ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬಕ್ಕ ಭವನ ನಿರ್ಮಾಣವಾಗದಿದ್ದರೆ ಹೋರಾಟ

ಅಬ್ಬಕ್ಕ ಉತ್ಸವ ಸಮಿತಿಯಿಂದ ಎಚ್ಚರಿಕೆ
Last Updated 7 ಅಕ್ಟೋಬರ್ 2020, 3:43 IST
ಅಕ್ಷರ ಗಾತ್ರ

ಮಂಗಳೂರು: ವೀರರಾಣಿ ಅಬ್ಬಕ್ಕ ಭವನ, ಅಬ್ಬಕ್ಕ ಅಧ್ಯಯನ ಕೇಂದ್ರ ನಿರ್ಮಾಣ ಕಾರ್ಯರೂಪಕ್ಕೆ ತರಬೇಕು. ಇಲ್ಲವಾದರೆ ಜಿಲ್ಲಾಧಿಕಾರಿ ಕಚೇರಿ, ನಗರಸಭಾ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಸ್ವಾಗತಾಧ್ಯಕ್ಷ ಕೆ. ಜಯರಾಮ ಶೆಟ್ಟಿ ಎಚ್ಚರಿಸಿದರು.

ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತೊಕ್ಕೊಟ್ಟು ಬಸ್ ನಿಲ್ದಾಣ ಬಳಿ ರಾಣಿ ಅಬ್ಬಕ್ಕ ಭವನಕ್ಕೆ 2012-13ರಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಅನುಮೋದನೆ ನೀಡಿದ್ದರು. 41 ಸೆಂಟ್ಸ್ ಸ್ಥಳವನ್ನು ಮೀಸಲಿಡಲಾಗಿದ್ದು, ₹8 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಇದೀಗ 8 ವರ್ಷ ಕಳೆದಿದ್ದು, ಭವನ ನಿರ್ಮಾಣ ಕಾಮಗಾರಿ ಮಾತ್ರ ಆರಂಭವಾಗಿಲ್ಲ’ ಎಂದರು.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ವೀರರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ ಸ್ಥಾಪನೆಗೆ ಸದಾನಂದ ಗೌಡ ಅವರು 2015-16ರಲ್ಲಿ ₹1 ಕೋಟಿ ಅನುದಾನ ಬಿಡುಗಡೆ ಮಾಡಿದ್ದರೂ, ಅಧ್ಯಯನ ಕೇಂದ್ರ ಸ್ಥಾಪನೆಯಾಗಲಿಲ್ಲ. ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೀರರಾಣಿ ಅಬ್ಬಕ್ಕಳ ಹೆಸರಿಡುವಂತೆ 20 ವರ್ಷಗಳಿಂದ ರಾಜ್ಯ ಸರ್ಕಾರ, ಸಂಸದರು, ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ಆದರೂ, ವಿಮಾನ ನಿಲ್ದಾಣಕ್ಕೆ ಅಬ್ಬಕ್ಕಳ ಹೆಸರು ನೀಡಿಲ್ಲ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಹಳೆ ಕೆಂಪು ಕಲ್ಲಿನ ಕಟ್ಟಡ ಪೋರ್ಚುಗೀಸರ ಅವಧಿಯಲ್ಲಿ ರಾಣಿ ಅಬ್ಬಕ್ಕ ಕಟ್ಟಿದ್ದರ ಕುರುಹಾಗಿದೆ. ಆ ನೆನಪಿಗಾಗಿ ಜಿಲ್ಲಾಧಿಕಾರಿ ಕಚೇರಿ ಎದುರಿನ ವೃತ್ತದಲ್ಲಿ ಅಬ್ಬಕ್ಕ ರಾಣಿ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಮಂಗಳೂರು ಸೆಂಟ್ರಲ್ ಅಥವಾ ಜಂಕ್ಷನ್‌ ರೈಲು ನಿಲ್ದಾಣಕ್ಕೆ, ರಾಷ್ಟ್ರೀಯ ಹೆದ್ದಾರಿ-66ರ ತೊಕ್ಕೊಟ್ಟು ಫ್ಲೈ ಓವರ್‌ಗೆ, ಹೊಸ ಓವರ್ ಬ್ರಿಡ್ಜ್ ಜಂಕ್ಷನ್‌ಗೆ ವೀರರಾಣಿ ಅಬ್ಬಕ್ಕಳ ಹೆಸರಿಡುವ ಬಗ್ಗೆ ಇತ್ತೀಚೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

ಸಮಿತಿಯ ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ, ಅಧ್ಯಕ್ಷ ದಿನಕರ ಉಳ್ಳಾಲ್, ಕೋಶಾಧಿಕಾರಿ ಆನಂದ ಕೆ. ಅಸೈಗೋಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT