ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಗಣನೀಯ ಹೆಚ್ಚಳ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗರಿಷ್ಠ 482 ಪ್ರಕರಣ
Last Updated 20 ಏಪ್ರಿಲ್ 2021, 17:13 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಮಂಗಳವಾರ ಒಟ್ಟು 482 ಜನರಿಗೆ ಕೋವಿಡ್ ದೃಢಪಟ್ಟಿದೆ. 88 ಜನರು ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 2,275 ಸಕ್ರಿಯ ಪ್ರಕರಣಗಳು ಇವೆ. ಈವರೆಗೆ ಜಿಲ್ಲೆಯಲ್ಲಿ 6,92,680 ಜನರ ಗಂಟಲು ದ್ರವ ಮಾದರಿ ಪರೀಕ್ಷಿಸಲಾಗಿದ್ದು, ಅವರಲ್ಲಿ 38,843 ಜನರಿಗೆ ಸೋಂಕು ತಗುಲಿದ್ದು ದೃಢಪಟ್ಟಿತ್ತು.

ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಭರ್ತಿಯಾಗುತ್ತಿದ್ದು, ಆಕ್ಸಿಜನ್ ಸಿಲಿಂಡರ್, ವೆಂಟಿಲೇಷನ್ ಸೌಲಭ್ಯವಿರುವ ಹಾಸಿಗೆ ಪಡೆಯಲು ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವಂತಾಗಿದೆ.

‘ಸೋಂಕಿನ ಲಕ್ಷಣ ಇಲ್ಲದವರು ಮನೆಯಲ್ಲೇ ಇದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರ ಸಮಸ್ಯೆ ಇದ್ದವರು ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯಕ್ಕೆ ಹಾಸಿಗೆಗಳ ಕೊರತೆಯಾಗಿಲ್ಲ. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳ ಹಾಸಿಗೆಗಳ ಲಭ್ಯತೆ ಗಮನಿಸಿ, ಹೊಂದಾಣಿಕೆ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್‌ ಕುಮಾರ್ ತಿಳಿಸಿದರು.

ನಗರದ ಕಂಕನಾಡಿ ಕಾನ್ವೆಂಟ್‌ನಲ್ಲಿ 11 ಜನರು, ಪಾಂಡೇಶ್ವರದ ಮನೆಯೊಂದರಲ್ಲಿ ಎಂಟು ಜನರಿಗೆ, ಕಡಬದ ಬೆಳಂದೂರಿನ ಮನೆಯೊಂದರಲ್ಲಿ ಐದು ಜನರಿಗೆ, ಕಿನ್ನಿಗೋಳಿ ಸಮೀಪ ಮೆನ್ನಬೆಟ್ಟುವಿನಲ್ಲಿ ಕೆಲವರಿಗೆ ಕೋವಿಡ್ ದೃಢಪಟ್ಟಿದೆ. ಈ ನಾಲ್ಕು ಪ್ರದೇಶಗಳನ್ನು ಕಂಟೈನ್‌ಮೆಂಟ್ ಝೋನ್‌ ಆಗಿ ಗುರುತಿಸಲಾಗಿದೆ ಎಂದು ವಿವರಿಸಿದರು.

‘ಕೋವಿಡ್ ಪ್ರಕರಣಗಳು ಹೆಚ್ಚಳವಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಆದರೆ, ಜನ ಸಂಚಾರ ಎಂದಿನಂತೆಯೇ ಸಹಜ ಸ್ಥಿತಿಯಲ್ಲಿದೆ. ಮಾಸ್ಕ್ ಧರಿಸದವರಿಗೆ ಆಡಳಿತ ದಂಡ ವಿಧಿಸುತ್ತಿದ್ದರೂ, ಹಲವರು ಈಗಲೂ ಮಾಸ್ಕ್ ಇಲ್ಲದೆ ತಿರುಗಾಡುತ್ತಿದ್ದಾರೆ. ಇನ್ನು ಕೆಲವರ ಮುಖದಲ್ಲಿ ಮಾಸ್ಕ್‌ ಇದ್ದರೂ, ವೈಜ್ಞಾನಿಕವಾಗಿ ಅವರು ಮಾಸ್ಕ್ ಹಾಕಿರುವುದಿಲ್ಲ. ಇಂತಹವರೇ ರೋಗ ಹರಡಲು ಕಾರಣರಾಗುತ್ತಾರೆ’ ಎಂದು ಅಂಗಡಿಕಾರರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಲಸಿಕೆ ಶುಕ್ರವಾರಕ್ಕೆ ಲಭ್ಯ: ಡಿಎಚ್‌ಒ

ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಲಸಿಕೆ ಪಡೆಯಲು ಜನರು ಮುಗಿಬೀಳುತ್ತಿದ್ದಾರೆ. ಕೋವಿಡ್ ನಿಯಂತ್ರಣ ಲಸಿಕೆ ಪಡೆಯಲು ಮಂಗಳವಾರ ವೆನ್ಲಾಕ್ ಆಸ್ಪತ್ರೆಗೆ ತೆರಳಿದ್ದ ಹಲವರು, ಲಸಿಕೆಯ ಅಲಭ್ಯತೆಯಿಂದ ವಾಪಸಾದರು.

ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್‌ಕುಮಾರ್ ಅವರ ಗಮನ ಸೆಳೆದಾಗ, ‘ಮಂಗಳೂರು ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಮಂಗಳವಾರ ಲಸಿಕೆ ಕೊರತೆ ಎದುರಾಗಿತ್ತು. ಲಸಿಕೆ ತರಲು ಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿದ್ದು, ಶುಕ್ರವಾರದ ವೇಳೆಗೆ ಲಸಿಕೆ ಲಭ್ಯವಾಗಿದೆ’ ಎಂದು ಪ್ರತಿಕ್ರಿಯಿಸಿದರು.

ಕಾಸರಗೋಡಿನಲ್ಲಿ 861 ಪ್ರಕರಣ

ನೆರೆಯ ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 861 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.815 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಒಟ್ಟು 5325 ಸಕ್ರಿಯ ಪ್ರಕರಣಗಳು ಇವೆ.

‘ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಹರಡುವಿಕೆ ತೀವ್ರವಾಗಿದ್ದು, ನಿಯಂತ್ರಣಕ್ಕೆ ಸಹಕರಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಸಾರ್ವಜನಿಕರನ್ನು ವಿನಂತಿಸಿದ್ದಾರೆ.

ಏ.13ರಿಂದ 18ವರೆಗೆ ಜಿಲ್ಲೆಯಲ್ಲಿ ನಡೆಸಿದ ಆರ್.ಟಿ.ಪಿ.ಸಿ.ಆರ್ ತಪಾಸಣೆಗಳಲ್ಲಿ ರೋಗ ಹರಡುವಿಕೆಯ ತೀವ್ರತೆ ಅಧಿಕವಾಗಿರುವುದು (ಶೇ 14.9) ಪತ್ತೆಯಾಗಿದೆ. ಇದೇ ಸ್ಥಿತಿ ಮುಂದುವರಿದಲ್ಲಿ ರೋಗಿಗಳ ಆರೈಕೆಗೆ ಸಮಸ್ಯೆಯಾಗಬಹುದು. ಜನರೊಂದಿಗೆ ಸದಾ ಸಂಪರ್ಕದಲ್ಲಿರುವ ವ್ಯಕ್ತಿಗಳು, ವ್ಯಾಪಾರಿಗಳು, ವ್ಯಾಪಾರ ಸಂಸ್ಥೆಗಳ ಸಿಬ್ಬಂದಿ, ಆಟೊ ಚಾಲಕರು, ಖಾಸಗಿ-ಸರ್ಕಾರಿ ಬಸ್‌ಗಳ ಸಿಬ್ಬಂದಿ 14 ದಿನಗಳಿಗೊಮ್ಮೆ ಉಚಿತ ತಪಾಸಣೆಗೆ ಒಳಗಾಗಬೇಕು ಎಂದು ಅವರು ವಿನಂತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT