ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಲಭ್ಯ ಕೊರತೆಯ ಚನ್ನಮ್ಮ ಶಾಲೆ!

ಹಿರಿಯೂರು ತಾಲ್ಲೂಕಿನ ಐಮಂಗಲ ಗ್ರಾಮದಲ್ಲಿ ನಿರ್ಮಿಸಲಾಗಿರುವ ನೂತನ ಕಟ್ಟಡ
Last Updated 2 ಫೆಬ್ರುವರಿ 2016, 12:49 IST
ಅಕ್ಷರ ಗಾತ್ರ

ಹಿರಿಯೂರು: ರಾಜ್ಯದ ಸಮಾಜ ಕಲ್ಯಾಣ ಇಲಾಖೆಗೆ ಎಷ್ಟೊಂದು ಬಡತನ ಬಂದಿರಬಹುದು ಎನ್ನುವುದಕ್ಕೆ ಒಮ್ಮೆ ತಾಲ್ಲೂಕಿನ ಐಮಂಗಲ ಗ್ರಾಮದ ಹೊರವಲಯದಲ್ಲಿರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿನಿಯರ ಕಿತ್ತೂರು ಚನ್ನಮ್ಮ ವಸತಿ ಶಾಲೆಗೆ ಭೇಟಿ ಕೊಟ್ಟಲ್ಲಿ ಉತ್ತರ ಸಿಗುತ್ತದೆ.

ಹಿರಿಯೂರಿನ ಕೆಎಂ ಕೊಟ್ಟಿಗೆ ಬಡಾವಣೆಯಲ್ಲಿ ನಡೆಯುತ್ತಿದ್ದ ಕಿತ್ತೂರು ಚನ್ನಮ್ಮ ವಸತಿ ಶಾಲೆಯಲ್ಲಿನ ಅವ್ಯವಸ್ಥೆ ಕುರಿತು ‘ಪ್ರಜಾವಾಣಿ’ ವಿವರವಾದ ವರದಿ ಪ್ರಕಟಿಸಿದ ನಂತರ, ಕಳೆದ ವರ್ಷ ಆ.20ರಂದು ತರಾತುರಿಯಲ್ಲಿ ಶಾಲೆ ಯನ್ನು ಐಮಂಗಲ ಗ್ರಾಮದ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಕಟ್ಟಡ ವೇನೋ ನೋಡಲು ಆಕರ್ಷಕವಾಗಿದೆ. ಆದರೆ, ವಿದ್ಯಾರ್ಥಿನಿಯರಿಗೆ ಅಗತ್ಯವಾಗಿ ಇರಬೇಕಿರುವ ಸೌಲಭ್ಯಗಳಿಲ್ಲದಿರುವುದು ದೊಡ್ಡ ಕೊರತೆ ಎನ್ನುವುದು ಪೋಷಕರ ಆರೋಪ.

ಕೆ.ಎಂ. ಕೊಟ್ಟಿಗೆ ಬಡಾವಣೆಯಲ್ಲಿ ಇದ್ದಾಗ ವಸತಿ ನಿಲಯದಲ್ಲಿ ಮುರಿದು ಹೋದ ಮಂಚ, ರ್‍ಯಾಕ್, ಕೊಳಕು ನೀರಿನ ತೊಟ್ಟಿ, ಬಾಗಿಲುಗಳಿಲ್ಲದ ಶೌಚಾಲಯ, ಸ್ನಾನಗೃಹಗಳು ಸೇರಿದಂತೆ ಕಳಪೆ ಊಟ–ಹೀಗೆ ಸಮಸ್ಯೆಗಳ ಪಟ್ಟಿ ಆಂಜನೇಯನ ಬಾಲದಂತೆ ಇತ್ತು. ಐಮಂಗಲ ಗ್ರಾಮದ ಶಾಲೆಗೆ ಸುಂದರ ಕಟ್ಟಡವಿದೆ. ಆದರೆ, ತರಗತಿಗಳಲ್ಲಿ ಬೆಂಚುಗಳಿಲ್ಲ. ನೆಲದ ಮೇಲೆ ಕುಳಿತು ಊಟ ಮಾಡಬೇಕು.

ಚಾಪೆ ಹಾಸಿಕೊಂಡು ಮಲಗಬೇಕು. ಹೆಸರಿ ಗೆಂದು ಪ್ರಯೋಗಶಾಲೆ, ಕಂಪ್ಯೂಟರ್ ಕೊಠಡಿಗಳಿದ್ದು, ಅಗತ್ಯ ಉಪಕರಣ ಗಳಿಲ್ಲ. ಇದರ ಜೊತೆಗೆ ಕುಡಿಯುವ ನೀರು ಕೂಡ ದೊರೆಯದಿದ್ದರೆ ಹೇಗೆ ಎನ್ನುವುದು ವಿದ್ಯಾರ್ಥಿನಿಯರ ಪ್ರಶ್ನೆಯಾಗಿದೆ.

ವಸತಿ ಶಾಲೆಯ ಆವರಣದಲ್ಲಿ ಕೊಳವೆ ಬಾವಿ ಕೊರೆಸಿದ್ದು, ಸಾಕಷ್ಟು ನೀರು ಲಭ್ಯವಾಗಿದೆ.  ಆದರೆ, ಅದು ಗಡಸಾಗಿರುವುದರ ಜತೆಗೆ ಹೆಚ್ಚು ಫ್ಲೋರೈಡ್ ಅಂಶ ಹೊಂದಿದೆ. ಶಾಲೆ ಇಲ್ಲಿಗೆ ಸ್ಥಳಾಂತರಗೊಂಡ ಮೇಲೆ ಕೈಕಾಲುಗಳ ಕೀಲುಗಳಲ್ಲಿ ನೋವು ಕಾಣಿಸಿಕೊಂಡಿದೆ. ಹಲ್ಲುಗಳು ಕಪ್ಪಾಗ ತೊಡಗಿವೆ. ಆ ನೀರು ಕುಡಿಯಲು ಮನಸ್ಸು ಬರುತ್ತಿಲ್ಲ ಎಂದು ವಿದ್ಯಾರ್ಥಿನಿಯರು ದೂರುತ್ತಾರೆ.

ಇವರ ಜತೆ ಅಡುಗೆ ತಯಾರಿಸು ವವರು, ‘ಗಡಸು ನೀರಿನಲ್ಲಿ ಬೇಳೆ ಬೇಯುವುದಿಲ್ಲ. ಕುಕ್ಕರ್‌ನಲ್ಲಿ ಹಾಕಿ 4–5 ಬಾರಿ ಕೂಗಿಸಬೇಕು. ಸಾಂಬಾರು ರುಚಿ ಹೇಳಿಕೊಳ್ಳುವಂತೆ ಇರೋಲ್ಲ. ನಾವೇನು ಮಾಡಲು ಸಾಧ್ಯವಿದೆ. ಮೂರು ತಿಂಗಳಿಂದ ಈ ಸಮಸ್ಯೆ ಇದೆ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಫಿಲ್ಟರ್ ಇಲ್ಲ:  ‘ವಸತಿ ಶಾಲೆ ಸ್ಥಳಾಂತರ ಗೊಂಡ ಕೆಲವೇ ದಿನದಲ್ಲಿ ಗಂಟೆಗೆ 60 ಲೀಟರ್ ಸಾಮರ್ಥ್ಯದ ಮೂರು ಫಿಲ್ಟರ್ ಘಟಕಗಳನ್ನು ಅಳವಡಿಸಲಾಗಿತ್ತು. ಇಲಾಖೆಯಿಂದ ಹಣ ಪಡೆಯಲು ಮೂರು ತಿಂಗಳು ಅಲೆದಾಡಿದ ಕಂಪೆನಿ ಯವರು, ಹಣ ಪಾವತಿಯಾಗದ ಕಾರಣ  ಅಳವಡಿಸಲಾಗಿದ್ದ ಫಿಲ್ಟರ್‌ಗಳನ್ನು ಬಿಚ್ಚಿಕೊಂಡು ಹೋಗಿದ್ದಾರೆ. ವಸತಿಶಾಲೆ ಆವರಣದಲ್ಲಿ ವಾಸವಾಗಿರುವ ಶಿಕ್ಷಕರು ಹತ್ತಿರದ ತಾಳವಟ್ಟಿ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಿಂದ ಹಣ ಪಾವತಿಸಿ ನೀರು ತರುತ್ತಿದ್ದಾರೆ. ಆದರೆ, ನಮ್ಮ ಮಕ್ಕಳ ಗೋಳು ಕೇಳುವ ವರು ಯಾರು’ ಎಂದು ಪೋಷಕ ದೊಡ್ಡ ಉಳ್ಳಾರ್ತಿ ಕರಿಯಣ್ಣ ಪ್ರಶ್ನಿಸುತ್ತಾರೆ.

ಸಮಾಜ ಕಲ್ಯಾಣ ಇಲಾಖೆ ಸಚಿವರು ವಿದ್ಯಾರ್ಥಿನಿಯರ ಸಮಸ್ಯೆ ಅರ್ಥ ಮಾಡಿ ಕೊಂಡು ತಕ್ಷಣ ಶುದ್ಧ ಕುಡಿಯುವ ನೀರಿನ ಘಟಕ ಮರು ಸ್ಥಾಪಿಸಬೇಕು ಎಂದು ಕರಿಯಣ್ಣ ಒತ್ತಾಯಿಸಿದ್ದಾರೆ.ಇಲ್ಲಿನ ಊಟದ ಹಾಲ್‌ನಲ್ಲಿ ಅಳವಡಿಸಿರುವ ಪಟ್ಟಿಯಲ್ಲಿ ಸೂಚಿಸಿದ ಊಟ– ಉಪಾಹಾರನ್ನು ವಿದ್ಯಾರ್ಥಿನಿ ಯರಿಗೆ ಕೊಡುತ್ತಿಲ್ಲ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಮಮತಾ ಅರವಿಂದ್ ಈ ಹಿಂದೆ ನಡೆದ ಪಂಚಾಯ್ತಿ ಸಭೆಯಲ್ಲಿ ಆರೋಪಿಸಿದ್ದರು. ತದನಂತರ ಊಟದ ಗುಣಮಟ್ಟದಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡಿದೆ. ಆದರೆ, ಫಲಕದಲ್ಲಿರುವಂತೆ ಊಟ–ತಿಂಡಿ ಕೊಡುತ್ತಿಲ್ಲ ಎಂದು ಅವರು ಆರೋಪಿಸಿದರು.

ವಸತಿಶಾಲೆ ಸುಮಾರು 8 ಎಕರೆ ಪ್ರದೇಶದಲ್ಲಿದ್ದು, ಸುತ್ತಲೂ ಆವರಣ ಗೋಡೆ ನಿರ್ಮಿಸಲಾಗಿದೆ. ಆದರೆ, ಆವರಣದಲ್ಲಿನ ನೆಲವನ್ನು ಸಮತಟ್ಟು ಕೂಡ ಮಾಡಿಲ್ಲ. ನೆಲ ಸಮತಟ್ಟು ಮಾಡಿ ಗಿಡ ಬೆಳೆಸಿದಲ್ಲಿ ಪರಿಸರ ಹಸಿರಾಗುತ್ತದೆ. ಮಕ್ಕಳು ಮರದ ನೆರಳಲ್ಲಿ ಕುಳಿತು ಓದಬಹುದು. ಗಿಡ ಬೆಳೆಸಲು ಮಕ್ಕಳ ನೆರವನ್ನೂ ಪಡೆಯಬಹುದು ಎಂದು ಹೇಳುತ್ತಾರೆ.

ನಿರಂತರ ಜ್ಯೋತಿ ಸಂಪರ್ಕ ಇದೆ ಎಂಬ ಕಾರಣಕ್ಕೆ ಯುಪಿಎಸ್ ಹಾಕಿಸಿಲ್ಲ. ಹಲವು ಬಾರಿ ವಿದ್ಯುತ್ ಹೋಗುವ ಕಾರಣ ವಿದ್ಯಾರ್ಥಿನಿಯರು ಭಯಪಡು ವಂತಾಗಿದೆ. ಹಳೆಯ ವಸತಿ ನಿಲಯ ದಲ್ಲಿದ್ದ ಯುಪಿಎಸ್‌ಗಳನ್ನು ಇಲ್ಲಿ ಅಳವಡಿಸಬೇಕು. ಜತೆಗೆ ಪೋಷಕರ ಸಭೆ ಕರೆಯಬೇಕು. 227 ವಿದ್ಯಾರ್ಥಿನಿಯರಿಗೆ ಅಗತ್ಯ ಇರುವಷ್ಟು ಕಂಪ್ಯೂಟರ್, ಮಂಚ ಹಾಗೂ ಡೆಸ್ಕ್ ವ್ಯವಸ್ಥೆ  ತಕ್ಷಣ ಮಾಡಬೇಕು. ಶುದ್ಧ ಕುಡಿಯುವ ನೀರು ಕೊಡಲೂ ಬಡತನ ಇದೆ ಎನ್ನುವು ದಾದರೆ ಎಲ್ಲ ಮಕ್ಕಳಿಗೂ ಸಾಮೂಹಿಕ ವಾಗಿ ವರ್ಗಾವಣೆ ಪತ್ರ ಕೊಡಲಿ ಎಂದು ಕರಿಯಣ್ಣ ತಾಕೀತು ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT