ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ಬಂಧನಕ್ಕೆ ಯತ್ನ; ಪ್ರತಿಭಟನೆ

Published 22 ಮೇ 2024, 15:10 IST
Last Updated 22 ಮೇ 2024, 15:10 IST
ಅಕ್ಷರ ಗಾತ್ರ

ಬೆಳ್ತಂಗಡಿ (ದಕ್ಷಿಣ ಕನ್ನಡ): ಪೊಲೀಸರಿಗೆ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ ಮತ್ತು ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಬೆಳ್ತಂಗಡಿ ಶಾಸಕ, ಬಿಜೆಪಿಯ ಹರೀಶ್ ಪೂಂಜ ಅವರನ್ನು ಅವರ ಮನೆಯಿಂದ ಬಂಧಿಸಲು ಪೊಲೀಸರು ತೆರಳಿದ ಹಿನ್ನೆಲೆಯಲ್ಲಿ ವಿರೋಧ, ವಾಗ್ವಾದ ಮತ್ತು ಘೋಷಣೆಗಳನ್ನು ಕೂಗಿದ ಕಾರಣ ಬುಧವಾರ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 7.30ರ ವರೆಗೆ ನಡೆದ ನಾಟಕೀಯ ಬೆಳವಣಿಗೆಗಳ ಕೊನೆಯಲ್ಲಿ ಶಾಸಕರನ್ನು ಬಂಧಿಸದೆ ತೆರಳಲು ಪೊಲೀಸರು ನಿರ್ಧರಿಸಿದರು. ವಿಚಾರಣೆ ಹಾಜರಾಗಲು ಐದು ದಿನಗಳ ಕಾಲಾವಕಾಶ ಬೇಕು ಎಂದು ಶಾಸಕರು ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.‌

ಬೆಳ್ತಂಗಡಿ ಸಮೀಪದ ಗರ್ಡಾಡಿಯಲ್ಲಿರುವ ಹರೀಶ್ ಅವರ ಮನೆ ‘ಮಿತ್ತಿಲ ನಿವಾಸ’ಕ್ಕೆ ಡಿವೈಎಸ್‌ಪಿ ಎಸ್. ವಿಜಯಪ್ರಸಾದ್, ಬೆಳ್ತಂಗಡಿ ಠಾಣೆಯ ಇನ್‌ಸ್ಪೆಕ್ಟರ್ ಸುಬ್ಬಾಪುರ್ ಮಠ ಹಾಗೂ ಸಬ್ ಇನ್‌ಸ್ಪೆಕ್ಟರ್ ಚಂದ್ರಶೇಖರ್ ನೇತೃತ್ವದಲ್ಲಿ ಪೊಲೀಸರು ಮಧ್ಯಾಹ್ನ ಬಂದಿದ್ದರು. ಈ ಸಂದರ್ಭದಲ್ಲಿ ಶಾಸಕರ ವಕೀಲರು ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ವಾದ–ಪ್ರತಿವಾದ, ಮಾತಿನ ಚಕಮತಿ ನಡೆಯಿತು. ವಿಷಯ ತಿಳಿದು ಶಾಸಕರ ಮನೆಯ ಬಳಿ ಕಾರ್ಯಕರ್ತರು ಜಮಾಯಿಸುತ್ತಿದ್ದಂತೆ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಈ ಹಿನ್ನೆಲೆಯಲ್ಲಿ ಸುತ್ತುಮುತ್ತಲ ಐದು ಠಾಣೆಗಳ ಸಿಬ್ಬಂದಿಯನ್ನು ಕರೆದು ಬಂದೋಬಸ್ತ್ ಏರ್ಪಡಿಸಲಾಯಿತು.

ಪೊಲೀಸರು ಬಂದ ವಿಷಯ ತಿಳಿದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹಾಗೂ ಮುಖಂಡ ಸಂಜೀವ ಮಠಂದೂರು ಕೂಡ ಬಂದರು. ಕಾರ್ಯಕರ್ತರು ಬಂಧನ ಪ್ರಯತ್ನವನ್ನು ವಿರೋಧಿಸಿ ಪ್ರತಿಭಟನೆಗೆ ಮುಂದಾದರು. ಕೆಲವರು ಪೊಲೀಸರ ಜತೆ ವಾಗ್ವಾದಕ್ಕೆ ಇಳಿದರು. ಕಾರ್ಯಕರ್ತರು ‘ಭಾರತ್ ಮಾತಾಕಿ ಜೈ’, ‘ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ’, ‘ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ’, ‘ಹರೀಶ್ ಪೂಂಜರಿಗೆ ಜೈಕಾರ’ ಮುಂತಾದ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ವಕೀಲರಾದ ಶಂಭು ಶರ್ಮಾ ಮತ್ತು ಸುಬ್ರಹ್ಮಣ್ಯ ಕುಮಾರ್ ಅಗರ್ತ ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ‘ಶಾಸಕರನ್ನು ಬಂಧಿಸಬೇಕಾದರೆ ನಿಯಮಗಳನ್ನು ಪಾಲಿಸಬೇಕು, ಏಕಾಏಕಿ ಬಂದು ಕರೆದುಕೊಂಡು ಹೋಗುವಂತಿಲ್ಲ. ಆರೋಪಗಳು ಇದ್ದರೆ ಕಾನೂನು ರೀತಿಯಲ್ಲಿ ಬಂಧಿಸುವುದಕ್ಕೆ ಅಭ್ಯಂತರವಿಲ್ಲ’ ಎಂದು ವಾದಿಸಿದರು.

ಸಂಜೆಯಾಗುತ್ತಿದ್ದಂತೆ ಸಂಸದ ನಳಿನ್‌ಕುಮಾರ್ ಕಟೀಲ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್‌ ಕುಂಪಲ, ಶಾಸಕರಾದ ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ, ಉಮಾನಾಥ ಕೋಟ್ಯಾನ್, ಮುಖಂಡರಾದ ಬ್ರಿಜೇಶ್ ಚೌಟ, ಗಣೇಶ್ ಕಾರ್ಣಿಕ್, ಶ್ರೀನಿವಾಸ ರಾವ್, ಪ್ರಸಾದ್ ಕುಮಾ‌ರ್, ಕುಶಾಲಪ್ಪ ಗೌಡ ಮತ್ತಿತರರು ಸ್ಥಳಕ್ಕೆ ಬಂದರು.

ಏನೇನು ಪ್ರಕರಣಗಳು?

ಕಲ್ಲಿನ ಅಕ್ರಮ ಗಣಿಗಾರಿಕೆ ಹಾಗೂ ಸ್ಫೋಟಕಗಳ ಅಕ್ರಮ ದಾಸ್ತಾನು ಪ್ರಕರಣದಲ್ಲಿ ಮೇ. 18ರಂದು ಬಂಧನಕ್ಕೆ ಒಳಗಾಗಿದ್ದ ಶಶಿರಾಜ್ ಶೆಟ್ಟಿ ಬಿಡುಗಡೆಗೆ ಆಗ್ರಹಿಸಿ ಪೊಲೀಸರಿಗೆ ಬೆದರಿಕೆ ಒಡ್ಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ 19ರಂದು ಹರೀಶ್ ಪೂಂಜ ಮೇಲೆ ಭಾರತೀಯ ದಂಡಸಂಹಿತೆಯ ಸೆಕ್ಷನ್ 353 ಮತ್ತು 504ರ ಪ್ರಕಾರ ಪ್ರಕರಣ ದಾಖಲಾಗಿತ್ತು.

ಮೇ.20ರಂದು ಅನುಮತಿ ಪಡೆಯದೆ ಬೆಳ್ತಂಗಡಿ ಬಿಜೆಪಿ ಮಂಡಲದ ನೇತೃತ್ವದಲ್ಲಿ ಪ್ರತಿಭಟನೆ ಆಯೋಜಿಸಿ ಪೊಲೀಸರಿಗೆ ಬೆದರಿಕೆಯೊಡ್ಡಿದ್ದಾರೆ ಎಂಬ ಆರೋಪದಡಿ ಸೆಕ್ಷನ್ 143, 147, 341, 504, 506 ಮತ್ತು 149ರಡಿ ಶಾಸಕರ ಮೇಲೆ ಪ್ರಕರಣ ದಾಖಲಾಗಿತ್ತು.

ವಕೀಲರ ವಾದ:

ಪೊಲೀಸರು ಶಾಸಕರನ್ನು ವಿಚಾರಣೆಗಾಗಿ ಕರೆದುಕೊಂಡು ಹೋಗಲು ಬಂದಿರುವುದಾಗಿ ಹೇಳುತ್ತಾರೆ. ವಿಚಾರಣೆಗೆ ಕರೆದುಕೊಂಡು ಹೋಗಬೇಕಾದರೂ ಮೊದಲು ನೋಟಿಸ್‌ ನೀಡಬೇಕು. ಅದರಲ್ಲಿ ಅಪರಾಧದ ವಿವರ ಇರಬೇಕು. ಇದು ಯಾವುದೂ ಇಲ್ಲದೆ ಪೊಲೀಸರು ಬೆಳಿಗ್ಗೆಯಿಂದ ಶಾಸಕರ ಮನೆಯಲ್ಲಿ ಕುಳಿತಿದ್ದಾರೆ. ನೋಟಿಸ್‌ ಕೊಡುವುದಾಗಿ ಹೇಳಿದ್ದಾರೆಯೇ ಹೊರತು ಕೊಡಲಿಲ್ಲ. ಅವರ ಮೇಲೆ ದಾಖಲಿಸಿರುವ ಪ್ರಕರಣಗಳೆಲ್ಲವೂ 7 ವರ್ಷಕ್ಕಿಂತ ಕಡಿಮೆ ಶಿಕ್ಷೆ ಅವಧಿಯದ್ದು. ಇಂಥ ಪ್ರಕರಣದಲ್ಲಿ ಯಾವ ರೀತಿಯ ನಿಯಮ ಪಾಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ಆದರೆ ಯಾವ ನಿಯಮವನ್ನೂ ಪಾಲಿಸದೆ ರಾಜಕೀಯ ಒತ್ತಡಕ್ಕೆ ಮಣಿದು ಈ ರೀತಿ ಮಾಡುತ್ತಿದ್ದಾರೆ ಎಂದು ವಕೀಲರು ತಿಳಿಸಿದರು.‌

ನೋಟಿಸ್ ನೀಡಲಾಗಿದೆ: ಎಸ್‌ಪಿ

ವಿಚಾರಣೆಗೆ ಹಾಜರಾಗುವಂತೆ ಶಾಸಕ ಹರೀಶ್ ಪೂಂಜ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ ಠಾಣೆಗೆ ಬರಲು ನಿರಾಕರಿಸಿದ್ದರಿಂದ ಪೊಲೀಸರು ರಾತ್ರಿವರೆಗೂ ಕಾಯಬೇಕಾಗಿ ಬಂತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ ತಿಳಿಸಿದ್ದಾರೆ. ‘ಶಾಸಕರಿಗೆ ಬೆಳಿಗ್ಗೆಯೇ ನೋಟಿಸ್ ನೀಡಲಾಗಿದೆ. ಅದರ ಪ್ರತಿ ನಮ್ಮಲ್ಲಿದೆ. ಆದರೂ ನೋಟಿಸ್ ತಲುಪಿಲ್ಲ ಎಂದು ಶಾಸಕರ ವಕೀಲರು ಹೇಳಿದ್ದಾರೆ.

ಮೊದಲನೇ ಪ್ರಕರಣದಲ್ಲಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಎರಡನೇ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಕೋರಲಾಗಿತ್ತು. ಆದರೆ ಸಂಜೆವರೆಗೂ ಪೊಲೀಸರಿಗೆ ಸಹಕಾರ ನೀಡಲಿಲ್ಲ’
ಎಂದು ಹೇಳಿರುವ ಅವರು, ‘ಶಾಸಕರು ಎಂಬ ಕಾರಣಕ್ಕೆ ಪೂಂಜ ಅವರ ಮೇಲೆ ಇಲಾಖೆಗೆ ಗೌರವ ಇದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT