ಮಂಗಳವಾರ, ಮಾರ್ಚ್ 28, 2023
26 °C

ಕೋರಂ ಕೊರತೆಯಿಂದ ಸಭೆ ಮುಂದೂಡಿಕೆ: ಪಂಚಾಯಿತಿ ಅಧ್ಯಕ್ಷೆ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಪ್ಪಿನಂಗಡಿ: ‘ಜನಪ್ರತಿನಿಧಿಗಳಾಗಿ ಜನರ ಸಮಸ್ಯೆಗಳಿಗೆ ಹೇಗೆ ಸ್ಪಂದನೆ ನೀಡಬೇಕು ಎಂಬುದು ತಿಳಿಸಿದೆ. ಗ್ರಾಮ ಪಂಚಾಯಿತಿ ಸಭೆಯಲ್ಲಿ ಸಭಾತ್ಯಾಗ ಮಾಡುವ ಉದ್ದೇಶ ನಮಗೆ ಇರಲಿಲ್ಲ. ಕೋರಂ ಕೊರತೆ ಇದ್ದ ಕಾರಣ ಸಭೆ ಮುಂದೂಡಿದ್ದೇವೆ. ಕಾಂಗ್ರೆಸ್‌ನವರು ಚಿಲ್ಲರೆ ರಾಜಕಾರಣ ಮಾಡುವುದನ್ನು ಬಿಡಬೇಕು’ ಎಂದು ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಮುಳಿಯ ತಿರುಗೇಟು ನೀಡಿದರು.

ಉಪ್ಪಿನಂಗಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಮಗುವೊಂದರ ಚಿಕಿತ್ಸಾ ವೆಚ್ಚಕ್ಕಾಗಿ ಗೆಳೆಯರ ಬಳಗವೊಂದು ಕಬಡ್ಡಿ ಟೂರ್ನಿ ಆಯೋಜಿಸಿ, ಅದರ ಬ್ಯಾನರ್‌ ಅನ್ನು ನೆಡ್ಚಿಲು ಎಂಬಲ್ಲಿ ಅಳವಡಿಸಲು ಪಂಚಾಯಿತಿ ಪರವಾನಗಿಗಾಗಿ ಅರ್ಜಿ ಬಂದಿತ್ತು. ನಾನು ಅದನ್ನು ಸಿಬ್ಬಂದಿಗೆ ನೀಡಿ, ಮಾನವೀಯತೆ ನೆಲೆಯಲ್ಲಿ ಶುಲ್ಕ ಬೇಡ ಎಂದಿದ್ದೆ. ಶುಲ್ಕ ಕಟ್ಟಬೇಕಾಗಿದ್ದರೂ ನಾನೇ ಕಟ್ಟುತ್ತೇನೆ ಎಂದು ಹೇಳಿದ್ದೆ. ಇದೆಲ್ಲಾ ಗೊತ್ತಿದ್ದರೂ ಪಿಡಿಒ ಅಲ್ಲಿಗೆ ಹೋಗಿ, ಸಾರ್ವಜನಿಕರ ವಿರುದ್ಧ ರೇಗಾಡಿದ್ದಾರೆ’ ಎಂದು ಹೇಳಿದರು.

‘ಬಳಿಕ ನಾನು ಸ್ಥಳಕ್ಕೆ ತೆರಳಿ ಶುಲ್ಕ ಕಟ್ಟುತ್ತೇನೆ ಎಂದರೂ, ಅವರು ಕಿವಿಗೆ ಹಾಕಿಕೊಳ್ಳದೇ ಗೊಂದಲದ ವಾತಾವರಣ ನಿರ್ಮಾಣವಾಗಲು ಕಾರಣರಾದರು. ಆಗ ಅಲ್ಲಿದ್ದ ಪಂಚಾಯಿತಿ ಸದಸ್ಯ ಸುರೇಶ್ ಅತ್ರಮಜಲು ಸಾರ್ವಜನಿಕರ ಪರವಾಗಿ ಮಾತನಾಡಿದ್ದರು. ಇದನ್ನೇ ಮುಂದಿಟ್ಟುಕೊಂಡು ಪಿಡಿಒ ಅವರು ಸುರೇಶ್ ಅತ್ರೆಮಜಲು ಸೇರಿದಂತೆ ಇನ್ನಿಬ್ಬರ ಅಮಾಯಕ ಸಾರ್ವಜನಿಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಜನಪ್ರತಿನಿಧಿಗೆ ಈ ರೀತಿಯಾದರೆ ಜನಸಾಮಾನ್ಯನ ಗತಿಯೇನು? ಅಧಿಕಾರಿಗಳ ಇಂತಹ ದುರ್ವತನೆಯನ್ನು ಖಂಡಿಸಿ, ಜನಸಾಮಾನ್ಯರಿಗೆ ನ್ಯಾಯ ದೊರಕಿಸಿಕೊಡುವುದು ಜನಪ್ರತಿನಿಧಿಯಾಗಿ ನನ್ನ ಕರ್ತವ್ಯ. ಆದ ಕಾರಣ ಗ್ರಾಮ ಪಂಚಾಯಿತಿ ಸಭೆಯಲ್ಲಿ ಖಂಡನಾ ನಿರ್ಣಯ ದಾಖಲಿಸಲು ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ನಿರ್ಧರಿಸಿದ್ದೆವು’ ಎಂದರು.

‘ಯಾವುದೇ ಸದಸ್ಯನಿಗೂ ಈ ರೀತಿ ಅನ್ಯಾಯವಾದಾಗ ನಾವು ಅದನ್ನು ಖಂಡಿಸಲು ಬದ್ಧರಿದ್ದೇವೆ. ಆದರೆ, ಇಲ್ಲಿ ನಮ್ಮ ಖಂಡನಾ ನಿರ್ಣಯವನ್ನು ಕೆಲವು ಸದಸ್ಯರು ಒಪ್ಪದೇ ಪಿಡಿಒ ಪರವಾಗಿಯೇ ಮಾತನಾಡಿದರು. ಸಭೆಯಲ್ಲಿ ಕೆಲವರು ಅನ್ಯಾಯವನ್ನು ಬೆಂಬಲಿಸುವುದನ್ನು ನೋಡಿ ಆಕ್ರೋಶ ಭರಿತರಾಗಿದ್ದ ಕೆಲ ಸದಸ್ಯರು ಸಭೆಯಿಂದ ಹೊರ ನಡೆದರು. ಆಗ ಕೋರಂ ಕೊರತೆಯಿಂದಾಗಿ ಅನಿವಾರ್ಯ ಕಾರಣದಿಂದ ಸಭೆಯನ್ನು ಮುಂದೂಡಬೇಕಾಯಿತು’ ಎಂದು ಸ್ಪಷ್ಟಪಡಿಸಿದರು.

ಅನಧಿಕೃತ ಬ್ಯಾನರ್‌ಗಳನ್ನು ತೆಗೆಯಲು ನಿರ್ಣಯ ಆಗಿದೆ ನಿಜ. ಆದರೆ, ಉಪ್ಪಿನಂಗಡಿಯಲ್ಲಿ ಅದೆಷ್ಟೋ ಅನಧಿಕೃತ ಬ್ಯಾನರ್‌ಗಳು ಇರುವಾಗ ಅವರಿಗೆ ಕಂಡಿದ್ದು ನೆಡ್ಚಿಲ್‌ನ ಬ್ಯಾನರ್ ಮಾತ್ರನಾ? ಅಂದು ಇಲ್ಲಿ ಬ್ಯಾನರ್ ತೆರವು ಕಾರ್ಯಾಚರಣೆ ನಡೆದದ್ದು ಸಾಮಾಜಿಕ ಕಳಕಳಿಯಿಂದಲ್ಲ. ಬದಲಾಗಿ ವಾರ್ಡ್‌ ಸದಸ್ಯರ ಮೇಲಿದ್ದ ವೈಯಕ್ತಿಕ ದ್ವೇಷದಿಂದ. ಪೇಟೆಯೊಳಗೆ ಸಾರ್ವಜನಿಕರಿಗೆ ತೊಂದರೆ ಆಗುವಂತೆ ರಸ್ತೆ ಬದಿ ವಾಹನಗಳನ್ನಿಟ್ಟು ಹಣ್ಣು ಮಾರಾಟ ಮಾಡುವವರನ್ನು ಯಾಕೆ ತೆರವುಗೊಳಿಸಲು ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು.

‘ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಚಿಲ್ಲರೆ ರಾಜಕಾರಣ ಮಾಡುತ್ತಿದೆ. ಬ್ಲಾಕ್‌ ಕಾಂಗ್ರೆಸ್‌ನ ಅಧ್ಯಕ್ಷರು ಬಿಜೆಪಿ ವಿರುದ್ಧ ಜನವಿರೋಧಿ ಆಡಳಿತ, ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಿದ್ದಾರೆ. ಆದರೆ, ಅವರು ಜನವಿರೋಧಿ ಆಡಳಿತ ಇದ್ದಿದ್ದು ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಡಳಿತ ನಡೆಸುತ್ತಿದ್ದಾಗನೋ? ಅಥವಾ ಈಗಲೋ ಎಂದು ಜನರಲ್ಲಿ ವಿಚಾರಿಸಲಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪಂಚಾಯಿತಿ ಸದಸ್ಯರಾದ ಲೋಕೇಶ್ ಬೆತ್ತೋಡಿ, ಧನಂಜಯ ನಟ್ಟಿಬೈಲ್, ವನಿತಾ ಇದ್ದರು.

 

ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸುವ ಕಾಂಗ್ರೆಸ್‌ನವರು ಯಾವ ಸತ್ಯದ ಜಾಗದಲ್ಲಿ ನಿಂತು ಅದನ್ನು ಸಾಬೀತುಪಡಿಸುತ್ತಾರೆ. ಈ ಸವಾಲು ಸ್ವೀಕರಿಸಲು ನಾನು ಸಿದ್ಧ.

ಉಷಾ ಮುಳಿಯ

ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು