ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ ಸಿಟಿ: 7 ಕಾಮಗಾರಿ ಪೂರ್ಣ

₹558 ಕೋಟಿ ವೆಚ್ಚದ 26 ಕಾಮಗಾರಿ ಪ್ರಗತಿಯಲ್ಲಿ: ಮುಹಮ್ಮದ್ ನಝೀರ್‌
Last Updated 11 ಜುಲೈ 2020, 8:06 IST
ಅಕ್ಷರ ಗಾತ್ರ

ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ಇಲ್ಲಿಯವರೆಗೆ ₹10.62 ಕೋಟಿ ವೆಚ್ಚದಲ್ಲಿ ಏಳು ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಮಂಗಳೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ನಝೀರ್ ತಿಳಿಸಿದರು.

ಇಲ್ಲಿನ ಪಾಲಿಕೆ ಕಟ್ಟಡದಲ್ಲಿರುವ ಸ್ಮಾರ್ಟ್‌ಸಿಟಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ₹558.78 ಕೋಟಿ ವೆಚ್ಚದ 26 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

ನಗರದ ಕ್ಲಾಕ್ ಟವರ್, ನೆಹರೂ ಮೈದಾನ ಸಮೀಪದ ಸ್ಮಾರ್ಟ್ ರಸ್ತೆ, ಪಾನ್ ಸಿಟಿಯಲ್ಲಿ ಸ್ಮಾರ್ಟ್ ಬಸ್ ಸೌಕರ್ಯ ಮತ್ತು ಇ- ಶೌಚಾಲಯ ಮೊದಲ ಹಾಗೂ ಎರಡನೇ ಹಂತ, ಸ್ಮಾರ್ಟ್ ಸಿಟಿ ಕಚೇರಿ ಒಳಾಂಗಣ ವಿನ್ಯಾಸ ಹಾಗೂ ವೆನ್ಲಾಕ್ ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ಬ್ಲಾಕ್‌ನಲ್ಲಿ 37 ಹಾಸಿಗೆಗಳ ಐಸಿಯು, ಸರ್ಕಾರಿ ಕಟ್ಟಡಗಳಲ್ಲಿ ಎಲ್‌ಇಡಿ ಬಲ್ಬ್‌ಗಳ ಅಳವಡಿಕೆ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ತಿಳಿಸಿದರು.

ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆಯಡಿ 26 ಕಾಮಗಾರಿಗಳು ಪ್ರಗತಿಯಲ್ಲಿದ್ದು, ಇವುಗಳಲ್ಲಿ ಕೆಲವು ಕಾಮಗಾರಿಗಳು ಅಂತಿಮ ಹಂತದಲ್ಲಿವೆ. ಇನ್ನು ಸುಮಾರು ₹81 ಕೋಟಿ ವೆಚ್ಚದ ನಾಲ್ಕು ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ. ₹259.54 ಕೋಟಿ ವೆಚ್ಚದ ಐದು ಕಾಮಗಾರಿಗಳು ಸಮಗ್ರ ಯೋಜನಾ ವರದಿಯ ಹಂತದಲ್ಲಿವೆ ಎಂದು ಮಾಹಿತಿ ನೀಡಿದರು.

ಸ್ಮಾರ್ಟ್ ಸಿಟಿ ಅಡಿಯಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ₹445 ಕೊಟಿ ವೆಚ್ಚದ ಪಂಪ್‌ವೆಲ್ ಬಸ್ ನಿಲ್ದಾಣ, ₹79 ಕೋಟಿ ವೆಚ್ಚದ ಹಂಪನಕಟ್ಟೆಯಲ್ಲಿ ಬಹುಮಹಡಿ ಕಾರ್‌ ಪಾರ್ಕಿಂಗ್, ₹114 ಕೋಟಿ ವೆಚ್ಚದ ಕೇಂದ್ರ ಮಾರುಕಟ್ಟೆ ಪುನರ್ ನಿರ್ಮಾಣ ಸೇರಿದಂತೆ ಒಟ್ಟು ₹707 ಕೋಟಿ ವೆಚ್ಚದ ಐದು ಕಾಮಗಾರಿಗಳು ಸೇರಿವೆ ಎಂದು ಹೇಳಿದರು.

ಮಂಗಳೂರು ಸ್ಮಾರ್ಟ್‌ಸಿಟಿ ವ್ಯಾಪ್ತಿಯಲ್ಲಿನ ಕಾಮಗಾರಿಗಳು ಹಾಗೂ ಟೆಂಡರ್‌ಗಳಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಎಲ್ಲ ಯೋಜನೆಗಳು, ಕಾಮಗಾರಿಗಳಿಗೆ ಡಿಪಿಆರ್ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಪದವೀಧರರಿಗೆ ಇಂಟರ್ನ್‌ಶಿಪ್

ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಪದವೀಧರರಿಗೆ ‘ದಿ ಅರ್ಬನ್ ಲರ್ನಿಂಗ್ ಇಂಟರ್ನ್‌ಶಿಪ್’ ಪ್ರೋಗ್ರಾಂ ಯೋಜನೆ ಆರಂಭಿಸಲಾಗುತ್ತಿದೆ. ಈ ಯೋಜನೆಯಡಿ ಸುಮಾರು 300 ಮಂದಿಯನ್ನು ನೇಮಕ ಮಾಡಿಕೊಳ್ಳಲು ಅವಕಾಶವಿದೆ ಎಂದು ಮುಹಮ್ಮದ್ ನಝೀರ್‌ ಹೇಳಿದರು.

ಈ ಯೋಜನೆಯಲ್ಲಿ ತಾಂತ್ರಿಕ, ವೈದ್ಯಕೀಯ, ನರ್ಸಿಂಗ್, ಸಮಾಜ ಕಾರ್ಯ ಸೇರಿದಂತೆ ಬೇರೆ ಬೇರೆ ವಲಯಗಳಲ್ಲಿ ಅಧ್ಯಯನ ಮಾಡುವವರಿಗೆ ಅವಕಾಶ ಇದೆ. ಅಧಿಕೃತ ಪ್ರಮಾಣಪತ್ರ ದೊರೆಯಲಿದೆ. ಆಸಕ್ತರು www.aicte-india.org ವೆಬ್‌ಸೈಟ್‌ ಮೂಲಕ ನೋಂದಣಿ ಮಾಡಬಹುದು ಎಂದರು.

ಪಿಪಿಪಿ ಯೋಜನೆಯಲ್ಲಿ ಸರ್ಕಾರಿ ಕಚೇರಿ ಕಟ್ಟಡಗಳ ಮೇಲೆ ಸೌರ ಚಾವಣಿ ಅನುಷ್ಠಾನ ಮಾಡಲಾಗುತ್ತಿದ್ದು, 1,400 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT