ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಯುವತಿಗೆ ಡ್ರಾಪ್ ನೀಡಿದ ಯುವಕನ ಮೇಲೆ ಹಲ್ಲೆ

ಹಲ್ಲೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ, ದೂರು- ಪ್ರತಿದೂರು ದಾಖಲು
Published 19 ಏಪ್ರಿಲ್ 2024, 3:34 IST
Last Updated 19 ಏಪ್ರಿಲ್ 2024, 3:34 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಅನ್ಯ ಕೋಮಿನ ಯುವತಿಗೆ ಡ್ರಾಪ್ ನೀಡಿದ ಯುವಕನ ಮೇಲೆ ಗುಂಪೊಂದು ಗುರುವಾರ ರಾತ್ರಿ ಹಲ್ಲೆ ನಡೆಸಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಸಂಘಪರಿವಾರದ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಹಲ್ಲೆ ಪ್ರಕರಣದಿಂದ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಈರಜ್ಜನಹಟ್ಟಿ ಗ್ರಾಮದ ಯುವಕ ಉಮೇಶ್ ಎಂಬಾತನನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಡ್ರಾಪ್ ನೀಡಿದ ಯುವಕನ ವಿರುದ್ಧ ಯುವತಿ ಕೋಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಗರದ ಲಕ್ಷ್ಮಿ ಬಜಾರ್ ನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ-ಯುವತಿ ಗುರುವಾರ ರಾತ್ರಿ ಮನೆಗೆ ಹೊರಟಿದ್ದರು. ಮಾರ್ಗ ಮಧ್ಯದಲ್ಲಿ ಡ್ರಾಪ್ ನೀಡುವುದಾಗಿ ಯುವತಿಯನ್ನು ಉಮೇಶ್ ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡಿದ್ದರು. ಹೊಳಲ್ಕೆರೆ ಮಾರ್ಗದಲ್ಲಿ ಸಾಗುತ್ತಿದ್ದಾಗ ದ್ವಿಚಕ್ರ ವಾಹನ ಅಡ್ಡಗಟ್ಟಿದ ಗುಂಪೊಂದು ಹಲ್ಲೆ ನಡೆಸಿದೆ. ಗಾಯಗೊಂಡಿದ್ದ ಯುವಕನನ್ನು ಸ್ಥಳೀಯರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಹಲ್ಲೆಗೆ ಸಂಬಂಧಿಸಿದಂತೆ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಷಯ ತಿಳಿದು ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ತಡರಾತ್ರಿ ಜಮಾಯಿಸಿದ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿದ ಗುಂಪನ್ನು ಕೂಡಲೇ ಬಂಧಿಸಬೇಕು ಎಂದು ಪ್ರತಿಭಟನೆ ನಡೆಸಿದರು. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪುತ್ರ ಉಮೇಶ್ ಕಾರಜೋಳ ಆಸ್ಪತ್ರೆಗೆ ಭೇಟಿ ನೀಡಿ ಯುವಕನ ಆರೋಗ್ಯ ವಿಚಾರಿಸಿದರು. ಬಿಗುವಿನ ವಾತಾವರಣ ನಿರ್ಮಾಣವಾಗಿದ್ದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರತಿ ದೂರು ದಾಖಲು:

ಗುರುವಾರ ತಡರಾತ್ರಿ ಕೋಟೆ ಪೊಲೀಸ್ ಠಾಣೆಗೆ ಬಂದ ಚೇಳುಗುಡ್ಡದ ಯುವತಿ ಉಮೇಶ್ ವಿರುದ್ಧ ಕಿರುಕುಳದ ದೂರು ದಾಖಲಿಸಿದ್ದಾರೆ.

ಗುರುವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ಉಮೇಶ್ ದ್ವಿಚಕ್ರ ವಾಹನದಲ್ಲಿ ಬಂದರು. ಕನಕ ವೃತ್ತದ ವರೆಗೆ ಡ್ರಾಪ್ ನೀಡುವುದಾಗಿ ಹೇಳಿ ಬೈಕ್ ಹತ್ತಿಸಿಕೊಂಡರು. ಆದರೆ, ಕನಕ ವೃತ್ತದಲ್ಲಿ ಬೈಕ್ ನಿಲ್ಲಿಸದೇ ಅಸಭ್ಯವಾಗಿ ವರ್ತಿಸಿದರು. ಗಾಬರಿಗೊಂಡು ಕೂಗಿಕೊಂಡಾಗ ಸಮೀಪದಲ್ಲಿದ್ದ ಅಣ್ಣನ ಸ್ನೇಹಿತರು ನೆರವಿಗೆ ಬಂದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT