ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಳ್ಳಾಲ ನೀರಿನ ಯೋಜನೆ ಶೀಘ್ರ ಉದ್ಘಾಟನೆ: ಯು.ಟಿ. ಖಾದರ್

ಈವರೆಗೆ ₹635 ಕೋಟಿ ವೆಚ್ಚ: ಯು.ಟಿ. ಖಾದರ್
Published 14 ಜೂನ್ 2024, 13:03 IST
Last Updated 14 ಜೂನ್ 2024, 13:03 IST
ಅಕ್ಷರ ಗಾತ್ರ

ಮಂಗಳೂರು: ಚುನಾವಣೆ ವೇಳೆ ಜನರಿಗೆ ನೀಡಿದ ಭರವಸೆಯಂತೆ ಉಳ್ಳಾಲ ಕ್ಷೇತ್ರದಲ್ಲಿ 24X7 ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಮೊದಲ ಹಂತದ ₹249 ಕೋಟಿ ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ. ಶೀಘ್ರದಲ್ಲಿ ಇದನ್ನು ಉದ್ಘಾಟಿಸಲಾಗುವುದು ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಜಿಪದಲ್ಲಿ ಜಾಕ್‍ವೆಲ್‍ ನಿರ್ಮಿಸಿದ್ದು, ಕೊಣಾಜೆಗೆ ನೀರನ್ನು ಹಾಯಿಸಿ ಅಲ್ಲಿ ಶುದ್ಧೀಕರಣ ಕಾರ್ಯ ನಡೆಸಿ, ಪೈಪ್‍ ಮೂಲಕ ಉಳ್ಳಾಲ, ತಲಪಾಡಿವರೆಗೆ ಹರಿಸುವ ಕಾಮಗಾರಿ ಪೂರ್ಣಗೊಂಡಿದೆ. ಎರಡನೇ ಹಂತದಲ್ಲಿ ಗ್ರಾಮೀಣ ಭಾಗಕ್ಕೆ ನೀರು ಪೂರೈಕೆ ಹಾಗೂ ಇನ್ನಿತರ ಕಾಮಗಾರಿಗಳಿಗೆ ₹386 ಕೋಟಿ ಬಿಡುಗಡೆಯಾಗಿದೆ. ಮುಂದಿನ 25 ವರ್ಷಗಳಲ್ಲಿ ಕ್ಷೇತ್ರದಲ್ಲಿ ಆಗಬಹುದಾದ ಅಭಿವೃದ್ಧಿಯ ಕಲ್ಪನೆಯಲ್ಲಿ ಯೋಜನೆ ರೂಪಿಸಲಾಗಿದೆ. ನೀರಿನ ಮೂಲಕ್ಕೆ ಸಮಸ್ಯೆಯಾಗದಂತೆ ಹರೇಕಳ ಕಿಂಡಿ ಅಣೆಕಟ್ಟೆಯಿಂದ ನಾಲ್ಕು ಕಿ.ಮೀ ದೂರದವರೆಗೆ ನೀರು ನಿಲುಗಡೆ ಯೋಜನೆ ಮಾಡಲಾಗಿದೆ. ಇದರಿಂದ ಮಂಗಳೂರು ನಗರಕ್ಕೂ ಅನುಕೂಲವಾಗುತ್ತದೆ ಎಂದರು.

ಸಮುದ್ರ ಕೊರೆತಕ್ಕೆ ಶಾಶ್ವತ ಪರಿಹಾರದ ನಿಟ್ಟಿನಲ್ಲಿ ಚರ್ಚೆ ನಡೆದಿದೆ. ಮುಂಬೈ, ಚೆನ್ನೈ, ಕೇರಳದಲ್ಲಿ ಅನುಷ್ಠಾನಗೊಂಡಿರುವ ಯೋಜನೆಗಳು ಫಲ ನೀಡಿಲ್ಲ. ಸಮುದ್ರದ ಅಲೆಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತವೆ. ಸುರತ್ಕಲ್ ಎನ್‌ಐಟಿಕೆ ತಜ್ಞರ ವರದಿ ಆಧರಿಸಿ ಯೋಜನೆ ರೂಪಿಸಲಾಗುವುದು. ಸದ್ಯದಲ್ಲಿ ತಡೆಗೋಡೆ ನಿರ್ಮಿಸಿ, ಸಣ್ಣ ಬ್ರೇಕ್ ವಾಟರ್ ಅಳವಡಿಸುವ ಬಗ್ಗೆ ಯೋಚಿಸಲಾಗಿದೆ. ರಭಸದ ಅಲೆಗಳು ಇರುವಲ್ಲಿ ಕಾಂಡ್ಲಾವನ ಅಷ್ಟು ಸಹಕಾರಿಯಾಗದು ಎಂದು ಹೇಳಿದರು.

ಕೇಂದ್ರ ಸರ್ಕಾರವು ಮುಂಬೈನಿಂದ ಕೊಚ್ಚಿಗೆ ಕ್ರೂಸ್ (ಪ್ರಯಾಣಿಕ ಹಡಗು ಸೇವೆ) ಆರಂಭಿಸಲಿದೆ. ಈ ಹಡಗಿಗೆ ಸೋಮೇಶ್ವರದಲ್ಲಿ ನಿಲುಗಡೆ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ. ಇದಕ್ಕೆ ಅನುಮತಿ ದೊರೆತರೆ ಸ್ಥಳೀಯವಾಗಿ ಪ್ರವಾಸೋದ್ಯಮ ಅಭಿವೃದ್ಧಿಯೂ ಆಗುತ್ತದೆ ಎಂದು ಖಾದರ್ ಹೇಳಿದರು.

‘ನಾನು ಸಚಿವನಾಗಿದ್ದ ಅವಧಿಯಲ್ಲಿ ಜಿಲ್ಲೆಯಲ್ಲಿ ಸ್ಕಿಲ್ ಗೇಮ್ ಸೇರಿದಂತೆ ಎಲ್ಲ ರೀತಿಯ ಜೂಜಾಟಗಳಿಗೆ ತಡೆ ಹಾಕಲಾಗಿತ್ತು. ನಂತರ ಬಿಜೆಪಿ ಅಧಿಕಾರಾವಧಿಯಲ್ಲಿ ಮತ್ತೆ ಆರಂಭವಾಗಿದೆ. ಆಗ ಮರಳು ಪೂರೈಕೆಗೆ ಸ್ಯಾಂಡ್ ಬಜಾರ್ ಆ್ಯಪ್ ಒದಗಿಸಲಾಗಿತ್ತು. ಜನರಿಗೆ ಕಾನೂನುಬದ್ಧವಾಗಿ ಮರಳು ಸಿಗದಿದ್ದರೆ ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಿಸುವುದು ಸುಲಭವಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT