ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ಜ್ಞಾನದಾಹಿಗಳ ಆಶಾಕಿರಣ ಬಲ್ಮಠ ಮಹಿಳಾ ಕಾಲೇಜು

Published 23 ಮೇ 2024, 7:12 IST
Last Updated 23 ಮೇ 2024, 7:12 IST
ಅಕ್ಷರ ಗಾತ್ರ

ಮಂಗಳೂರು: ನಗರದ ಬಲ್ಮಠದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಜ್ಞಾನ ಪಡೆಯುವ ಹಂಬಲವಿರುವ ಹೆಣ್ಣುಮಕ್ಕಳ ಪಾಲಿನ ಆಶಾಕಿರಣ. ನಗರದ ಹಾಗೂ ಜಿಲ್ಲೆಯ ದೂರದ ಊರುಗಳ ಹುಡುಗಿಯರು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಪರಿಷತ್ತಿನಿಂದ (ನ್ಯಾಕ್‌) ಮೊದಲ ಸುತ್ತಿನ ಮೌಲ್ಯಮಾಪನದಲ್ಲೇ ‘ಎ’ ಗ್ರೇಡ್‌ ಪಡೆದ ನಗರದ ಮಂಗಳೂರು ಪ್ರದೇಶದ ಮೊದಲ ಸರ್ಕಾರಿ ಕಾಲೇಜು ಎಂಬ ಹಿರಿಮೆ ಈ ಸಂಸ್ಥೆಯದು. 2023ರ ಜನವರಿಯಲ್ಲಿ  3.07 ಸಿಜಿಪಿಎಯೊಂದಿಗೆ ಈ ಕಾಲೇಜು ‘ಎ’ ಗ್ರೇಡ್ ಅನ್ನು ಪಡೆದಿತ್ತು.

2007ರಲ್ಲಿ ಆರಂಭವಾದ ಈ ಶಿಕ್ಷಣ ಸಂಸ್ಥೆ ಸುಸಜ್ಜಿತ ಕಟ್ಟಡ ಹೊಂದಿದೆ. ರಾಜ್ಯ ಸರ್ಕಾರದ ಅನುದಾನದಿಂದ ಮತ್ತು ಉದ್ದಿಮೆಗಳ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿಯ ನೆರವಿನಿಂದ ಸುಸಜ್ಜಿತ ತರಗತಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಕಾಲೇಜಿನ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನಿಡಲಾಗಿದೆ. ಪ್ರಥಮ ವರ್ಷದಲ್ಲಿ 336, ದ್ವಿತೀಯ ವರ್ಷದಲ್ಲಿ 272 ಹಾಗೂ ತೃತೀಯ ವರ್ಷದಲ್ಲಿ 225 ವಿದ್ಯಾರ್ಥಿನಿಯರು ಸೇರಿದಂತೆ 2023–24ನೇ ಸಾಲಿನಲ್ಲಿ ಒಟ್ಟು 833 ವಿದ್ಯಾರ್ಥಿನಿಯರು ಕಲಿಯುತ್ತಿದ್ದಾರೆ. ಸುಶಿಕ್ಷಿತ ಉಪನ್ಯಾಸಕರ ಬಳಗ ಇಲ್ಲಿದ್ದು, ಒಟ್ಟು 44 ಬೋಧಕ ಸಿಬ್ಬಂದಿ ಹಾಗೂ 9 ಬೋಧಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಬಿಎ. ಬಿಬಿಎ, ಬಿ.ಕಾಂ, ಬಿಸಿಎ, ಬಿ.ಎಸ್ಸಿ ಕೋರ್ಸ್‌ಗಳು ಇಲ್ಲಿ ಲಭ್ಯ. ಬಿ.ಎ ವಿದ್ಯಾರ್ಥಿಗಳು ಇತಿಹಾಸ, ಅರ್ಥಶಾಸ್ತ್ರ ರಾಜಕೀಯಶಾಸ್ತ್ರ ಹಾಗೂ ಸಮಾಜವಿಜ್ಞಾನ (ಎಚ್ಇಪಿ ಅಥವಾ ಎಚ್‌ಇಎಸ್‌) ವಿಷಯಗಳನ್ನು ಕಲಿಯಲು ಅವಕಾಶ ಇದೆ. ಬಿ.ಎಸ್ಸಿಯಲ್ಲಿ ಭೌತವಿಜ್ಞಾನ, ಗಣಿತದ ಜೊತೆಗೆ ಕಂಪ್ಯೂಟರ್‌ ವಿಜ್ಞಾನ ಅಥವಾ ರಾಸಾಯನಿಕ ವಿಜ್ಞಾನ ಕಲಿಯಲು ಅವಕಾಶವಿದೆ. ವೃತ್ತಿ ಆಧರಿತ ಹೆಚ್ಚುವರಿ ಕೋರ್ಸ್‌ಗಳೂ ಇಲ್ಲಿ ಲಭ್ಯ ಎನ್ನುತ್ತಾರೆ ಸಂಸ್ಥೆಯ ಪ್ರಾಂಶುಪಾಲ ಪ್ರೊ.ಜಗದೀಶ ಬಾಳ.

‘ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ ) ಆಧರಿತ ತರಗತಿ ಕೊಠಡಿಗಳು, ವಿಶಾಲ ಸಭಾಂಗಣ, ಸುಸಜ್ಜಿತ ಪ್ರಯೋಗಾಲಯ, ಸುಸಜ್ಜಿತ ಗ್ರಂಥಾಲಯ, ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಸೌಕರ್ಯಗಳು ಕಾಲೇಜಿನಲ್ಲಿ ಲಭ್ಯ.’

‘ರಾಷ್ಟ್ರೀಯ ಸೇವಾ ಯೋಜನೆ, ರೇಂಜರ್ಸ್‌, ರೆಡ್‌ಕ್ರಾಸ್‌, ಚುನಾವಣಾ ಸಾಕ್ಷರತಾ ಕ್ಲಬ್‌ (ಇಎಲ್‌ಸಿ) ಹಾಗೂ ಉದ್ಯೋಗಾವಕಾಶ ಘಟಕಗಳು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗೆ ಪೂರಕವಾಗಿ ಇತರ ಸಾಮಾಜಿಕ ಕಾರ್ಯಗಳಲ್ಲಿ ತೊಡಗಲು ಉತ್ತೇಜಿಸುತ್ತಿವೆ’. 

‘ಇಲ್ಲಿ ಶಿಕ್ಷಣ ಪಡೆಯುವ ಬಡ ವಿದ್ಯಾರ್ಥಿನಿಯರು ಶುಲ್ಕವಿನಾಯಿತಿ, ಸರ್ಕಾರಿ ಪ್ರಾಯೋಜಿತ ವಿದ್ಯಾರ್ಥಿವೇತನದ ಸೌಕರ್ಯಗಳನ್ನೂ ಪಡೆದುಕೊಳ್ಳಬಹುದು. ವೃತ್ತಿ ಮಾರ್ಗದರ್ಶನ ಮಾಡುವ ಹಾಗೂ ಉದ್ಯೋಗಾವಕಾಶ ಒದಗಿಸುವ ಕಾರ್ಯಕ್ರಮಗಳನ್ನೂ ಕ್ಯಾಂಪಸ್‌ನಲ್ಲಿ ಹಮ್ಮಿಕೊಳ್ಳಲಾಗುತ್ತದೆ. ವಿದ್ಯಾರ್ಥಿನಿಯರು ಕೈಗಾರಿಕೆ ಭೇಟಿ ಹಾಗೂ ಕ್ಷೇತ್ರ ಪರಿವೀಕ್ಷಣೆಯಂತಹ ಕಾರ್ಯಕ್ರಮಗಳ ಸದುಪಯೊಗವನ್ನೂ ಪಡೆಯಬಹುದು’ ಎಂದು ಅವರು ತಿಳಿಸಿದರು.

‘ವಿದ್ಯಾರ್ಥಿನಿಯರ ಸರ್ವಾಂಗೀಣ ಅಭಿವೃದ್ಧಿಗಾಗಿ ವಿವಿಧ ಕ್ಲಬ್‌ಗಳು ಕಾರ್ಯನಿರ್ವಹಿಸುತ್ತಿವೆ. ಇವು ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಚಟುವಟಿಕೆ ಹಮ್ಮಿಕೊಳ್ಳುತ್ತವೆ. ಆಗಾಗ ಕಾರ್ಯಾಗಾರ ಹಾಗೂ ವಿಚಾರಸಂಕಿರಣಗಳನ್ನು ಏರ್ಪಡಿಸುತ್ತೇವೆ. ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ವಿಶೇಷ ತರಬೇತಿಯನ್ನು ಹಮ್ಮಿಕೊಳ್ಳುತ್ತೇವೆ. ಬೆಂಗಳೂರಿನ ನಿಮ್ಹಾನ್ಸ್‌ ಸಂಸ್ಥೆಯಲ್ಲಿ ತರಬೇತಿ ಪಡೆದ ಅಧ್ಯಾಪಕರು ವಿದ್ಯಾರ್ಥಿನಿಯರಿಗೆ ಆಪ್ತ ಸಮಾಲೋಚನೆ ನಡೆಸುತ್ತಾರೆ. ಇಂಗ್ಲಿಷ್‌ನಲ್ಲಿ ಸುಲಲಿತವಾಗಿ ಮಾತನಾಡಲು ಕಲಿಸುವ ಕಾರ್ಯಕ್ರಮಗಳನ್ನೂ ಏರ್ಪಡಿಸುತ್ತೇವೆ’ ಎಂದರು.

ನಗರದಿಂದ ಬೇರೆ ಕಡೆಯಿಂದ ಬರುವ ವಿದ್ಯಾರ್ಥಿನಿಯರಿಗೆ ಸುಲಭವಾದ ಸಾರಿಗೆ ಸಂಪರ್ಕವೂ ಲಭ್ಯ. ಈ ಕಾಲೇಜಿನ 2024– 25ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ.

ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಸುಶಿಕ್ಷಿತ ಮಹಿಳೆಯರು ಅಗತ್ಯ. ಆರ್ಥಿಕವಾಗಿ ದುರ್ಬಲವಾಗಿರುವ ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ರಾಜ್ಯ ಸರ್ಕಾರದ ಈ ಪ್ರೋತ್ಸಾಹ ಶ್ಲಾಘನೀಯ
ಪ್ರೊ.ಜಗದೀಶ ಬಾಳ ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು. ಬಲ್ಮಠ ಮಂಗಳೂರು
ಬಾವಿಗೆ ಮಳೆ ನೀರು
ಮರುಪೂರಣ ಪರಿಸರ ಸ್ನೇಹಿ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೂಲಕ ಈ ಕಾಲೇಜು ಇತರ ವಿದ್ಯಾಸಂಸ್ಥೆಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ. ಮಳೆನೀರನ್ನು ಶುದ್ಧೀಕರಿಸಿ ಕಾಲೇಜಿನ ಪ್ರಾಂಗಣದಲ್ಲಿರುವ ಬಾವಿಗೆ ನೀರಿನ ಮರುಪೂರಣ ಮಾಡಲಾಗುತ್ತಿದೆ.
ಅಂಕಿ ಅಂಶ
833 ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು 44 ಬೋಧಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ –0– ಕಾಲೇಜಿನ ವಿಶೇಷ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ  ತರಬೇತಿ ವೈಕ್ತಿತ್ವ ವಿಕಸನ ಚಟುವಟಿಕೆಗೆ ವಿವಿಧ ಕ್ಲಬ್‌ಗಳು ನಿಮ್ಹಾನ್ಸ್‌ನಲ್ಲಿ ತರಬೇತಾದವರಿಂದ  ಆಪ್ತಸಮಾಲೋಚನೆ  ಇಂಗ್ಲಿಷ್ ಸಂವಹನಕ್ಕೆ  ವಿಶೇಷ ತರಬೇತಿ ವೃತ್ತಿ ಆಧರಿತ ಹೆಚ್ಚುವರಿ ಕೋರ್ಸ್‌ಗಳು ಬಡ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ –0– ಕಾಲೇಜಿನ ವಿಶೇಷ ಸೌಕರ್ಯಗಳು ಉದ್ಯೋಗಾವಕಾಶ ನಿರ್ವಹಣೆಗೆ ಪ್ರತ್ಯೇಕ ಘಟಕ ಪ್ರಾಂಗಣದಲ್ಲಿ ಸಿಸಿಟಿವಿ ಕ್ಯಾಮೆರಾ ನಿಗಾವಣೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಆಧರಿತ ತರಗತಿ ಕೊಠಡಿಗಳು ಸುಸಜ್ಜಿತ ಪ್ರಯೋಗಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT