ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಂದರ್ಥದಲ್ಲಿ ಮಹಿಳೆಯರೆಲ್ಲ ದಲಿತರೇ

ಯುವವಾಹಿನಿ ‘ಸ್ತ್ರೀ ಐಸಿರಿ’ ಸಂವಾದದಲ್ಲಿ ಸಬಿತಾ ಕೊರಗ ಪ್ರತಿಪಾದನೆ
Published 31 ಮಾರ್ಚ್ 2024, 6:00 IST
Last Updated 31 ಮಾರ್ಚ್ 2024, 6:00 IST
ಅಕ್ಷರ ಗಾತ್ರ

ಮಂಗಳೂರು: ‘ಸಾಕಷ್ಟು ಸುಧಾರಣಾ ಕ್ರಮಗಳ ಬಳಿಕವೂ ತಳ ಸಮುದಾಯದವರು ಹಾಗೂ ಮಹಿಳೆಯರು ಅಸಮಾನತೆಯನ್ನು ಅನುಭವಿಸುತ್ತಲೇ ಇದ್ದಾರೆ. ಒಂದರ್ಥದಲ್ಲಿ ಮಹಿಳೆಯರೆಲ್ಲರೂ ದಲಿತರೇ ಆಗಿದ್ದಾರೆ’ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕರಾದ ಸಬಿತಾ ಕೊರಗ ಅಭಿಪ್ರಾಯಪಟ್ಟರು.

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಯುವವಾಹಿನಿಯ ಮಂಗಳೂರು ಮಹಿಳಾ ಘಟಕವು ಇಲ್ಲಿ ಶನಿವಾರ ಏರ್ಪಡಿಸಿದ್ದ ‘ಸ್ತ್ರೀ ಐಸಿರಿ’ ಸುಸ್ಥಿರತೆಯ ಹಾದಿಯಲ್ಲಿ ಕಾರ್ಯಕ್ರಮದ ‘ಮಾತುಗಳ ಐಸಿರಿ’ ಸಂವಾದದಲ್ಲಿ ಅವರು ಮಾತನಾಡಿದರು.

‘ಲಿಂಗತ್ವದ ಒಳಗೂ ಅಸಮಾನತೆ ತಾಂಡವವಾಡುತ್ತಿದೆ. ಮಹಿಳೆಯರಲ್ಲೂ ಮೇಲು ಜಾತಿ, ಕೆಳಜಾತಿ, ವಿಧವೆ, ಪತಿವ್ರತೆ ಎಂಬ ಅಸಮಾನತೆಗಳಿವೆ. ಸರ್ಕಾರಿ ಕಚೇರಿಯಿರಲಿ, ದೊಡ್ಡ ಸಮಾರಂಭಗಳೇ ಇರಲಿ ಸ್ವಚ್ಚತಾ ಕಾರ್ಯ ಮಹಿಳೆಗೇ ಸೀಮಿತ. ಇದು ತಾರತಮ್ಯದ ಇನ್ನೊಂದು ಮುಖ’ ಎಂದರು.

‘ತಳ ಸಮುದಾಯದ ಮಹಿಳೆ ರಾಷ್ಟ್ರಪತಿಯಾಗಿರುವುದು, ಕೊರಗ ಸಮುದಾಯದ ನಾನು ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕಿ ಆಗಿರುವುದೆಲ್ಲವೂ ನಿಜ. ಆದರೆ  ತಳ ಸಮುದಾಯದ ಎಷ್ಟು ಮಂದಿಗೆ ಇಂತಹ ಅವಕಾಶ ಸಿಕ್ಕಿದೆ’ ಎಂದು ಪ್ರಶ್ನಿಸಿದರು. 

ನಿವೃತ್ತ ಪ್ರಾಧ್ಯಾಪಕಿ  ರಾಜಲಕ್ಷ್ಮೀ ಎನ್‌.ಕೆ., ‘ಈಚೆಗೆ ಮಹಿಳಾ ದಿನಾಚರಣೆಯಂದೇ ಮಹಿಳೆಯೊಬ್ಬರು ಮಾವನಿಗೆ ಹೊಡೆದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಎಲ್ಲರೂ ಆಕೆಗೆ ಬೈದರು. ಆದರೆ, ಆಕೆ ಅಂತಹ ಮನಸ್ಥಿತಿಗೆ ತಲುಪಿದ್ದೇಕೆ ಎಂದು ಯಾರೂ ಯೋಚಿಸಲೇ ಇಲ್ಲ. ರಾಮನವಮಿ ಆಚರಿಸುವ ನಮಗೆ,  ಸೀತೆಯ ಕಷ್ಟಗಳು ನೆನಪಾಗುವುದೇ ಇಲ್ಲ. ‌ಮಹಾತ್ಮ ಗಾಂಧಿಯನ್ನು ಸಂಭ್ರಮಿಸುವ ನಮಗೆ ಕಸ್ತೂರಬಾ ತ್ಯಾಗದ ಮಹತ್ವ ತಿಳಿಯುವುದಿಲ್ಲ’ ಎಂದರು.

ಬರಹಗಾರ್ತಿ ಫಾತಿಮಾ ರಲಿಯಾ, ‘ಡಿಜಿಟಲ್‌ಯುಗದಲ್ಲೂ ಸ್ತ್ರೀ ಸಮಾನತೆ ಎಲ್ಲಿದೆ.  ಮಹಿಳೆಯರ ಶಿಕ್ಷಣ ಹಕ್ಕು ನಿರಾಕರಣೆ ‌ಆಗುತ್ತಲೇ ಇದೆ. ಹಿಜಾಬ್ ನಿಷೇಧದ ಕಾರಣಕ್ಕೆ ಅನೇಕ ಹುಡುಗಿಯರು ಕಾಲೇಜು ತೊರೆದರು. ಅವರ ಶಿಕ್ಷಣಕ್ಕೆ ಅವಕಾಶ ನೀಡದಿರಲು ಸರ್ಕಾರಕ್ಕೆ ಅದರದ್ದೆ ಆದ ಕಾರಣಗಳಿವೆ. ಶಿಕ್ಷಣ ಮುಂದುವರಿಸಲು ದೂರದ ಊರುಗಳಿಗೆ ಆ ಹೆಣ್ಣುಮಕ್ಕಳನ್ನು ಕಳುಹಿಸಲು ನಮ್ಮಲ್ಲಿ ದುಡ್ಡಿಲ್ಲ ಎಂದು ಪೋಷಕರು ಹೇಳುತ್ತಾರೆ. ನಾವಿಲ್ಲಿ ದೂರುವುದಾದರೂ ಯಾರನ್ನು’ ಎಂದು ಪ್ರಶ್ನಿಸಿದರು. 

‘ಈಗಲೂ ಎಂಜಿನಿಯರಿಂಗ್‌ನಂತಹ ವೃತ್ತಿಪರ ಶಿಕ್ಷಣದಲ್ಲಿ ಮಹಿಳೆಯರ ಪ್ರಮಾಣ ಶೇ 22 ಮಾತ್ರ. ಜಾಸ್ತಿ ಕಲಿತ ಹುಡುಗಿಯರಿಗೆ ವರ ಸಿಗುವುದಿಲ್ಲ ಎಂಬುದು ಪೋಷಕರ ಆತಂಕ.  ಸುರಕ್ಷಿತ ಭಾವನೆ‌ ಮೂಡಿಸದ ಹೊರತು ಮಹಿಳಾ ಸಮಾನತೆ ಸರ್ಕಾರದ ಘೋಷವಾಕ್ಯವಾಗಿ ಮಾತ್ರ ಉಳಿಯಲಿದೆ’ ಎಂದರು. 

ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೀತಿ ಕೀರ್ತಿ ಡಿಸೋಜ, ‘ಮನೆಯ ಹೆಣ್ಣು ಮಗುವಿಗೆ ಕೊಡಿಸುವ ದ್ವಿಚಕ್ರ ವಾಹನ ಅಪ್ಪನ ಹೆಸರಿನಲ್ಲೇ ನೋಂದಣಿಯಾಗುತ್ತದೆ. ಅದೇ ಮನೆಯ ಗಂಡು ಮಗುವಿನ ವಾಹನ ಆತನ ಹೆಸರಿನಲ್ಲೇ ನೋಂದಣಿಯಾಗುತ್ತದೆ.  ಮಹಿಳೆ ಶಿಕ್ಷಣ ಪಡೆದರೆ ಸಾಲದು. ಅದರ ಮುಂದಿನ ಹಂತವಾದ ಆರ್ಥಿಕ ಸ್ವಾತಂತ್ರ್ಯ ಗಳಿಸುವುದೂ ಮುಖ್ಯ’ ಎಂದರು.

ಉಪನ್ಯಾಸಕಿ ಅಕ್ಷಯಾ ಶೆಟ್ಟಿ ಕಾರ್ಯಕ್ರಮದ ಸಮನ್ವಯಕಾರರಾಗಿದ್ದರು.

ಸಾಮಾಜಿಕ ಮಾಧ್ಯಮ ಬಳಕೆ– ಎಚ್ಚರವಿರಲಿ’

‘ಸಾಮಾಜಿಕ ಮಾಧ್ಯಮ ಬಳಸುವಾಗ ಎಚ್ಚರವಿರಲಿ.  ವೈಯಕ್ತಿಕ ಮಾಹಿತಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅನಗತ್ಯವಾಗಿ ಹಂಚಿಕೊಳ್ಳದಿರಿ. ಅಪರಿಚಿತರಿಂದ ಬರುವ ಗೆಳೆತನದ ಕೋರಿಕೆಯನ್ನು ಸಮ್ಮತಿಸಲೇ ಬಾರದು. ಸಾಮಾಜಿಕ ಮಾಧ್ಯಮದ ಖಾತೆಗಳಿಗೆ ಸಂಕೇತಾಕ್ಷರಗಳಿಂದ ಕೂಡಿದ ಪ್ರಬಲ ಪಾಸ್‌ವರ್ಡ್ ರೂಪಿಸಿಕೊಳ್ಳಬೇಕು’ ಎಂದು ಉರ್ವ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ಅನಿತಾ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT