ಸೋಮವಾರ, ಆಗಸ್ಟ್ 2, 2021
23 °C
ಮಂಗಳೂರು ಮತ್ತು ಪುತ್ತೂರು ವಿಭಾಗಗಳ ಬಸ್‌

140ಕ್ಕೂ ಅಧಿಕ ಸಾರಿಗೆ ಬಸ್‌ ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಲಾಕ್‌ಡೌನ್ ಸಡಿಲಿಕೆಯ ಎರಡನೇ ದಿನವಾದ ಗುರುವಾರ ಮಂಗಳೂರು ಮತ್ತು ಪುತ್ತೂರು ವಿಭಾಗಗಳು ಸೇರಿ 140ಕ್ಕೂ ಹೆಚ್ಚು ಬಸ್‌ಗಳ ಸಂಚಾರ ನಡೆಸಿದವು. ಆದರೆ, ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು.

ಒಂದೂವರೆ ತಿಂಗಳಿನಿಂದ ಸ್ಥಗಿತಗೊಂಡಿದ್ದ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಬುಧವಾರದಿಂದ ಆರಂಭವಾಗಿದೆ. ಮೊದಲ ದಿನ 70ರಷ್ಟು ಬಸ್‌ಗಳು ಸಂಚಾರ ಮಾಡಿದ್ದವು. ಲಾಕ್‌ಡೌನ್ ಎರಡನೇ ಹಂತದ ನಿಯಮದಂತೆ, ಎಲ್ಲ ಚಟುವಟಿಕೆಗಳಂತೆ ಬೆಳಿಗ್ಗೆ 7ರಿಂದ ಮಧ್ಯಾಹ್ನ 1 ಗಂಟೆ ಬಸ್ ಸಂಚಾರಕ್ಕೂ ಅವಕಾಶ ನೀಡಲಾಗಿದೆ.

ಗುರುವಾರ ಮಂಗಳೂರು, ಉಡುಪಿ, ಕುಂದಾಪುರ ಡಿಪೊಗಳು ಸೇರಿ, ಸಂಜೆಯ ತನಕ 96ರಷ್ಟು ಬಸ್‌ಗಳು ಸಂಚರಿಸಿದವು. ನಂತರ ದೂರದ ಊರಿಗಳಿಗೆ ರಾತ್ರಿ ಬಸ್‌ಗಳನ್ನು ಬಿಡಲಾಗಿದೆ. ಸ್ಥಳೀಯವಾಗಿ ಧರ್ಮಸ್ಥಳ, ಉಪ್ಪಿನಂಗಡಿ, ಪುತ್ತೂರು, ಉಡುಪಿ, ಕುಂದಾಪುರ, ಕಾರ್ಕಳ, ಕಾಪು, ದೂರದ ಊರುಗಳಾದ ಬೆಂಗಳೂರು, ಮಂತ್ರಾಲಯ, ರಾಯಚೂರು, ಬಾಗಲಕೋಟೆ, ಬೆಳಗಾವಿಗಳಿಗೆ ಬಸ್‌ಗಳು ಸಂಚರಿಸಿದವು. ಒಂದು ಬಸ್‌ ಸಾಮರ್ಥ್ಯದ ಶೇ 50ರಷ್ಟು ಪ್ರಯಾಣಿಕರಿಗೆ ಮಾತ್ರ ಪ್ರಯಾಣಿಸಲು ಅವಕಾಶವಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್ ತಿಳಿಸಿದರು.

ಕರ್ತವ್ಯಕ್ಕೆ ಅಗತ್ಯ ಇರುವಷ್ಟು ಸಿಬ್ಬಂದಿಯನ್ನು ಕರೆಯಿಸಿಕೊಳ್ಳಲಾಗುತ್ತಿದೆ. ಶೇ 40ರಷ್ಟು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಗ್ರಾಮೀಣ ಮಾರ್ಗಕ್ಕೆ ಬಸ್‌ಗಳು ಹೆಚ್ಚು ಹೋಗಿಲ್ಲ. ಅಧಿಕ ಪ್ರಯಾಣಿಕರು ಇರುವ ಮಾರ್ಗಗಳನ್ನು ಕೇಂದ್ರೀಕರಿಸಿ ಬಸ್ ಓಡಿಸಲಾಗುತ್ತಿದೆ. ಶುಕ್ರವಾರ ಶೇ 30ರಷ್ಟು ಹೆಚ್ಚು ಬಸ್‌ಗಳನ್ನು ಓಡಿಸುವ ಯೋಚನೆಯಿದೆ ಎಂದು ವಿವರಿಸಿದರು.

‘ಪುತ್ತೂರು, ಧರ್ಮಸ್ಥಳ, ಸುಳ್ಯ ಹಾಗೂ ಬಿ.ಸಿ ರೋಡ್‌ ಭಾಗದಲ್ಲಿ 37ಕ್ಕೂ ಹೆಚ್ಚು ಬಸ್‌ಗಳು ಸಂಚರಿಸಿವೆ. ಬುಧವಾರ ರಾತ್ರಿ ಸುಮಾರು ಹತ್ತು ಬಸ್‌ಗಳು ಬೆಂಗಳೂರು, ಹೊಸಪೇಟೆ ಹಾಗೂ ಶಿವಮೊಗ್ಗಕ್ಕೆ ತೆರಳಿವೆ. ಪ್ರಯಾಣಿಕರ ಅಗತ್ಯಕ್ಕೆ ಅನುಗುಣವಾಗಿ ಸ್ಥಳೀಯ ಮಾರ್ಗಗಳಲ್ಲಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು’ ಎಂದು ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದರು. ಖಾಸಗಿ ಬಸ್‌ಗಳು ಗುರುವಾರವೂ ರಸ್ತೆಗೆ ಇಳಿಯಲಿಲ್ಲ.

ತೀವ್ರ ಜನದಟ್ಟಣಿ: ಲಾಕ್‌ಡೌನ್ ಸಡಿಲಿಕೆಯ ಅವಧಿಯಲ್ಲಿ ಗುರುವಾರ ಬೆಳಿಗ್ಗೆ ನಗರದ ಬಹುತೇಕ ಎಲ್ಲ ರಸ್ತೆಗಳಲ್ಲಿ ವಾಹನ ದಟ್ಟಣಿ ಇತ್ತು. ಪೇಟೆಯಲ್ಲಿ ಜನರ ಖರೀದಿಯೂ ಜೋರಾಗಿತ್ತು. ಬಟ್ಟೆ ಅಂಗಡಿ, ಚಪ್ಪಲಿ ಅಂಗಡಿ, ಮೊಬೈಲ್‌ ಅಂಗಡಿಗಳಲ್ಲಿ ಹೆಚ್ಚು ಜನರು ಇರುವುದು ಕಂಡುಬಂತು.

‘₹ 34 ಕೋಟಿ ನಷ್ಟ’

‘ಒಂದೂವರೆ ತಿಂಗಳ ಲಾಕ್‌ಡೌನ್ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗಕ್ಕೆ ಅಂದಾಜು ₹ 34 ಕೋಟಿ ನಷ್ಟವಾಗಿದೆ. ಏಪ್ರಿಲ್‌ ಅಧಿಕ ಆದಾಯ ಬರುವ ತಿಂಗಳಾಗಿತ್ತು. ದಿನವೊಂದಕ್ಕೆ ಸರಾಸರಿ ₹ 80 ಲಕ್ಷ ಆದಾಯ ಇರುತ್ತಿತ್ತು. ಈ ಹಿಂದೆ ಸಾರಿಗೆ ಸಂಸ್ಥೆ ಸಿಬ್ಬಂದಿಯ ಮುಷ್ಕರದ ವೇಲೆ ಸಂಸ್ಥೆಗೆ ಸುಮಾರು ₹ 8 ಕೋಟಿ ನಷ್ಟವಾಗಿದೆ’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.