ಮಂಗಳೂರು: ‘ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವೀಸಾ ಏಜೆಂಟರೊಬ್ಬರು ಹಲವಾರು ಜನರಿಗೆ ಮೋಸ ಮಾಡಿದ್ದಾರೆ. ಉದ್ಯೋಗವೂ ಇಲ್ಲದೆ, ಏಜೆಂಟರಿಗೆ ನೀಡಿರುವ ಹಣವೂ ವಾಪಸ್ ದೊರೆಯದೆ ಸಂಕಷ್ಟದಲ್ಲಿದ್ದೇವೆ’ ಎಂದು ಸಂತ್ರಸ್ತರು ಅಳಲು ತೋಡಿಕೊಂಡರು.
ತುಳುನಾಡ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ವಂಚನೆಗೊಳಗಾಗಿರುವ ಜೈಸನ್ ಡಿಸೋಜ ಮಾತನಾಡಿ, ‘ನಗರದಲ್ಲಿ ಕಚೇರಿ ಹೊಂದಿರುವ ಸಂಸ್ಥೆಯೊಂದರ ಜಾಹೀರಾತನ್ನು ಗಮನಿಸಿ, ಆರ್ಥಿಕ ಸಂಕಷ್ಟದಲ್ಲಿರುವ ನಾವು ವಿದೇಶದಲ್ಲಿ ಕೆಲಸ ಸಿಗಬಹುದೆಂಬ ಆಸೆಯಿಂದ, ಸಂಸ್ಥೆಯ ಮುಖ್ಯಸ್ಥರನ್ನು ಸಂಪರ್ಕಿಸಿದೆವು. ಪತ್ನಿ ಹಾಗೂ ನನಗೆ ನೆದರ್‌ಲ್ಯಾಂಡ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿದ ಅವರು, ಒಟ್ಟು ₹8.5 ಲಕ್ಷ ಹಣ ಪಡೆದಿದ್ದು, ಕೆಲಸ ಸಿಗದಿದ್ದರೆ ಹಣ ಮರುಪಾವತಿಸುವ ಭರವಸೆ ನೀಡಿದ್ದರು. ಹೀಗೆ ಮೂರು ವರ್ಷಗಳಿಂದ ಉದ್ಯೋಗದ ಭರವಸೆ ನೀಡುತ್ತ, ಭಾವನಾತ್ಮಕವಾಗಿ ನಿಯಂತ್ರಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ದೂರು ನೀಡದಂತೆ ಒತ್ತಡ ಹೇರುತ್ತಿದ್ದಾರೆ’ ಎಂದರು.
‘ನಮ್ಮ ಸಂಪರ್ಕದಲ್ಲಿರುವ 60ಕ್ಕೂ ಹೆಚ್ಚು ಜನರು ಇದೇ ರೀತಿ ವಂಚನೆಗೊಳಗಾಗಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಿರಬಹುದೆಂಬ ಅನುಮಾನವಿದೆ. ಕೋಟ್ಯಂತರ ರೂಪಾಯಿ ವಂಚನೆಯ ಈ ಜಾಲವನ್ನು ಪೊಲೀಸರು ಭೇದಿಸಬೇಕು’ ಎಂದು ಆಗ್ರಹಿಸಿದರು.
‘ಕುಟುಂಬದಲ್ಲಿ ಆರ್ಥಿಕ ಸಂಕಷ್ಟ ಇರುವುದರಿಂದ ದುಬೈನಲ್ಲಿ ಕೆಲಸ ಕೊಡಿಸುವುದಾಗಿ ವೀಸಾ ಏಜೆಂಟರು ಹೇಳಿದ ಮಾತನ್ನು ನಂಬಿ ಎರಡು ವರ್ಷಗಳ ಹಿಂದೆ ₹75ಸಾವಿರ ಹಣವನ್ನು ಅವರಿಗೆ ಕೊಟ್ಟಿದ್ದೆ. ಉದ್ಯೋಗವೂ ಇಲ್ಲ, ಹಣವೂ ವಾಪಸ್ ಸಿಕ್ಕಿಲ್ಲ. ನನ್ನಂತೆ ಅನೇಕ ಅಮಾಯಕ ಮಹಿಳೆಯರು ಮೋಸ ಹೋಗಿದ್ದಾರೆ’ ಎಂದು ಗೋವಾದಿಂದ ಬಂದಿದ್ದ ಅನಿತಾ ಎನ್ನುವವರು ಅಸಹಾಯಕತೆ ವ್ಯಕ್ತಪಡಿಸಿದರು.
‘ದುಬೈ ವೀಸಾದೊಂದಿಗೆ ಉದ್ಯೋಗ ಕೊಡಿಸುವುದಾಗಿ ಏಜೆಂಟರು ಹೇಳಿದ್ದರಿಂದ ಜನವರಿ 2022ರಲ್ಲಿ ₹1.30 ಲಕ್ಷ ಪಾವತಿಸಿದ್ದೆ. ಪ್ರತಿ ಬಾರಿ ಕೇಳಿದಾಗಲೂ ಇನ್ನು ಎರಡು ತಿಂಗಳುಗಳಲ್ಲಿ ಉದ್ಯೋಗಕ್ಕಾಗಿ ನೀವು ವಿದೇಶಕ್ಕೆ ಹಾರಲಿದ್ದೀರಿ ಎಂದು ಭರವಸೆ ನೀಡುತ್ತಿದ್ದ ಅವರು, 2023ರ ಫೆಬ್ರುವರಿಯಲ್ಲಿ ನೇಮಕಾತಿ ಆದೇಶವಾಗಿದೆ ಎಂದು ವ್ಯಕ್ತಿಯೊಬ್ಬನನ್ನು ಪರಿಚಯಿಸಿ, ಇದೇ ವ್ಯಕ್ತಿ ಉದ್ಯೋಗದಾತರು ಎಂದು ಕೂಡ ನಂಬಿಸಿದರು. ಇದೇ ವೇಳೆ ಸುಮಾರು 30 ಮಂದಿಗೆ ಅವರು ತಮ್ಮ ಕಚೇರಿಯಲ್ಲಿ ತರಬೇತಿಯನ್ನೂ ನೀಡಿದ್ದರು. ನಂತರ ದೇವರ ಮೇಲೆ ವಿಶ್ವಾಸವಿಡಿ ಎಂಬ ಸಂದೇಶವನ್ನು ಆಗಾಗ ವಾಟ್ಸ್‌ಆ್ಯಪ್‌ಗಳಲ್ಲಿ ಕಳುಹಿಸುವ ಅವರು, ಯಾವುದೇ ದೂರವಾಣಿ ಕರೆ ಅಥವಾ ಸಂದೇಶಗಳಿಗೆ ಪ್ರತಿಕ್ರಿಯಿಸುವುದಿಲ್ಲ. ವಿದೇಶದಲ್ಲಿ ಕೆಲಸ ಸಿಗಬಹುದೆಂಬ ನಿರೀಕ್ಷೆಯಲ್ಲಿ ಸ್ಥಳೀಯವಾಗಿ ದೊರೆತ ಉದ್ಯೋಗವನ್ನು ಕೈಬಿಟ್ಟೆ. ಈಗ ಅತಂತ್ರ ಸ್ಥಿತಿಯಾಗಿದೆ’ ಎಂದು ಏವಿಯೇಷನ್ ಕೋರ್ಸ್ ಮಾಡಿಕೊಂಡಿರುವ ಬ್ರಾಂಡನ್ ಎನ್ನುವವರು ಹೇಳಿಕೊಂಡರು.
ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಮಾತನಾಡಿ, ‘ಈ ಸಂಬಂಧ ನಗರ ಪೊಲೀಸ್ ಕಮಿಷನರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಅವರು ಈ ವಿಷಯದ ಬಗ್ಗೆ ಈಗಾಗಲೇ ಮಾಹಿತಿ ಬಂದಿದೆ ಎಂದಿದ್ದಾರೆ’ ಎಂದರು.
ವೇದಿಕೆಯ ಪ್ರಮುಖರಾದ ಪ್ರಶಾಂತ್ ಭಟ್, ಶರಣ್ ರಾಜ್, ಮುನೀರ್ ಮುಕ್ಕಚ್ಚೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.