಯಾಗಿಯೇ ಉಳಿದಿತ್ತು.

‘ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಬದ್ಧತೆಯಿಂದಾಗಿ ವರ ಶ್ರಮದಿಂದಾಗಿ ನಮ್ಮೆಲ್ಲರ ಕನಸು ಸಾಕಾರಗೊಂಡಿದೆ’ ಎಂದು ಹರಿಯಬ್ಬೆಯ ರೈತ ಲೋಕೇಶಪ್ಪ ಹೇಳಿದರು.

ಧರ್ಮಪುರ ಕೆರೆ ಸೇರಿದಂತೆ ಹೋಬಳಿಯ ಎಂಟು ಕೆರೆಗಳಿಗೆ ನೀರು ಹರಿಸುವ ಕಾಮಗಾರಿ ಬೇಗ ಮುಗಿದರೆ ತೋಟಗಾರಿಕಾ ಬೆಳೆ ಉಳಿಸಿಕೊಳ್ಳಲು ಅನುಕೂಲವಾಗಲಿದೆ ಎಂದೂ ಅವರು ತಿಳಿಸಿದರು.

ಕಳೆದ ವರ್ಷ ಸಮರ್ಪಕವಾಗಿ ಮಳೆ ಸುರಿಯದ್ದರಿಂದ ಕೊಳವೆಬಾವಿಗಳು ಕೈಕೊಟ್ಟಿವೆ. ಅಡಿಕೆ ಗಿಡಗಳು ಒಣಗುತ್ತಿದ್ದು, ರೈತರ ಬದುಕು ಮೂರಾಬಟ್ಟೆಯಾಗಿದೆ. ತಕ್ಷಣವೇ ಹೋಬಳಿಯ ಕೆರೆಗಳಿಗೆ ನೀರುಣಿಸಿದರೆ ಕೊಳವೆಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗಲಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಕೆರೆಗಳಿಗೆ ನೀರು ಹರಿಸುವ ಕಾಮಗಾರಿ ಮೇ ತಿಂಗಳ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ನೀತಿ ಸಂಹಿತೆ ಹಿಂತೆಗೆದುಕೊಂಡ ತಕ್ಷಣ 8 ಕೆರೆಗಳಿಗೆ ನೀರುಣಿಸುವ ಕೆಲಸಕ್ಕೆ ಹಸಿರು ನಿಶಾನೆ ದೊರೆಯಲಿದೆ.

-ಡಿ. ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT