ಭಾನುವಾರ, ಜೂಲೈ 5, 2020
23 °C
ರೈತರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಹೇಳಿರುವ ಕೃಷಿ ಇಲಾಖೆ

ಕಡಬ, ಬೆಳ್ತಂಗಡಿ ತಾಲ್ಲೂಕಿನಲ್ಲಿ ಕಂಡಿದ್ದು ಮರುಭೂಮಿ ಮಿಡತೆ ಅಲ್ಲ: ಕೃಷಿ ಇಲಾಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಜಿಲ್ಲೆಯ ಕಡಬ ತಾಲ್ಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯಿತಿಯ ರೆಂಜಿಲಾಡಿ ಹಾಗೂ ಬೆಳ್ತಂಗಡಿ ತಾಲ್ಲೂಕಿನ ಶಿರ್ಲಾಲು ಪರಿಸರದಲ್ಲಿ ಶನಿವಾರ ಸಂಜೆ ಕಂಡು ಬಂದಿರುವ ಮಿಡತೆಯ ಹಿಂಡು ಮರಭೂಮಿ ಲೋಕಸ್ಟ್‌ ಅಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

ಈ ಪ್ರದೇಶದಲ್ಲಿ ಕಂಡು ಬಂದಿರುವ ಮಿಡತೆಯ ಪ್ರೌಢಾವಸ್ಥೆ ಹಂತದ ಮಾದರಿಯನ್ನು ಪರಿಶೀಲನೆಗಾಗಿ ಕೀಟ ಶಾಸ್ತ್ರಜ್ಞರಿಗೆ ಕಳುಹಿಸಲಾಗಿದೆ. ಮಿಡತೆ ಹಾವಳಿ ಕುರಿತು ರೈತರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಅದಾಗ್ಯೂ ಈಗ ಕಂಡು ಬಂದಿರುವ ಮಿಡತೆಗಳು ಬೆಳೆಗೆ ಹಾನಿ ಮಾಡಿದಲ್ಲಿ, ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಡ್ರಂ ಅಥವಾ ಪಾತ್ರೆ ಅಥವಾ ಫಲಕಗಳನ್ನು ಬಡಿಯುವ ಮೂಲಕ ಹೆಚ್ಚಿನ ಶಬ್ದವನ್ನು ಉಂಟು ಮಾಡುವುದು, ಬೇವಿನ ಮೂಲದ ಕೀಟನಾಶಕಗಳನ್ನು ಬೆಳೆಗಳಲ್ಲಿ ಸಿಂಪಡಿಸುವ ಮೂಲಕ ಕೀಟದಿಂದ ಬೆಳೆ ಹಾನಿ ಕಡಿಮೆ ಮಾಡಬಹುದು. ಕೀಟಬಾಧಿತ ಪ್ರದೇಶದಲ್ಲಿ ಹೊಗೆ ಮತ್ತು ಬೆಂಕಿಯನ್ನು ಹಾಕಬಹುದು. ಕೀಟವು ಮರಿಹುಳುಗಳಾಗಿದ್ದಲ್ಲಿ ಕನಿಷ್ಠ 2 ಅಡಿ ಆಳ ಮತ್ತು 3 ಅಡಿ ಅಗಲದ ಗುಂಡಿಗಳನ್ನು ತೋಡಿ, ಮರಿ ಹುಳುಗಳನ್ನು ಸೆರೆ ಹಿಡಿದು ನಾಶಪಡಿಸಬಹುದು. ಮಿಡತೆ ಹಗಲಿನಲ್ಲಿ ಸಂಚರಿಸಿ, ರಾತ್ರಿ ವೇಳೆ ಮರಗಿಡಗಳ ಮೇಲೆ ಆಶ್ರಯ ಪಡೆಯುವುದರಿಂದ ಟ್ರ್ಯಾಕ್ಟರ್ ಮೌಂಟೆಡ್‌ ಜೆಟ್ ಸ್ಪ್ರೇಯರ್‌ಗಳ ಮೂಲಕ ಕೀಟನಾಶಕಗಳನ್ನು ಸಿಂಪಡಿಸಬಹುದು. ಆದರೆ, ಈ ಕೀಟನಾಶಕಗಳನ್ನು ಜಲಮೂಲಗಳ ಸಮೀಪ ಸಿಂಪಡಿಸದಂತೆ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದ್ದಾರೆ.

ಕ್ಲೋರೋಪೈರಿಪಾಸ್‌ ಶೇ 20 ಎಸಿ ಕೀಟನಾಶಕವನ್ನು ಪ್ರತಿ ಹೆಕ್ಟೇರ್‌ಗೆ 1.2 ಲೀಟರ್‌ ಸಿಂಪಡನೆ ಮಾಡಬಹುದು. ಕ್ಲೋರೋಪೈರಿಪಾಸ್ ಶೇ 50 ಎಸಿ ದ್ರಾವಣವನ್ನು 480 ಮಿ.ಲೀ., ಡೆಲ್ಟಮೆಥ್ರಿನ್‌ ಶೇ 2.8 ಇಸಿ ದ್ರಾವಣವನ್ನು 450 ಮಿ.ಲೀ., ಫಿಪ್ರೋನಿಲ್‌ ಶೇ 5 ಎಸ್‌ಸಿ ದ್ರಾವಣವನ್ನು 125 ಮಿ.ಲೀ., ಫಿಪ್ರೋನಿಲ್‌ ಶೇ 2.8 ಇಸಿ ದ್ರಾವಣವನ್ನು 225 ಮಿ.ಲೀ., ಲ್ಯಾಮ್ಡಾಸಹಲೋಥ್ರಿನ್‌ ಶೇ 5 ಇಸಿ ದ್ರಾವಣವನ್ನು 400 ಮಿ.ಲೀ., ಲ್ಯಾಮ್ಡಾಸಹಲೋಥ್ರಿನ್‌ ಶೇ 10 ಡಬ್ಲ್ಯುಪಿ ರಾಸಾಯನಿಕವನ್ನು 200 ಗ್ರಾಂ, ಮೆಲಾಥಿಯಾನ್‌ ಶೇ 50 ಎಸಿ ದ್ರಾವಣವನ್ನು 1.85 ಲೀಟರ್‌, ಮೆಲಾಥಿಯಾನ್‌ ಶೇ 25 ಡಬ್ಲ್ಯುಪಿ ರಾಸಾಯನಿಕವನ್ನು 3.7 ಕೆ.ಜಿ. ಬಳಕೆ ಮಾಡಬಹುದು ಎಂದು ಹೇಳಿದ್ದಾರೆ.

***

ಸ್ಥಳೀಯ ಪರಿಸರದಲ್ಲಿ ಕಾಣಿಸಿಕೊಳ್ಳುವ ಮಿಡತೆಗಳು ರೆಂಜಿಲಾಡಿ ಪರಿಸರದಲ್ಲಿ ಕಂಡು ಬಂದಿವೆ. ಕೃಷಿಕರು ಆತಂಕ ಪಡಬೇಕಾಗಿಲ್ಲ. ಈ ಬಗ್ಗೆ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ.

– ಡಾ. ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಸಿಇಒ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು