ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು |ಡ್ರಗ್‌ ವಿರುದ್ಧ ಜಾಗೃತಿ; ಬೀದಿಗಿಳಿದ ವಿದ್ಯಾರ್ಥಿಗಳು

ಮಂಗಳೂರು ಪೊಲೀಸ್‌ ಕಮಿಷನರೇಟ್‌– ‘ಡ್ರಗ್ಸ್ ಮುಕ್ತ ಭವಿಷ್ಯಕ್ಕಾಗಿ ವಾಕಥಾನ್’
Published 2 ನವೆಂಬರ್ 2023, 4:59 IST
Last Updated 2 ನವೆಂಬರ್ 2023, 4:59 IST
ಅಕ್ಷರ ಗಾತ್ರ

ಮಂಗಳೂರು: ಮಾದಕ ಪದಾರ್ಥಗಳ ಸೇವನೆ ಚಟದಿಂದ ಎದುರಾಗುವ ಸಮಸ್ಯೆಗಳ ಕರಾಳತೆ ಬಿಂಬಿಸುವ ಫಲಕಗಳನ್ನು ಕೈಯಲ್ಲಿ ಹಿಡಿದ ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿ ಸಮೂಹ ಬಿಡು ಬೀಸಾಗಿ ಹೆಜ್ಜೆಹಾಕುತ್ತಾ ಸಾಗಿತು.

ಮಾದಕ ಪದಾರ್ಥ ಸೇವನೆ ವ್ಯಸನದ ವಿರುದ್ಧ ಮಂಗಳೂರು ಪೊಲೀಸ್ ಕಮಿಷನರೇಟ್‌ ವತಿಯಿಂದ ಇಲ್ಲಿ ಬುಧವಾರ ಏರ್ಪಡಿಸಿದ್ದ ‘ಡ್ರಗ್ಸ್ ಮುಕ್ತ ಭವಿಷ್ಯಕ್ಕಾಗಿ ವಾಕಥಾನ್’ ವಿನೂತನ ರೀತಿಯಲ್ಲಿ ಜನ ಜಾಗೃತಿ ಮೂಡಿಸಿತು.

ತಮ್ಮ ವಿದ್ಯಾಸಂಸ್ಥೆಗಳ ಸಮವಸ್ತ್ರದಲ್ಲಿ ಕಾಣಿಸಿಕೊಂಡ ವಿದ್ಯಾರ್ಥಿಗಳು ಬಿಳಿ ಟೋಪಿ ಧರಿಸಿ ಪ್ರಮುಖ ರಸ್ತೆಗಳಲ್ಲಿ ಹೆಜ್ಜೆ ಹಾಕುತ್ತಾ ಸಾಗಿದ್ದನ್ನು ಸಾರ್ವಜನಿಕರು ಕುತೂಹಲದಿಂದ ನೋಡಿದರು. 

ಡ್ರಗ್ಸ್‌ನಿಂದ ಬದುಕು ಹೇಗೆ ಭಯಾನಕವಾಗುತ್ತದೆ ಎಂಬುದನ್ನು ಬಿಂಬಿಸಲು ಕೆಲವು ವಿದ್ಯಾರ್ಥಿಗಳು ತಲೆ ಬುರುಡೆಯನ್ನು ಹೋಲುವ ಮುಖವಾಡಗಳನ್ನು ಧರಿಸಿ ಗಮನ ಸೆಳೆದರು. ಕೆಲವು ಕಾಲೇಜುಗಳ ವಿದ್ಯಾರ್ಥಿಗಳು ಪ್ರದರ್ಶಿಸಿದ್ದ ಸಂದೇಶ ಫಲಕಗಳು ಡ್ರಗ್ಸ್‌ ಹಾವಳಿಯ ದುಷ್ಪರಿಣಾಮಗಳನ್ನು ಮನಮುಟ್ಟುವಂತೆ ಬಿಂಬಿಸಿದ್ದವು. ಕೆಲವು ವಿದ್ಯಾರ್ಥಿಗಳು ಕರಪತ್ರಗಳನ್ನು ಹಂಚಿದರು. 

120ಕ್ಕೂ ಅಧಿಕ ವಿದ್ಯಾಸಂಸ್ಥೆಗಳ ಸುಮಾರು 4 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಾಕಥಾನ್‌ನಲ್ಲಿ ಹೆಜ್ಜೆಹಾಕಿದರು.  ಪುರಭವನದಿಂದ ಹೊರಟು ಹಂಪನಕಟ್ಟೆ, ಕೆ.ಎಸ್.ರಾವ್ ರಸ್ತೆ, ನವಭಾರತ ವೃತ್ತ, ಪಿವಿಎಸ್, ಲಾಲ್‌ಭಾಗ್, ಲೇಡಿಹಿಲ್, ನಾರಾಯಣ ಗುರು ವೃತ್ತ ಮಾರ್ಗವಾಗಿ ಮಂಗಳ ಕ್ರೀಡಾಂಗಣದವರೆಗೆ ಸಾಗಿತು. 

ವಾಕಥಾನ್ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌,  ವಿದ್ಯಾರ್ಥಿ ಸಮುದಾಯವನ್ನು ಉದ್ದೇಶಿಸಿ ‘ನಿಮ್ಮ ಸ್ನೇಹಿತರು ಇಂತಹ ವ್ಯಸನದಲ್ಲಿ ತೊಡಗಿದ್ದರೆ, ಅವರಿಗೆ ಬುದ್ಧಿ ಹೇಳಿ, ಸರಿದಾರಿಗೆ ತನ್ನಿ. ಪ್ರೀತಿ ಸೌಹಾರ್ದದಿಂದ ಕೂಡಿದ ಆರೋಗ್ಯಕರ ಸಮಾಜ ಕಟ್ಟುವುದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ’ ಎಂದರು.

‘ನಗರದಲ್ಲಿ ಮಾದಕ ಪದಾರ್ಥ ಮಾರಾಟ ದಂಧೆಯಲ್ಲಿ ನಿರತರಾಗಿರುವವರನ್ನು ಪತ್ತೆಹಚ್ಚಿ ಮಟ್ಟ ಹಾಕಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ತಿಳಿಸಿದರು. 

ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ರೀಲ್ಸ್ ಮತ್ತು ಕಿರು ವಿಡಿಯೊ ತಯಾರಿಸುವ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಸೇಂಟ್ ಆಗ್ನೆಸ್ ಕಾಲೇಜಿನ ನಾಗೇಶ್‌ ಕಾಂಚನ್‌, ಸೌಮ್ಯಾ ಭಂಡಾರಿ, ಎರಡನೇ ಬಹುಮಾನ ಪಡೆದ ನಗರದ  ಶ್ರೀದೇವಿ ಕಾಲೇಜಿನ ನಿತಿನ್ ಕುಮಾರ್‌, ಮೂರನೇ ಬಹುಮಾನ ಪಡೆದ ಕರ್ನಾಟಕ ಆಯುರ್ವೇದ ಕಾಲೇಜಿನ ಅನ್ವಿತ್ ವಿ ಅವರಿಗೆ ಹಾಗೂ ಪೋಸ್ಟರ್ ತಯಾರಿಸುವ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದ ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ಕಾಲೇಜಿನ ಆದಿತ್ಯ.  ಎರಡನೇ ಸ್ಥಾನ ಪಡೆದ ನಗರದ ಯೆನೆಪೋಯ ಪಿ.ಯು. ಕಾಲೇಜಿನ ಮೆಲ್ವಿನ್‌ ಫೆಲಿಕ್ಸ್ ಹಾಗೂ ಮೂರನೇ ಬಹುಮಾನ ಪಡೆದ  ಸಿಟಿ ಕಾಲೇಜ್ ಆಫ್ ನರ್ಸಿಂಗ್‌ನ ವೈಷ್ಣವಿ ಅವರಿಗೆ ಸಚಿವರು ಬಹುಮಾನ ವಿತರಿಸಿದರು. 

ಪೊಲೀಸ್ ಕಮಿಷನರ್ ಅನಿಲ್‌ ಅಗರ್ವಾಲ್ ಪ್ರಸ್ತಾವಿಕವಾಗಿ ಮಾತನಾಡಿದರು.

ಸಂಸದ ನಳಿನ್ ಕುಮಾರ್ ಕಟೀಲ್, ಮೇಯರ್ ಸುಧೀರ್ ಶೆಟ್ಡಿ ಕಣ್ಣೂರು, ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್, ಪಾಲಿಕೆ ವಿರೋಧ ಪಕ್ಷದ ನಾಯಕ ಪ್ರವೀಣಚಂದ್ರ ಆಳ್ವ, ಪಾಲಿಕೆ‌ ಸದಸ್ಯರಾದ ಶಶಿಧರ ಹೆಗ್ಡೆ, ಎ.ಸಿ.ವಿನಯರಾಜ್, ಅನಿಲ್, ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ಧಾರ್ಥ್ ಗೋಯಲ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಬಿ.ಪಿ. ಇದ್ದರು.

ಮಂಗಳೂರು ಪೊಲೀಸ್ ಕಮಿಷನರೇಟ್‌ ವತಿಯಿಂದ ಮಂಗಳೂರಿನಲ್ಲಿ ಬುಧವಾರ ಏರ್ಪಡಿಸಿದ್ದ ಡ್ರಗ್ಸ್ ಮುಕ್ತ ಭವಿಷ್ಯಕ್ಕಾಗಿ ‘ವಾಕಥಾನ್‌’ನಲ್ಲಿ ವಿದ್ಯಾರ್ಥಿನಿಯರು ವಿದ್ಯಾರ್ಥಿನಿಯರು ಉತ್ಸಾಹದಿಂದ ಹೆಜ್ಜೆ ಹಾಕಿದರು – ಪ್ರಜಾವಾಣಿ ಚಿತ್ರ
ಮಂಗಳೂರು ಪೊಲೀಸ್ ಕಮಿಷನರೇಟ್‌ ವತಿಯಿಂದ ಮಂಗಳೂರಿನಲ್ಲಿ ಬುಧವಾರ ಏರ್ಪಡಿಸಿದ್ದ ಡ್ರಗ್ಸ್ ಮುಕ್ತ ಭವಿಷ್ಯಕ್ಕಾಗಿ ‘ವಾಕಥಾನ್‌’ನಲ್ಲಿ ವಿದ್ಯಾರ್ಥಿನಿಯರು ವಿದ್ಯಾರ್ಥಿನಿಯರು ಉತ್ಸಾಹದಿಂದ ಹೆಜ್ಜೆ ಹಾಕಿದರು – ಪ್ರಜಾವಾಣಿ ಚಿತ್ರ

ಕಮಿಷನರ್‌ ಹಾಗೂ ಡಿಸಿಪಿಯವರ ಭಾವಚಿತ್ರ ಇರುವ ಫ್ಲೆಕ್ಸ್‌ಗಳನ್ನು ನಗರದ ಪ್ರಮುಖ ಜಂಕ್ಷನ್‌ಗಳ ಬಳಿ ಅಳವಡಿಸಿ ಕಾರ್ಯಕ್ರಮಕ್ಕೆ ಪ್ರಚಾರ ನೀಡಲಾಗಿತ್ತು.

ಮಾದಕ ಪದಾರ್ಥ ಸೇವನೆ ಯುವಜನರ ಭವಿಷ್ಯಕ್ಕೆ ಮಾರಕ. ಡ್ರಗ್‌ ತಾತ್ಕಾಲಿಕ ಖುಷಿ ಕೊಡಬಹುದು. ಆದರೆ ಅದೇ ವ್ಯಸನವಾಗಿ ಜೀವನವೇ ನಾಶವಾಗುತ್ತದೆ. ಕುಟುಂಬವೂ ತತ್ತರಿಸುತ್ತದೆ
- ದಿನೇಶ್‌ ಗುಂಡೂರಾವ್‌ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ.

ಪ್ರಯಾಣಿಕರಿಗೆ ಸಮಸ್ಯೆ:

ವಾಕಥಾನ್‌ಸಾಗಿದ ಮಾರ್ಗಗಳಲ್ಲಿ ವಾಹನ ಸಂಚಾರ ನಿಷೇಧಿಸಿದ್ದರಿಂದ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಿದ್ದರಿಂದ ಪ್ರಯಾಣಿಕರು ಸಮಸ್ಯೆ ಎದುರಿಸಿದರು. ವಾಕಥಾನ್‌ಗಳು ಸಾಗುವವರೆಗೂ ಬಸ್‌ಗಳೂ ಸೇರಿದಂತೆ ವಿವಿಧ ವಾಹನಗಳು ಕಾದು ನಿಲ್ಲಬೇಕಾಯಿತು. ಬಳಿಕ ಒಮ್ಮಲೆ ವಾಹನಗಳು ಸಂಚರಿಸಿದ್ದರಿಂದ ನಗರದ ಪುರಭವನ ಹಂಪನಕಟ್ಟ ಅಂಬೇಡ್ಕರ್‌ ವೃತ್ತ ಪ್ರದೇಶದಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT