ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಟಿದ ಪರ್ಬ | ಡೆನ್ನನ ಡನ್ನಾನ...ತುಳು ಸಂಸ್ಕೃತಿ ಪ್ರದರ್ಶನ

ಬಿಜೆಪಿ ದಕ್ಷಿಣ ಮಂಡಲ ಆಯೋಜಿಸಿದ್ದ ಆಟಿದ ಪರ್ಬದಲ್ಲಿ ಬಗೆ ಬಗೆ ತಿನಿಸು, ನೃತ್ಯದ ಸೊಗಸು
Published 11 ಆಗಸ್ಟ್ 2024, 13:38 IST
Last Updated 11 ಆಗಸ್ಟ್ 2024, 13:38 IST
ಅಕ್ಷರ ಗಾತ್ರ

ಮಂಗಳೂರು: ಬಾಗಿಲಲ್ಲಿ ಸ್ವಾಗತ ಕೋರಲು ಆಟಿ ಕಳಂಜ. ಒಳಗೆ ಕೋರಿಕಟ್ಟ (ಕೋಳಿ ಅಂಕ), ತಾರಾಯಿಕಟ್ಟ (ತೆಂಗಿನಕಾಯಿ ಪರಸ್ಪರ ಒಡೆಯುವ ಸ್ಪರ್ಧೆ), ನೃತ್ಯದ ಸೊಗಸು, ಬದಿಯಲ್ಲಿ ತುಳುನಾಡಿನ ಆಹಾರ ಪದ್ಧತಿ ಬಿಂಬಿಸುವ ನೂರಕ್ಕೂ ಹೆಚ್ಚು ತಿನಿಸು. ಡೆನ್ನನ ಡೆನ್ನಾನ...ಹಾಡಿನ ವೈಭವ. 

ಬಿಜೆಪಿ ಮಂಗಳೂರು ದಕ್ಷಿಣ ಮಂಡಲ, ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಆಟಿದ ಪರ್ಬದಲ್ಲಿ (ಆಷಾಢ ಹಬ್ಬ) ತುಳುನಾಡ ಜನರ ಆಹಾರ, ಸಂಸ್ಕೃತಿ, ನಂಬಿಕೆ, ಆಚಾರಗಳು ಮೇಳೈಸಿದವು.

ಎಳ್ಳುಂಡೆ, ಜೇನುಂಡೆ, ಚುರುಂಬರಿ ಉಂಡೆ, ಮಜ್ಜಿಗೆ ಮೆಣಸು, ಹಲಸಿನ ಹಪ್ಪಳ, ಅಂಬಡೆ ಉಪ್ಪಿನಕಾಯಿ, ಪೂಂಬೆ ಚಟ್ನಿ (ಬಾಳೆಹೂ), ಕುಕ್ಕುದ ಚಟ್ನಿ (ಮಾವಿನ ಚಟ್ನಿ), ಕುಡು ಚಟ್ನಿ (ಹುರುಳಿ ಚಟ್ನಿ), ತೊಜಂಕ್ ವಡೆ, ಕಂಚಲ ಅಂಬಡೆ ಪುಳಿಮುಂಚಿ, ಕೆಸು ದಂಟ್‌ದ ಪುಳಿಮುಂಚಿ, ಉಪ್ಪಡ್ ಪಚ್ಚಿರ್, ಗೆಂಡದಡ್ಡೆ, ಗುಳಿಯಪ್ಪ, ಕಲ್ತಪ್ಪ, ಸೇಮಿಗೆ, ಮೂಡೆ ಇತ್ಯಾದಿ ಸಸ್ಯಾಹಾರ ತಿನಿಸು ಒಂದೆಡೆ. ಮಾಂಸಾಹಾರದ ವಿಭಾಗದಲ್ಲಿ ಎಟ್ಟಿಪುಡಿ ಚಟ್ನಿ, ಕಡ್ಲೆ ಬಲ್ಯಾರ್ ಸುಕ್ಕ, ಎಟ್ಟಿ ಪುಂಡಿ, ಮರುವಾಯಿ ಸುಕ್ಕ, ಮೀನಿನ ರಸ, ಬಂಗುಡೆ ರೋಸ್ಟ್, ಕೋರಿ ಸುಕ್ಕ, ಕಲ್ಲಜೆಂಜಿ ಸುಕ್ಕ, ಎಟ್ಟಿ ಗಸಿ, ಬಂಗುಡೆ ಪುಳಿಮುಂಚಿ, ಮರುವಾಯಿ ಪುಂಡಿ ಸೇರಿದಂತೆ ಹಲವು ಬಗೆ ಇತ್ತು.

ಉದ್ಘಾಟನಾ ಸಮಾರಂಭದಲ್ಲಿ ವೇದಿಕೆ ಬದಿಯಲ್ಲಿ ಬಾವಿಯಿಂದ ನೀರು ಸೇದುವ ಪ್ರಾತ್ಯಕ್ಷಿಕೆ ತೋರಿಸಲಾಯಿತು. ವೇದಿಕೆಯಲ್ಲಿ ಕೋಳಿ ಅಂಕ ಮತ್ತು ತೆಂಗಿನ ಕಾಯಿ ಒಡೆಯುವ ಸ್ಪರ್ಧೆಯೂ ಮುದ ನೀಡಿತು. ಅತಿಥಿಗಳನ್ನು ಸ್ವಾಗತಿಸಲು ಶಾಲು ಮತ್ತು ಬಚ್ಚಿರೆ ಬಜ್ಜೈ (ಎಲೆ ಅಡಿಕೆ) ಇತ್ತು. ಉದ್ಘಾಟನಾ ಸಮಾರಂಭದ ನಂತರ ಹಾಡು–ನೃತ್ಯದಲ್ಲಿ ಮಹಾನಗರ ಪಾಲಿಕೆ ಸದಸ್ಯೆಯರು ಸೇರಿದಂತೆ ಜನಪ್ರತಿನಿಧಿಗಳೂ ಮಿಂಚಿದರು. ಪಂಚೆ ಉಟ್ಟ ಪುರುಷರು ಹುಲಿವೇಷದ ತಲೆಯನ್ನು ಹೊತ್ತುಕೊಂಡು ಹೆಜ್ಜೆ ಹಾಕಿದರು. ಆಟಿಕಳಂಜದ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದುದು ಕೂಡ ಕಂಡುಬಂತು.

ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ ದೇವರು ಅತ್ಯಂತ ಪ್ರೀತಿಯಿಂದ, ಸಾವಧಾನವಾಗಿ ಸೃಷ್ಟಿಸಿದ ಪ್ರದೇಶ ತುಳುನಾಡು. ಬಿಜೆಪಿ ನೆಲದ ಪ್ರೀತಿ ಇರುವ ಪಕ್ಷ ಆಗಿರುವುದರಿಂದ ಪರಂಪರೆಯನ್ನು ಬಿಂಬಿಸುವ ಇಂಥ ಕಾರ್ಯಕ್ರಮಗಳನ್ನು ಸುಸೂತ್ರವಾಗಿ ಆಯೋಜಿಸುತ್ತಿದೆ ಎಂದರು.

ಶಾಸಕ ವೇದವ್ಯಾಸ ಕಾಮತ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ, ಉಪಾಧ್ಯಕ್ಷ ರಾಕೇಶ್ ರೈ, ಖಜಾಂಚಿ ಸಂಜಯ್ ಪ್ರಭು, ವಕ್ತಾರ ಸತೀಶ್ ಪ್ರಭು, ಮಹಿಳಾ ಮೋರ್ಚಾ ಅಧ್ಯಕ್ಷೆ ಪೂರ್ಣಿಮಾ ರಾವ್, ಮುಖಂಡರಾದ ಬಿ.ನಾಗರಾಜ ಶೆಟ್ಟಿ, ಮೋನಪ್ಪ ಭಂಡಾರಿ, ರವಿಶಂಕರ್ ಮಿಜಾರು, ನಿತಿನ್ ಪ್ರಭು, ನಾರಾಯಣ ಗಟ್ಟಿ ಇದ್ದರು. ರಮೇಶ್ ಕಂಡೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು.

ಆಟಿದ ಪರ್ಬದಲ್ಲಿ ಹುಲಿವೇಷದ ತಲೆಹೊತ್ತುಕೊಂಡು ಕುಣಿದ ಪುರುಷರು -ಪ್ರಜಾವಾಣಿ ಚಿತ್ರ

ಆಟಿದ ಪರ್ಬದಲ್ಲಿ ಹುಲಿವೇಷದ ತಲೆಹೊತ್ತುಕೊಂಡು ಕುಣಿದ ಪುರುಷರು -ಪ್ರಜಾವಾಣಿ ಚಿತ್ರ 

ಆಟಿ ಅಶುಭವಲ್ಲ: ವಸಂತ ಶೆಟ್ಟಿ

ಆಷಾಢ ಅಥವಾ ಆಟಿ ತಿಂಗಳ ಬಗ್ಗೆ ಅನೇಕ ನಂಬಿಕೆಗಳು ಇವೆ. ಅದರಲ್ಲಿ ಪ್ರಮುಖವಾದದ್ದು ಆಟಿ ಅಶುಭ ಎಂಬುದು. ವಾಸ್ತವವಾಗಿ ಆಟಿ ಅಶುಭ ತಿಂಗಳಲ್ಲ. ನಿರ್ದಿಷ್ಟ ಕಾರಣಗಳಿಂದ ಹಿಂದೆ ಈ ತಿಂಗಳಲ್ಲಿ ಶುಭ ಕಾರ್ಯಗಳನ್ನು ಕೈಗೊಳ್ಳಲು ಆಗುತ್ತಿರಲಿಲ್ಲ. ಅದು ರೂಢಿಗತವಾಗಿದೆ ಎಂದು ಸಾನಿಧ್ಯ ಸಂಸ್ಥೆಯ ಆಡಳಿತಾಧಿಕಾರಿ ವಸಂತ ಕುಮಾರ್ ಶೆಟ್ಟಿ ಅಭಿಪ್ರಾಯಪಟ್ಟರು.

ಆಟಿದ ಪರ್ಬದಲ್ಲಿ ಉಪನ್ಯಾಸ ನೀಡಿದ ಅವರು ‘ಆಷಾಢವು ಹಿಂದೂ ಕ್ಯಾಲೆಂಡರ್‌ನ ನಾಲ್ಕನೇ ತಿಂಗಳು. ಸೂರ್ಯ ಉತ್ತರಾಯಣದಿಂದ ದಕ್ಷಿಣಾಯಣಕ್ಕೆ ಸಾಗುವ ಈ ಕಾಲವನ್ನು ಶೂನ್ಯ ತಿಂಗಳು ಎಂದು ಕರೆಯುತ್ತಾರೆ. ಈ ಕಾರಣದಿಂದಲೇ ಈ ಸಂದರ್ಭದಲ್ಲಿ ಶುಭಕಾರ್ಯಗಳನ್ನು ಮಾಡಿದರೆ ಫಲ‌ ಕೊಡುವುದಿಲ್ಲ ಎಂಬ ನಂಬಿಕೆ ಇದೆ. ಆದರೆ ಆಷಾಢ ಅಶುಭ ಎಂದು ಯಾವ ಶಾಸ್ತ್ರದಲ್ಲೂ ಉಲ್ಲೇಖವಿಲ್ಲ’ ಎಂದರು.

‘ದೇವಾನುದೇವತೆಗಳು ಉತ್ತರಾಯಣದಲ್ಲಿ ಎಚ್ಚರಿಕೆಯಿಂದ ಚುರುಕಾಗಿ ಇರುತ್ತಾರೆ. ದಕ್ಷಿಣಾಯಣದಲ್ಲಿ ಅವರಿಗೆಲ್ಲ ಯೋಗ ನಿದ್ರೆ. ಆದ್ದರಿಂದ ಪ್ರಾರ್ಥನೆ ಕೇಳಿಸಿಕೊಳ್ಳಲು ಆಗವುದಿಲ್ಲ ಎಂಬ ಮಾತು ಇದೆ. ಈ ಕಾರಣದಿಂದ ಆಟಿ ತಿಂಗಳಲ್ಲಿ ಒಳ್ಳೆಯ ಕಾರ್ಯಗಳನ್ನು ಬಿಟ್ಟು ಕೃಷಿಗೆ ಆದ್ಯತೆ ಕೊಟ್ಟು ಹೊಲ–ಗದ್ದೆಯಲ್ಲಿ ಕೆಲಸ ಮಾಡುತ್ತಾರೆ.‌ ಆಟಿ ತಿಂಗಳು ಅಶುಭ ಎಂದಾದರೆ ಪುರಿ ಜಗನ್ನಾಥ ಜಾತ್ರೆ ‌ಪಂಢರಪುರ ಪಾದಯಾತ್ರೆ ಗುರುಪೂರ್ಣಿಮೆ ಇತ್ಯಾದಿಗಳನ್ನು ಮಾಡುತ್ತಿರಲಿಲ್ಲ. ಆಟಿ ತಿಂಗಳು ಭಗೀರಥ ಪ್ರಯತ್ನ ಮಾಡಿದ ಬಲಿ ಚಕ್ರವರ್ತಿ ವ್ರತ ಕೈಗೊಂಡ ಚಾಮುಂಡೇಶ್ವರಿ ಜನಿಸಿದ ಭೀಮನ ಅಮಾವಾಸ್ಯೆ ವ್ರತ ಮಾಡುವ ಏಕಾದಶಿ ಆಚರಿಸುವ ತಿಂಗಳು’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT