ಸೋಮವಾರ, ಜನವರಿ 20, 2020
20 °C

ಕೇಂದ್ರದ ವಿರುದ್ಧ ಕಾಂಗ್ರೆಸ್‌ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೇಂದ್ರ ಸರ್ಕಾರದ ಕಾರ್ಮಿಕ, ರೈತ ವಿರೋಧಿ ನೀತಿ, ದುಡಿಯುವ ವರ್ಗದ ಜನರ ಹಕ್ಕುಗಳ ಸಂರಕ್ಷಣೆ ಮತ್ತು ಪರ್ಯಾಯ ಆರ್ಥಿಕ ನೀತಿಗೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಾರ್ಮಿಕ ಘಟಕದ ವತಿಯಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಇಲ್ಲಿಯ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ನಂತರ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಅವರಿಗೆ ಮನವಿಪತ್ರ ಸಲ್ಲಿಸಿದರು.

ನೇತೃತ್ವ ವಹಿಸಿದ್ದ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪ್ರೊ.ರಾಜು ಆಲಗೂರ ಮಾತನಾಡಿ, ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಬಂಡವಾಳ ಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ. ಜನ ವಿರೋಧಿ, ತಪ್ಪು ಆರ್ಥಿಕ ನೀತಿಗಳಿಂದಾಗಿ ದೇಶದ ಕೈಗಾರಿಕೆಗಳು ಕಾರ್ಮಿಕರನ್ನು ವಜಾಗೊಳಿಸುವಂತಾಗಿದೆ. 370ನೇ ವಿಧಿ ರದ್ದು, ಸರ್ಜಿಕಲ್‌ ಸ್ಟ್ರೈಕ್‌, ನೋಟು ಅಮಾನ್ಯೀಕರಣ, ಜಿಎಸ್‌ಟಿ, ಎನ್‌ಆರ್‌ಸಿ, ಸಿಎಎ ಕಾಯ್ದೆ
ಗಳ ಜಾರಿಯಂತಹ ಕೆಟ್ಟ ನಿರ್ಧಾರಗಳಿಂದ ಜನರು ಕಂಗಾಲಾಗಿದ್ದಾರೆ. ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್ ಘೋಷಣೆ ನೆಲಕಚ್ಚಿದೆ’ ಎಂದು ದೂರಿದರು.

ಜಿಲ್ಲಾ ಕಾಂಗ್ರೆಸ್‌ ಕಾರ್ಮಿಕ ಘಟಕದ ಅಧ್ಯಕ್ಷ ದತ್ತಾತ್ರೇಯ ಆಲಮೇಲಕರ ಮಾತನಾಡಿ, ‘ದೇಶವ್ಯಾಪಿ ಹೋರಾಟ ನಡೆಸಿದರೂ ಕೇಂದ್ರ ಸರ್ಕಾರ ಕಾರ್ಮಿಕರ ಭವಿಷ್ಯ ನಿಧಿಯನ್ನು ಹೆಚ್ಚಿಸಲಿಲ್ಲ. ರೈತರು ಅತಿವೃಷ್ಟಿ, ಅನಾವೃಷ್ಟಿ ಸಮಸ್ಯೆ ಎದುರಿಸುವುದಲ್ಲದೆ, ಸೂಕ್ತ ಬೆಲೆ ಸಿಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಗೊತ್ತಿದ್ದರೂ ಕಣ್ಣು ಮುಚ್ಚಿ ಕುಳಿತುಕೊಂಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ಅಬ್ದುಲ್‌ ಹಮೀದ್‌ ಮುಶ್ರೀಫ್‌, ವೈಜನಾಥ ಕರ್ಪೂರಮಠ, ಮಹಮ್ಮದ್‌ ರಫೀಕ್‌ ಟಪಾಲ್‌, ಸುನೀಲ ಉಕ್ಕಲಿ, ಜಮೀರ್ ಬಕ್ಷಿ, ಆರತಿ ಶಹಾಪುರ, ಗಂಗಾಧರ ಸಂಬಣ್ಣಿ, ಮಹಮ್ಮದ್‌ಹನೀಫ್‌ ಮಕಾನದಾರ, ಬಾಬು ಯಾಳವಾರ, ಜ್ಯೋತಿರಾಮ ಪವಾರ, ಅಲ್ಲಾಭಕ್ಷ್‌ ಬಾಗಲಕೋಟ, ಶಬ್ಬೀರ್‌ ಜಾಗೀರದಾರ, ವಸಂತರ ಹೊನಮೊಡೆ, ರವಿ ಹೊಸಳ್ಳಿ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು