ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ ‌ ಕರಾವಳಿ ಕಾವಲು ಪಡೆಯಲ್ಲಿ ಮೀನುಗಾರರಿಗೆ ಅವಕಾಶ

ಸಿಎಂ ಗಮನಕ್ಕೆ ತಂದು ಶೀಘ್ರ ಕ್ರಮ: ಸಚಿವ ಕೋಟ ಶ್ರೀನಿವಾಸ ಪೂಜಾರಿ
Last Updated 30 ಜೂನ್ 2020, 13:52 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯಲ್ಲಿ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಶೇ 20ರಷ್ಟು ನುರಿತ ಮೀನುಗಾರರಿಗೆ ಕರಾವಳಿ ಕಾವಲು ಪಡೆಯಲ್ಲಿ ಉದ್ಯೋಗ ಮೀಸಲಿಡುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಂಗಳವಾರ ಜಿಲ್ಲಾ ಪಂಚಾಯಿತಿ ನೇತ್ರಾವತಿ ಸಭಾಂಗಣದಲ್ಲಿ ನಡೆದ ಕರಾವಳಿ ಮೀನುಗಾರಿಕೆ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಿಸಾನ್ ಕಾರ್ಡ್ ಮೂಲಕ ಕೃಷಿಕರಿಗೆ ಹೆಚ್ಚು ಸೌಲಭ್ಯಗಳು ದೊರಕುತ್ತಿದೆ. ಆದರೆ ಕೃಷಿಯಲ್ಲೇ ಮೀನುಗಾರಿಕೆಯೂ ಒಂದು ಭಾಗವಾಗಿದ್ದು, ಕೃಷಿಕರಿಗೆ ಸಿಗುವಷ್ಟು ಸವಲತ್ತು ಮೀನುಗಾರಿಗೆ ಸಿಗುತ್ತಿಲ್ಲ. ಮೀನುಗಾರರಿಗೂ ಕಿಸಾನ್ ಕಾರ್ಡ್‌ನಲ್ಲಿ ಸೌಲಭ್ಯ ಒದಗಿಸುವಂತೆ ಸಂವಾದದಲ್ಲಿ ಕೆಲವು ಕೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಮೀನುಗಾರಿಕೆ ನಿರ್ದೇಶಕರು, ಲೀಡ್ ಬ್ಯಾಂಕ್ ಮ್ಯಾನೇಜರ್, ಸಂಬಂಧಪಟ್ಟ ಅಧಿಕಾರಿಗಳು ಸೇರಿದಂತೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಉದ್ಘಾಟಿಸಿ ಮಾತನಾಡಿದ ಸಂಸದ ನಳಿನ್‌ಕುಮಾರ್ ಕಟೀಲ್, ಈ ಕಾರ್ಯಕ್ರಮದ ಮೂಲಕ ಸಾಕಷ್ಟು ಪರಿಣಿತರ ಅಭಿಪ್ರಾಯ ಪಡೆಯಲಾಗುವುದು. ಅವುಗಳನ್ನು ಕ್ರೋಡೀಕರಿಸಿ ಮೀನುಗಾರಿಕೆಯ ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಯನ್ನು ಮುಂದಿಟ್ಟುಕೊಂಡು ಒಳ್ಳೆಯ ಯೋಜನೆ ಕಾರ್ಯಗತ ಮಾಡಲಾಗುವುದು. ಅದುವೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.

ಕರಾವಳಿಯಲ್ಲಿ 3.28 ಲಕ್ಷ ಮೀನುಗಾರರಿದ್ದು, ಸಕ್ರಿಯ ಮೀನುಗಾರರ ಸಂಖ್ಯೆ 1.57 ಲಕ್ಷವಾಗಿದೆ. 8 ಮೀನುಗಾರಿಕಾ ಬಂದರು, 26 ಮೀನುಗಾರಿಕಾ ಇಳಿದಾಣ ಕೇಂದ್ರಗಳು, 128 ಮೀನು ಸಹಕಾರಿ ಸಂಘಗಳು, 1 ಮೀನು ಅಭಿವೃದ್ಧಿ ನಿಗಮ, 2 ಮೀನು ಮಾರಾಟ ಮಂಡಳಿಗಳಿವೆ. 4,585 ಯಾಂತ್ರೀಕೃತ ದೋಣಿಗಳು, 9,362 ಮೋಟಾರೀಕೃತ ದೋಣಿಗಳು, 9,097 ನಾಡ ದೋಣಿಗಳಿವೆ ಎಂದು ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಬ್ರಹ್ಮಚಾರಿ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕಾರವಾರ ಶಾಸಕಿ ರೂಪಾಲಿ ನಾಯ್ಕ್, ಕಾಪು ಶಾಸಕ ಲಾಲಾಜಿ ಮೆಂಡನ್, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಮೀನುಗಾರಿಕೆ ನಿರ್ದೇಶಕ ರಾಮಕೃಷ್ಣ ವೇದಿಕೆಯಲ್ಲಿದ್ದರು.

ಕ್ಯೂ ಆರ್ ಕೋಡ್ ಆಧಾರಿತ ಆಧಾರ್ ಕಾರ್ಡ್
ಮೀನುಗಾರರಿಗೆ ಕ್ಯೂ ಆರ್ ಕೋಡ್ ಆಧಾರಿತ ಆಧಾರ್ ಕಾರ್ಡ್‌ಗಳನ್ನು ಕಡ್ಡಾಯಗೊಳಿಸುವ ನಿರ್ಣಯ ಕೈಗೊಂಡಿದ್ದು, ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮೀನುಗಾರರ ರಕ್ಷಣೆ ಹಾಗೂ ಅವರ ಮಾಹಿತಿಯನ್ನು ಕಲೆ ಹಾಕುವ ದೃಷ್ಟಿಯಿಂದ ಕ್ಯೂ ಆರ್ ಕೋಡ್ ಆಧಾರಿತ ಬಯೋಮೆಟ್ರಿಕ್ ಕಾರ್ಡ್‌ಗಳನ್ನು ಹೊಂದುವುದು ಕಡ್ಡಾಯವಾಗಿದೆ. ಜಿಲ್ಲಾಡಳಿತದ ವತಿಯಿಂದ ‘ಸೇವಾ ಸಿಂಧು ಪೋರ್ಟಲ್’ ವೆಬ್‌ಸೈಟ್‌ನಲ್ಲಿ ಈ ಕಾರ್ಡ್‌ ಒದಗಿಸಲು ಅಥವಾ ಆಯಾ ಮೀನುಗಾರಿಕಾ ಇಲಾಖೆಯಲ್ಲಿ ದೊರಕುವಂತೆ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದರು.

***
ದೋಣಿಗಳಿಗೆ ಕಲರ್ ಕೋಡಿಂಗ್ ವ್ಯವಸ್ಥೆ ರೂಪಿಸಿದ್ದು, ಇದರಲ್ಲಿ ಸಮಸ್ಯೆ ಇದ್ದರೆ ಎಲ್ಲ ಮೀನುಗಾರರು ಮನವಿ ಸಲ್ಲಿಸಿದಲ್ಲಿ ಅದರಂತೆ ಕ್ರಮ ಕೈಗೊಳ್ಳಲಾಗುವುದು.
–ಚೇತನ್‌,ಕರಾವಳಿ ಕಾವಲು ಪಡೆಯ ಪೊಲೀಸ್ ಅಧೀಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT