ಸೋಮವಾರ, ಜನವರಿ 27, 2020
20 °C

ಮದುವೆ ಹಾಲ್‌ನಲ್ಲಿ ಎನ್‍ಆರ್‌ಸಿ, ಸಿಎಎ ವಿರುದ್ಧ ಭಿತ್ತಿ ಪತ್ರ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಉಳ್ಳಾಲ: ಮದುವೆ ಸಭಾಂಗಣದಲ್ಲಿ ಇಬ್ಬರು ಮದು ಮಕ್ಕಳು ಎನ್‍ಆರ್‌ಸಿ, ಸಿಎಎ ವಿರುದ್ಧ ಭಿತ್ತಿಪತ್ರ ಹಿಡಿದು ಪ್ರದರ್ಶಿಸಿದರು.

ಉಳ್ಳಾಲದ ಮಾಸ್ತಿಕಟ್ಟೆಯ ಎಂ.ಸಿ.ಮಂಝಿಲ್ ನಿವಾಸಿ ದಿ.ಚಾಯಬ್ಬ ಅವರ ಪುತ್ರ ಮೊಹಮ್ಮದ್ ರಿಲ್ವಾನ್ ಮತ್ತು ಉಳ್ಳಾಲ ಅಲೇಕಳದ ಯು.ಎಸ್.ಹನೀಫ್ ಅವರ ಪುತ್ರ ಯು.ಎಸ್.ನಿಹಾಲ್ ಅವರು ತೊಕ್ಕೊಟ್ಟು ಕಲ್ಲಾಪು ಯುನಿಟಿ ಸಭಾಂಗಣದಲ್ಲಿ ಬುಧವಾರ ಜನಜಾಗೃತಿ ಮೂಡಿಸಿದರು.

‘ಪೌರತ್ವ ಕಾಯ್ದೆ ವಿರುದ್ಧ ಎಲ್ಲೆಡೆ ಜಾಗೃತಿ ಮೂಡುತ್ತಿರುವಾಗ ಅದರ ಒಂದು ಭಾಗವಾಗಿ ನಾವೂ ಒಂದು ಹೆಜ್ಜೆ ಮುಂದಿಟ್ಟಿದ್ದೇವೆ. ದೇಶದ ಸಂವಿಧಾನ ಉಳಿಸುವುದು ಎಲ್ಲರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಹಾರೈಸಲು ಬಂದವರಿಗೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ಕಾಯ್ದೆ ವಿರುದ್ಧ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೇವೆ’ ಎಂದು ಮದುಮಗ ಮೊಹಮ್ಮದ್ ರಿಲ್ವಾನ್‌ ಹೇಳಿದರು.

‘ಮನುಷ್ಯನ ಬದುಕನ್ನು ಅಣಕಿಸುವ ಕೇಂದ್ರದ ಬಿಜೆಪಿ ಸರ್ಕಾರದ ಅಮಾನವೀಯ, ಜನಾಂಗ ದ್ವೇಷಿ ಮಸೂದೆಯನ್ನು ವಿರೋಧಿಸುವುದನ್ನು ಸಾರ್ವತ್ರಿಕಗೊಳಿಸಿ, ಎನ್‍ಆರ್‌ಸಿ, ಸಿಎಎಗೆ ಇತಿಶ್ರೀ ಹಾಡಲು ಕಾರಣಕರ್ತರಾಗುವುದು ನಮ್ಮ ಕರ್ತವ್ಯವಾಗಲಿ’ ಎಂದರು.

ಯು.ಎಸ್ ನಿಹಾಲ್ ಅವರು ರಿಲ್ವಾನ್ ಅವರ ಸಹೋದರಿ ಜತೆಗೆ ನಿಖಾಹ್ ಮಾಡಿಕೊಂಡಿದ್ದು, ಇದೇ ಸಂದರ್ಭ ರಿಲ್ವಾನ್ ಅವರ ನಿಖಾಹ್ ಕೂಡ ನಡೆಯಿತು. ನಿಖಾಹ್ ನಡೆದ ನಂತರ ತಮಗೆ ಸುಖ ದಾಂಪತ್ಯವನ್ನು ಕೋರಿ ಹಾರೈಸಲು ನೆರೆದ ಊರ - ಪರವೂರ ಬಾಂಧವರಲ್ಲಿ ಎನ್‍ಆರ್‌ಸಿ - ಸಿಎಎ ವಿರುದ್ಧ ಧ್ವನಿ ಎತ್ತುವಂತೆ, ಭಿತ್ತಿ ಪತ್ರ ಎತ್ತಿ ಹಿಡಿದು ಸಾರ್ವಜನಿಕ ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು