ಸೋಮವಾರ, ಫೆಬ್ರವರಿ 24, 2020
19 °C
ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳ ಪ್ರತಿಧ್ವನಿ

ಹಾಸ್ಟೆಲ್‌ ಅಧ್ವಾನ ಸರಿಪಡಿಸಲು ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆ ವ್ಯಾಪ್ತಿಯಲ್ಲಿರುವ ಹಾಸ್ಟೆಲ್‌ಗಳಲ್ಲಿನ ಸೌಲಭ್ಯ ಕೊರತೆ ಹಾಗೂ ಭ್ರಷ್ಟಾಚಾರ ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ಪ್ರತಿಧ್ವನಿಸಿತು. ವಿದ್ಯಾರ್ಥಿನಿಲಯಗಳ ಅಧ್ವಾನ ಸರಿಪಡಿಸುವಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಿ.ಎಂ.ವಿಶಾಲಾಕ್ಷಿ ನಟರಾಜ್‌ ಅಧ್ಯಕ್ಷತೆಯಲ್ಲಿ ನಡೆದ ‘ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ’ಯಲ್ಲಿ ಹಾಸ್ಟೆಲ್‌ ಅವ್ಯವಸ್ಥೆ ಗಂಭೀರ ಚರ್ಚೆಗೆ ಗ್ರಾಸವಾಯಿತು. ಮೂರು ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಯಿತು. ಹಾಸ್ಟೆಲ್‌ಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಸ್ಥಿತಿ ಸುಧಾರಿಸುವಂತೆ ಸೂಚನೆ ನೀಡಲಾಯಿತು.

‘ಜೋಗಿಮಟ್ಟಿ ರಸ್ತೆಯಲ್ಲಿ ವಿದ್ಯಾರ್ಥಿನಿಯರ ನಾಲ್ಕು ಹಾಸ್ಟೆಲ್‌ಗಳು ಒಂದೆಡೆ ಇವೆ. ಸಂಜೆ 7.15ಕ್ಕೆ ಭೇಟಿ ನೀಡಿದಾಗ ಯಾವೊಬ್ಬ ವಾರ್ಡನ್‌ ಕೂಡ ಹಾಸ್ಟೆಲ್‌ನಲ್ಲಿ ಇರಲಿಲ್ಲ. ಅನೈರ್ಮಲ್ಯದ ವಾತಾವರಣ ವಿದ್ಯಾರ್ಥಿನಿಯರನ್ನು ಕಾಡುತ್ತಿದೆ. ಸ್ನಾನದ ಕೊಠಡಿಗಳಿಗೆ ವಿದ್ಯುತ್‌ ದೀಪಗಳಿಲ್ಲ. ರಾತ್ರಿ ವೇಳೆ ವಿಷಕಾರಿ ಜಂತುಗಳು ಕಚ್ಚಿ ತೊಂದರೆ ಉಂಟಾದರೆ ಯಾರು ಹೊಣೆ’ ಎಂದು ಸತ್ಯಭಾಮ ಪ್ರಶ್ನಿಸಿದರು.

‘ಇದು ಒಂದು ಹಾಸ್ಟೆಲ್‌ ನಿದರ್ಶನವಲ್ಲ. ಜಿಲ್ಲೆಯ ಬಹುತೇಕ ವಿದ್ಯಾರ್ಥಿನಿಲಯಗಳಲ್ಲಿ ಇದೇ ಪರಿಸ್ಥಿತಿ ಇದೆ. ಯಾವ ಹಾಸ್ಟೆಲ್‌ಗಳಲ್ಲೂ ವಾರ್ಡನ್‌ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹಂದಿಗಳು ವಾಸಿಸಲು ಸಾಧ್ಯವಾಗದ ಸ್ಥಿತಿಯಲ್ಲಿವೆ. ಬಾಡಿಗೆ ಕಟ್ಟಡದಲ್ಲಿ ಸೌಲಭ್ಯಗಳು ಮರೀಚಿಕೆಯಾಗಿವೆ. ಸೌಲಭ್ಯ ಕೊರತೆ ಇರುವ ಬಾಡಿಗೆ ಕಟ್ಟಡಗಳನ್ನು ಕೂಡಲೇ ಸ್ಥಳಾಂತರಿಸಿ’ ಎಂದು ಸೂಚಿಸಿದರು.

ಹೊರಗುತ್ತಿಗೆ ಸಾಮ್ರಾಜ್ಯ: ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ನೌಕರರನ್ನು ಸೇವೆಯಿಂದ ವಜಾ ಮಾಡದೇ ಸರ್ಕಾರದ ಆದೇಶ ಉಲ್ಲಂಘಿಸಿದ ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಅವಿನ್‌ ವಿರುದ್ಧ ಸತ್ಯಭಾಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಹೊರಗುತ್ತಿಗೆ ಆಧಾರದ ಮೇಲೆ ಮಾಡಿಕೊಂಡ ನೇಮಕಾತಿಯು ಮೀಸಲಾತಿ ಸೌಲಭ್ಯದ ಸ್ಪಷ್ಟ ಉಲ್ಲಂಘನೆ. ರೋಸ್ಟರ್‌ ಪದ್ಧತಿ ಪಾಲನೆ ಆಗಿಲ್ಲ. ನಿರ್ದಿಷ್ಟ ಜಾತಿಯ ನೌಕರರನ್ನು ನೇಮಕ ಮಾಡಿಕೊಂಡು ಸಾಮ್ರಾಜ್ಯ ಕಟ್ಟಿಕೊಳ್ಳಲಾಗಿದೆ. ಹಿರಿಯ ಅಧಿಕಾರಿಗಳ ವಿರುದ್ಧ ಈ ನೌಕರರನ್ನು ಎತ್ತಿಕಟ್ಟುತ್ತೀರಾ’ ಎಂದು ಖಾರವಾಗಿ ಪ್ರಶ್ನಿಸಿದರು.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಕೆ.ಶಿವಮೂರ್ತಿ ಮಧ್ಯಪ್ರವೇಶಿಸಿ, ‘ಏಕಾಏಕಿ ಕೆಲಸದಿಂದ ವಜಾ ಮಾಡಿದರೆ ಬದುಕು ಬೀದಿಗೆ ಬರುತ್ತದೆ’ ಎಂದು ಗಮನ ಸೆಳೆಯಲು ಪ್ರಯತ್ನಿಸಿದರು. ಇದಕ್ಕೆ ಅವಕಾಶ ನೀಡದ ಸತ್ಯಭಾಮ, ‘ಹೊರಗುತ್ತಿಗೆ ನೌಕರರನ್ನು ವಜಾಗೊಳಿಸುವಂತೆ ಸರ್ಕಾರ ಸ್ಪಷ್ಟ ಆದೇಶ ನೀಡಿದೆ. ಇಷ್ಟು ದಿನ ಸೇವೆಯಲ್ಲಿ ಉಳಿಸಿಕೊಂಡಿದ್ದೇ ಸರ್ಕಾರದ ಹೆಚ್ಚುಗಾರಿಕೆ’ ಎಂದು ಪ್ರತಿಕ್ರಿಯಿಸಿದರು.

ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್‌ ಅವರ ಕಾರ್ಯವೈಖರಿಯ ಬಗ್ಗೆ ಅಧ್ಯಕ್ಷೆ ವಿಶಾಲಾಕ್ಷಿ ಕಿಡಿಕಾರಿದರು. ನೀಲಿ ನಾಲಿಗೆ ರೋಗಕ್ಕೆ ಬಲಿಯಾದ ಕುರಿಗಳಿಗೆ ವಿಮಾ ಸೌಲಭ್ಯ ಸಿಗದಿರುವ ಬಗ್ಗೆ ಚರ್ಚೆ ನಡೆಯಿತು. ಹೊಳಲ್ಕೆರೆ–ಚಿತ್ರದುರ್ಗ ಮಾರ್ಗದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ ರಸ್ತೆ ಉಬ್ಬುಗಳನ್ನು ತೆರವುಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ಶಿಫಾರಸು ಮಾಡಲು ಸಭೆ ತೀರ್ಮಾನಿಸಿತು.

ಕ್ರಿಮಿನಲ್‌ ಪ್ರಕರಣದ ಎಚ್ಚರಿಕೆ

ನಿಗದಿತ ಕಾಲಮಿತಿಯಲ್ಲಿ ಅನುದಾನ ಬಳಕೆ ಮಾಡದೇ ಕಾಮಗಾರಿ ವಿಳಂಬಕ್ಕೆ ಕಾರಣವಾಗುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವುದಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮ ಎಚ್ಚರಿಕೆ ನೀಡಿದರು.

‘ಆಯುಷ್‌’ ಇಲಾಖೆಯ ಆಸ್ಪತ್ರೆ ನಿರ್ಮಾಣದಲ್ಲಿ ಉಂಟಾಗಿರುವ ವಿಳಂಬ ಸತ್ಯಭಾಮ ಅವರನ್ನು ಕೆರಳಿಸಿತು. ನಿರ್ಮಿತಿ ಕೇಂದ್ರ ಹಾಗೂ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್‌) ವಿರುದ್ಧ ಕಿಡಿಕಾರಿದರು.

2015–16ನೇ ಆರ್ಥಿಕ ವರ್ಷದಲ್ಲಿ ಮಂಜೂರಾದ ಅನುದಾನವನ್ನು ಉಳಿಸಿಕೊಂಡು ಆಸ್ಪತ್ರೆ ಕಾಮಗಾರಿ ಮುಗಿಸದ ಕೆಆರ್‌ಐಡಿಎಲ್‌ ಕಾರ್ಯವೈಖರಿಯ ಬಗ್ಗೆ ಜಿಲ್ಲಾ ಆಯುಷ್‌ ಅಧಿಕಾರಿ ಡಾ.ವಿಶ್ವನಾಥ್‌ ಗಮನ ಸೆಳೆದರು.

‘ನಾಲ್ಕೈದು ವರ್ಷಗಳ ಅನುದಾನ ಉಳಿಸಿಕೊಂಡು ಕೆಲಸ ಮಾಡದೇ ಇರುವುದು ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿ. ಇಂತಹ ನಡವಳಿಕೆ ವಿರುದ್ಧ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಮಾರ್ಚ್‌ 31ರ ಒಳಗೆ ಬಾಕಿ ಕಾಮಗಾರಿ ಪೂರ್ಣಗೊಳಿಸಬೇಕು, ಇಲ್ಲವೇ ಅನುದಾನವನ್ನು ಸರ್ಕಾರಕ್ಕೆ ಹಿಂದಿರುಗಿಸಬೇಕು’ ಎಂದು ಸತ್ಯಭಾಮ ಸೂಚನೆ ತಾಕೀತು ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು