ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ಆಚರಣೆಯ ನೈಜ ಚಿತ್ರಣ ಕಟ್ಟಿಕೊಟ್ಟ 'ಆಟಿದ ಗೇನ'

Published : 5 ಆಗಸ್ಟ್ 2024, 6:00 IST
Last Updated : 5 ಆಗಸ್ಟ್ 2024, 6:00 IST
ಫಾಲೋ ಮಾಡಿ
Comments

ಮಂಗಳೂರು: ತುಳುನಾಡಿನ ಆಟಿ ತಿಂಗಳ ಆಚರಣೆಗಳ ಹಿಂದಿನ ನೈಜ ಚಿತ್ರಣ ನೀಡುವ 'ಆಟಿದ ಗೇನ' ಕಾರ್ಯಕ್ರಮ ಇಲ್ಲಿನ ತುಳು ಭವನದಲ್ಲಿ ಭಾನುವಾರ ನಡೆಯಿತು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮವು, ಈಚಿನ ದಿನಗಳಲ್ಲಿ ಆಟಿ ಆಚರಣೆಯಲ್ಲಿ ಕಾಣುವ ವೈಭವೀಕರಣದ ಆಚೆ, ತುಳುವರು ಈ ತಿಂಗಳಿನಲ್ಲಿ ಬದುಕನ್ನು ಹೇಗೆ ಕಳೆಯುತ್ತಿದ್ದರು ಎಂಬುದನ್ನು ಪರಿಚಯಿಸುವ ಪ್ರಯತ್ನ ಮಾಡಿತು. ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಆಟಿಯ ಚಿತ್ರ ರಚನಾ ಸ್ಪರ್ಧೆ ಹಾಗೂ ವಿಚಾರ ಮಂಥನ ಕೂಟಗಳು ಈ ಬಗ್ಗೆ ಬೆಳಕು ಚೆಲ್ಲಿದವು. ಹಿರಿಯರಿಂದ ತಿಳಿದ ಆಟಿಯ ಮಾಹಿತಿ ಹಾಗೂ ಆಟಿ ತಿಂಗಳಲ್ಲಿ ತುಳುನಾಡಿನ ಪ್ರಕೃತಿ ವೈಶಿಷ್ಟ್ಯಗಳನ್ನು ಆಧರಿಸಿ ವಿದ್ಯಾರ್ಥಿಗಳು ರಚಿಸಿದ ಚಿತ್ರಗಳು ಆಟಿ ನಿಜ ಸೊಗಡನ್ನು ಕಟ್ಟಿಕೊಟ್ಟವು.

ತುಳು ಸಂಶೋಧಕಿ  ಇಂದಿರಾ ಹೆಗ್ಡೆ, ‘ಹಿಂದೆಲ್ಲ ಆಟಿ ಎಂದರೆ ಅನಿಷ್ಟದ ತಿಂಗಳು ಎಂಬ ಆತಂಕ ತುಳುವರಲ್ಲಿ ಮನೆಮಾಡಿತ್ತು.  ಜೀವನಕ್ಕಾಗಿ ನಿರ್ದಿಷ್ಟ ವೃತ್ತಿಯನ್ನು ಆಧರಿಸಿದವರು  ಈ ತಿಂಗಳಲ್ಲಿ ಕಷ್ಟದಲ್ಲಿ ಕಾಲ ಕಳೆಯಬೇಕಾಗಿತ್ತು. ಆದರೆ, ಇವತ್ತು ಆಟಿ ಕಾರ್ಯಕ್ರಮಗಳಲ್ಲಿ ಗೌಜಿ, ಆಡಂಬರಗಳನ್ನು ಕಾಣುತ್ತಿದ್ದೇವೆ. ಇದರ ಔಚಿತ್ಯದ ಬಗ್ಗೆ ಜಿಜ್ಞಾಸೆಯಾಗಲಿ’ ಎಂದರು.

‘ಯಾವುದೇ ಹಬ್ಬ, ಆರಾಧನೆಗಳು ನಡೆಯದ ಆಟಿ ತಿಂಗಳಲ್ಲಿ, ನೂರು ವರ್ಷಗಳಿಂದ ಈಚೆಗೆ ವೈದಿಕ ಪ್ರಭಾವದಿಂದ ನಾಗರ ಪಂಚಮಿ ಆಚರಣೆಗೆ ಬಂತು. ಭೂಮಿ ತಂಪಾಗಿರುವ ಮಳೆಗಾಲದಲ್ಲಿ ನಾಗನಿಗೆ ತನು ಅರ್ಪಿಸುವ ಸಂಪ್ರದಾಯ ತುಳುನಾಡಿನಲ್ಲಿ ಇರಲಿಲ್ಲ’ ಎಂದರು.

‘ವಿಚಾರ ಮಂಥನ’ವನ್ನು ಉದ್ಘಾಟಿಸಿದ  ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ.ಖಾದರ್ ಷಾ, ‘ತುಳು ಅಕಾಡೆಮಿಯು 'ಆಟಿ ಗೇನ'ದ ವಿಶಿಷ್ಟ ಕಾರ್ಯಕ್ರಮ. ಹಿಂದಿನ ಕಾಲದ ಆಟಿ ತಿಂಗಳ ಬದುಕನ್ನು ಅರಿಯಲು ಇದು ನೆರವಾಗಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್, ‘ಆಟಿ ತಿಂಗಳ ಭೂತಾರಾಧನೆಯೂ ಸೇರಿದಂತೆ, ತುಳುನಾಡಿನ ವಿವಿಧ ಮೂಲ ಸಮುದಾಯಗಳ ಸಾಂಸ್ಕೃತಿಕ ಆಯಾಮ, ಆಚಾರ , ವಿಚಾರ, ಸಂಪ್ರದಾಯಗಳ ಅಧ್ಯಯನ ಹಾಗೂ ದಾಖಲೀಕರಣವನ್ನು ಅಕಾಡೆಮಿ ಮಾಡಲಿದೆ’ ಎಂದರು.

ತುಳು ಅಕಾಡೆಮಿ ಸದಸ್ಯ ರೋಹಿತ್ ಉಳ್ಳಾಲ್ , ಮುಂಡಾಲ ಯುವ ವೇದಿಕೆಯ ಅಧ್ಯಕ್ಷ ರವಿ ಕುದ್ಮುಲ್ ಗಾರ್ಡನ್  ಮಾತನಾಡಿದರು.

ಶ್ವಾಸಕೋಶ ತಜ್ಞೆ ಡಾ.ಅಲ್ಕಾ ಸಿ.ಭಟ್, ಚಂದ್ರಪ್ರಭಾ ಶೇಖರ್, ಅನಿತಾ ದಯಾಕರ್, ರತ್ನಾವತಿ ರಂಜನ್, ಲತಾ ಎಸ್.ಬಿ.‌, ಚೈತ್ರಾ ಮುಲ್ಲಕಾಡ್  ಭಾಗವಹಿಸಿದ್ದರು.

ಕಲಾವಿದರಾದ ಬಿ.ಪಿ.ಮೋಹನ್ ಕುಮಾರ್ , ನೇಮಿರಾಜ್ ಶೆಟ್ಟಿ, ಹರೀಶ್ ಕೊಡಿಯಾಲಬೈಲ್ ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಸುಪ್ರಿತಾ ಪ್ರಸಾದ್ ಸ್ವಾಗತಿಸಿದರು.

ಸುಮಾ ಯಾದವ್ ಕಾರ್ಯಕ್ರಮ ನಿರ್ವಹಿಸಿದರು. ಶ್ರದ್ಧಾ ಎಸ್. ವಂದಿಸಿದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT