ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ ಪ್ರಾಣಪ್ರತಿಷ್ಠೆ– ಮಂಗಳೂರಿನಲ್ಲಿ ಸಡಗರ

Published 22 ಜನವರಿ 2024, 9:38 IST
Last Updated 22 ಜನವರಿ 2024, 9:38 IST
ಅಕ್ಷರ ಗಾತ್ರ

ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮಮಂದಿರಲ್ಲಿ ಬಾಲರಾಮ ಮೂರ್ತಿಯ ಪ್ರತಿಷ್ಠೆಯ ಪ್ರಯಕ್ತ ಸೋಮವಾರ ಕರಾವಳಿಯ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು. ಭಕ್ತರು ರಾಮತಾರಕ ಮಂತ್ರಗಳನ್ನು ಜಪಿಸಿದರು.

ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆಯನ್ನು ಇಲ್ಲಿನ ರಾಮಭಕ್ತರು ಸಂಭ್ರಮ ಸಡಗರದಿಂದ ಆಚರಿಸಿದರು. ಆಕರ್ಷಕ ರಂಗೋಲಿಗಳನ್ನು ಬಿಡಿಸಿ, ದೇವಾಲಯಗಳನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು. ಪ್ರಾಣ ಪ್ರತಿಷ್ಠೆಯ ವಿಧಿಗಳು ನೆರವೇರುತ್ತಿದ್ದಂತೆಯೇ ದೇವಸ್ಥಾನಗಳಲ್ಲಿ ಭಕ್ತರು ಸಿಹಿ ಹಂಚಿ ಸಂಭ್ರಮಿಸಿದರು. ಕೆಲವು ದೇವಸ್ಥಾನಗಳಲ್ಲಿ ತಂಪು ಪಾನೀಯ, ಮಜ್ಜಿಗೆ, ಉಪಾಹಾರದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಅಯೋಧ್ಯೆಯಲ್ಲಿ ನಡೆಯುವ ಪ್ರಾಣಪ್ರತಿಷ್ಠೆ ಸಮಾರಂಭ ವೀಕ್ಷಿಸಲು ನಗರದ ಕದ್ರಿ ದೇವಸ್ಥಾನ, ಪಾಲಿಕೆ ಕಚೇರಿ, ಶ್ರೀವಿಠೋಭ ರುಕುಮಾಯಿ ದೇವಸ್ಥಾನದ ಆವರಣವೂ ಸೇರಿದಂತೆ ಹಲವೆಡೆ ಡಿಜಿಟಲ್‌ ಪರದೆಯ ವ್ಯವಸ್ಥೆ ಕಲ್ಪಿಸಲಾಗಿತ್ತು.

ಶಾಸಕ ಕಾಮತ್‌ ಉರುಳುಸೇವೆ:

ಶಾಸಕ ವೇದವ್ಯಾಸ ಕಾಮತ್‌ ಅವರು ನಗರದ ಬಜಿಲಕೇರಿಯ ಮುಖ್ಯಪ್ರಾಣ ದೇವಸ್ಥಾನದಲ್ಲಿ ಉರುಳು ಸೇವೆ ಸಲ್ಲಿಸುವ ಮೂಲಕ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನೆರವೇರಲು ಹೊತ್ತಿದ್ದ ಹರಕೆ ತೀರಿಸಿದರು.

ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ.ಭರತ್‌ ಶೆಟ್ಟಿ ಅವರು ಕಾವೂರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ರಾಮೋತ್ಸವದಲ್ಲಿ ಭಾಗಿಯಾದರು. ಇಲ್ಲಿ ಭಕ್ತರ ಜೊತೆ ಸೇರಿ ಭಜನೆಯಲ್ಲಿ ಭಾಗವಹಿಸಿದರು.

ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ವಿಠಲದಾಸ ತಂತ್ರಿಗಳ ನೇತೃತ್ವದಲ್ಲಿ ಪ್ರಧಾನ ಅರ್ಚಕ ರಾಘವೇಂದ್ರ ಭಟ್‌ ಅವರು ಪ್ರಾರ್ಥನೆ ಸಲ್ಲಿಸಿ ವಿಶೇಷ ಪೂಜೆ ನೆರವೇರಿಸಿದರು. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಶಾಸಕ ವೇದವ್ಯಾಸ ಕಾಮತ್, ದೇವಸ್ಥಾನ ಮೊಕ್ತೇಸರ ಎ.ಜೆ.ಶೆಟ್ಟಿ, ಟ್ರಸ್ಟಿಗಳಾದ ಮನೋಹರ ಸುವರ್ಣ, ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಪಿ., ಪಾಲಿಕೆ ಸದಸ್ಯರಾದ ಮನೋಹರ ಶೆಟ್ಟಿ, ಶಕೀಲಾ ಕಾವ, ವಿಶ್ವಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್, ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ.ಪುರುಷೋತ್ತಮ್ ಮತ್ತಿತರರು ಭಾಗವಹಿಸಿದ್ದರು. ಬಳಿಕ ದೇವಸ್ಥಾನದಲ್ಲಿ ರಾಮತಾರಕ ಮಂತ್ರ ಜಪಿಸಲಾಯಿತು.

ಮರೋಳಿ ಸೂರ್ಯನಾರಾಯಣ ದೇವಸ್ಥಾನದಲ್ಲಿ ರಾಮತಾರಕ ಹವನ ಹಾಗೂ ಬೋಳೂರಿನ ಶ್ರೀರಾಮ ಭಜನಾ ಮಂದಿರದಲ್ಲಿ ಹೋಮ– ಹವನ ನೆರವೇರಿಸಲಾಯಿತು.

ರಾಮಪ್ರಾಣ ಪ್ರತಿಷ್ಠೆಯ ನೇರಪ್ರಸಾರವನ್ನು ವೀಕ್ಷಿಸಲು ನಗರದ ವಿಠೋಭಾ ರುಕುಮಾಯಿ ದೇವಸ್ಥಾನದ ಬಳಿ ಶ್ರೀರಾಮ ಭಕ್ತರು ಡಿಜಿಟಲ್‌ ‍ಪರದೆಯ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿ ಭಕ್ತರಿಗೆ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.

ಬೋಳೂರಿನ ಕಾಳಿಚರಣ್‌ ಫ್ರೆಂಡ್ಸ್‌ನವರು ಶ್ರೀರಾಮ, ಲಕ್ಷ್ಮಣ ಹಾಗೂ ಹನುಮಂತನ ವೇಷಧರಿಸಿ ಸಂಭ್ರಮಿಸಿದರು.

ಕೆಲವು ಖಾಸಗಿ ಸಿಟಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT