ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರಿನಿಂದ ಬೆಂಗಳೂರಿಗೆ ಜಿರೊ ಟ್ರಾಫಿಕ್‌ನಲ್ಲಿ ಸಾಗಿದ ಅಂಬುಲೆನ್ಸ್‌

ಯುವತಿಯ ಪ್ರಾಣ ಉಳಿಸಲು
Last Updated 2 ಡಿಸೆಂಬರ್ 2020, 11:28 IST
ಅಕ್ಷರ ಗಾತ್ರ

ಕೊಟ್ಟಿಗೆಹಾರ: ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿಯನ್ನು ಚಿಕಿತ್ಸೆಗಾಗಿ ’ಜಿರೊ ಟ್ರಾಫಿಕ್‌‘ ಮೂಲಕ ಅಂಬುಲೆನ್ಸ್‌ನಲ್ಲಿ ಪುತ್ತೂರಿನಿಂದ ಬೆಂಗಳೂರಿನ ಆಸ್ಪತ್ರೆಗೆ ತಲುಪಿಸಿದ ಚಾಲಕ ಹನೀಫ್ ಅವರ ಸಾಹಸ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಶ್ವಾಸಕೋಶದ ಶಸ್ತ್ರಚಿಕಿತ್ಸೆಗೆ ತುರ್ತಾಗಿ ಒಳಗಾಗಬೇಕಿದ್ದ ಸುಹಾನ (22) ಎಂಬ ಯುವತಿಯನ್ನು ಹನೀಫ್‌, ಪುತ್ತೂರಿನ ಮಹಾವೀರ ಆಸ್ಪತ್ರೆಯಿಂದ ಉಪ್ಪಿನಂಗಡಿ– ಗುರುವಾಯನಕೆರೆ– ಉಜಿರೆ– ಚಾರ್ಮಾಡಿ ಘಾಟಿ ಮೂಲಕ ಒಂದೂವರೆ ಗಂಟೆಯಲ್ಲಿ ಮೂಡಿಗೆರೆ ಹ್ಯಾಂಡ್ ಪೋಸ್ಟ್ ತಲುಪಿಸಿ, ಅಲ್ಲಿಂದ ಬೇಲೂರು ಮೂಲಕ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ವೈದೇಹಿ ಆಸ್ಪತ್ರೆ ತಲುಪಿಸಿದ್ದಾರೆ.

ಅಂಬುಲೆನ್ಸ್ ಸಾಗುವ ಮಾರ್ಗದಲ್ಲಿ ಸಾರ್ವಜನಿಕರು, ಸ್ಥಳೀಯರು, ಸಂಘ ಸಂಸ್ಥೆಗಳು ಪೊಲೀಸರಿಗೆ ಸಹಕಾರ ನೀಡಿ ’ಜಿರೊ ಟ್ರಾಫಿಕ್‌‘ ವ್ಯವಸ್ಥೆ ಮಾಡಿದ್ದರು. ಬುಧವಾರ ಬೆಳಿಗ್ಗೆ 11ಕ್ಕೆ ಪುತ್ತೂರಿನಿಂದ ಹೊರಟ ಅಂಬುಲೆನ್ಸ್‌ 12.35ಕ್ಕೆ ಮೂಡಿಗೆರೆ ಹ್ಯಾಂಡ್ ಪೋಸ್ಟ್ ತಲುಪಿತು.

’ಜಿರೊ ಟ್ರಾಫಿಕ್‌’ ವ್ಯವಸ್ಥೆ ಮಾಡುವಂತೆ ಬಣಕಲ್, ಕೊಟ್ಟಿಗೆಹಾರ ಯುವಕರ ತಂಡಗಳ ವಾಟ್ಸ್‌ಆ್ಯಪ್‌ ಗ್ರೂಪ್‍ಗಳಿಗೆ ಸಂದೇಶ ರವಾನಿಸಲಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಕೊಟ್ಟಿಗೆಹಾರ, ಬಣಕಲ್, ಮೂಡಿಗೆರೆ ಭಾಗದ ಯುವಕರು, ರಸ್ತೆಯ ಬದಿಯಲ್ಲಿ ನಿಂತು ಅಂಬುಲೆನ್ಸ್ ಸಾಗಲು ತಡೆಮುಕ್ತ ದಾರಿ ಮಾಡಿಕೊಟ್ಟರು.

ಬಣಕಲ್‌ನ ಸಾಮಾಜಿಕ ಕಾರ್ಯಕರ್ತ ಮಹಮ್ಮದ್ ಆರೀಪ್ ಸೇರಿದಂತೆ ಹಲವು ಸಂಘಟನೆಗಳ ಯುವಕರು ಬೆಂಗಾವಲಾಗಿ ನಿಂತು ಅಂಬುಲೆನ್ಸ್ ಸಂಚಾರಕ್ಕೆ ತೊಂದರೆಯಾಗದಂತೆ ಸಾಥ್ ನೀಡಿದರು. ಈ ಮಾನವೀಯತೆಯ ಕಾರ್ಯಕ್ಕೆ ಎಲ್ಲಡೆಯಿಂದ ಶ್ಲಾಘನೆ ವ್ಯಕ್ತವಾಯಿತು.

‘ಯಾವುದೇ ವ್ಯಕ್ತಿಯ ಪ್ರಾಣ ಬಹಳ ಮುಖ್ಯ. ಅದನ್ನು ಉಳಿಸುವುದೇ ಮಾನವೀಯತೆ. ಸಾರ್ವಜನಿಕರ, ಸ್ನೇಹಿತರ ಸಹಕಾರದಿಂದ ಅತಿ ಕಡಿಮೆ ಅವದಿಯಲ್ಲಿ ರೋಗಿಯನ್ನು ಬೆಂಗಳೂರು ಆಸ್ಪತ್ರೆಗೆ ಸೇರಿಸಲು ಸಾಧ್ಯವಾಯಿತು‘ ಎಂದು ಅಂಬುಲೆನ್ಸ್ ಚಾಲಕ ಹನೀಫ್ ಹೇಳಿದರು.

‘ಮಾನವೀಯತೆಯ ದೃಷ್ಟಿಯಿಂದ, ಪ್ರಾಣ ಉಳಿಸುವ ಸಲುವಾಗಿ ಜೀರೋ ಟ್ರಾಫಿಕ್ ಮಾಡಲು ಜನರ ಜೊತೆ ಸಹಕರಿಸಲಾಗಿದೆ’ ಎಂದು ಬಣಕಲ್ ಠಾಣೆಯ ಸಬ್‍ಇನ್‌ಸ್ಪೆಕ್ಟರ್‌ ಶ್ರೀನಾಥ್ ರೆಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT