ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ನೌಕರರ ಮುಷ್ಕರ: ‘ದೇಶದ ಸಂಪತ್ತು ಖಾಸಗಿಯವರ ಕೈಗೆ’

ಖಾಸಗೀಕರಣ ಕೈಬಿಡಲು ಒಕ್ಕೊರಲ ಒತ್ತಾಯ
Last Updated 17 ಮಾರ್ಚ್ 2021, 4:44 IST
ಅಕ್ಷರ ಗಾತ್ರ

ಮಂಗಳೂರು: ಸಾರ್ವಜನಿಕ ವಲಯದ ಎರಡು ಬ್ಯಾಂಕ್‌ಗಳು ಹಾಗೂ ವಿಮಾ ಕಂಪನಿಗಳ ಖಾಸಗೀಕರಣವನ್ನು ವಿರೋಧಿಸಿ ದೇಶದಾದ್ಯಂತ ನಡೆದ ಎರಡು ದಿನಗಳ ಮುಷ್ಕರದ ಅಂಗವಾಗಿ ಮಂಗಳವಾರ ನಗರದ ಕೆನರಾ ಬ್ಯಾಂಕ್‌ ವೃತ್ತ ಕಚೇರಿ ಎದುರು ಬ್ಯಾಂಕ್‌ ಸಂಘಟನೆಗಳ ಸಂಯುಕ್ತ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಅಖಿಲ ಭಾರತ ಬ್ಯಾಂಕ್‌ ಅಧಿಕಾರಿಗಳ ಸಂಘಟನೆಯ ಮಾಜಿ ಜಂಟಿ ಕಾರ್ಯದರ್ಶಿ ಟಿ.ಆರ್. ಭಟ್‌ ಮಾತನಾಡಿ, ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿದ್ದೇ ಸಮುದಾಯದ ಅಭಿವೃದ್ಧಿಗಾಗಿ. ಈಗ ಬ್ಯಾಂಕ್‌ಗಳ  ಖಾಸಗೀಕರಣದಿಂದ ಗ್ರಾಹಕರು ತೊಂದರೆ ಅನುಭವಿಸುವಂತಾಗಲಿದೆ. ಹಳ್ಳಿಗಾಡಿನಲ್ಲಿ ತೆರೆದಿರುವ ಬ್ಯಾಂಕ್‌ ಶಾಖೆಗಳು ಮುಚ್ಚಲಿವೆ. ಸರ್ಕಾರದ ಇಂತಹ ಕ್ರಮಗಳಿಂದ ದೇಶದ ಸಂಪತ್ತು ಖಾಸಗಿಯವರ ಕೈಗೆ ಹೋಗಲಿದೆ ಎಂದು ಎಚ್ಚರಿಸಿದರು.

ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸಂಚಾಲಕ ಎಚ್.ವಿ. ರಾವ್‌ ಮಾತನಾಡಿ, ನಮ್ಮ ಬದ್ಧತೆ ಏನಿದ್ದರೂ ಸಮಾಜಕ್ಕೆ. ಎಲ್ಲರೂ ಜೊತೆಯಾಗಿ ಇಂತಹ ಬೇಜವಾಬ್ದಾರಿ ಕ್ರಮಗಳ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದರು.

1969 ಕ್ಕಿಂತ ಮೊದಲು ಇದ್ದ ಸ್ಥಿತಿಯನ್ನು ವಿವರಿಸಿದ ಅವರು, ಇಂದಿರಾ ಗಾಂಧಿ ಅವರ ಕಾಲದಲ್ಲಿ ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಲಾಗಿದ್ದು, ಬ್ಯಾಂಕ್‌ಗಳು ಜನರ ಬಳಿಗೆ ಬಂದವು. ಆಗಿನ ಜನಸಂಘವು ಬ್ಯಾಂಕ್‌ಗಳ ರಾಷ್ಟ್ರೀಕರಣವನ್ನು ವಿರೋಧಿಸಿತ್ತು. ಇದೀಗ ಅದೇ ಕಾರ್ಯಸೂಚಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಆಪಾದಿಸಿದರು.

ಸಿಐಟಿಯುನ ಸುನಿಲ್‌ಕುಮಾರ್ ಬಜಾಲ್‌ ಮಾತನಾಡಿ, ಸರ್ಕಾರದ ಸಂಪತ್ತನ್ನು ಖಾಸಗಿಯವರಿಗೆ ನೀಡಲು ಹೊರಟಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಅಗತ್ಯವಾಗಿದೆ. ದೇಶದ ಹೆಸರಾಂತ ರಾಷ್ಟ್ರೀಕೃತ ಬ್ಯಾಂಕ್‌ಗಳು ಆರಂಭವಾಗಿರುವ ಅವಿಭಜಿತ ಜಿಲ್ಲೆಯಿಂದಲೇ ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಬಲವಾದ ಹೋರಾಟ ರೂಪಗೊಳ್ಳಬೇಕು ಎಂದು ತಿಳಿಸಿದರು.

ಎರಡನೇ ದಿನದ ಮುಷ್ಕರದಲ್ಲಿ ಮಾತನಾಡಿದ ಬ್ಯಾಂಕ್‌ ಸಂಘಟನೆಗಳ ಸಂಯುಕ್ತ ವೇದಿಕೆಯ ಸಂಚಾಲಕ ವಿನ್ಸೆಂಟ್‌ ಡಿಸೋಜ ಮಾತನಾಡಿ, ಬ್ಯಾಂಕ್‌ಗಳು ಹಾಗೂ ವಿಮಾ ಕಂಪನಿಗಳ ಖಾಸಗೀಕರಣದಿಂದ ನಿರುದ್ಯೋಗ ಸಮಸ್ಯೆ ಉದ್ಭವವಾಗಲಿದೆ. ಜೊತೆಗೆ ಸರ್ಕಾರದ ಯೋಜನೆಗಳ ಜಾರಿಗೆ ಅಡ್ಡಿಯಾಗಲಿದೆ. ಆದ್ಯತಾ ವಲಯಕ್ಕೆ ಸಾಲ ಸೌಲಭ್ಯ, ಶೈಕ್ಷಣಿಕ ಸಾಲ ಸೇರಿದಂತೆ ಅಗತ್ಯ ಸೇವೆಗಳು ಸಾರ್ವಜನಿಕರಿಗೆ ಸಿಗದೇ ಇರಬಹುದು ಎಂದು ಎಚ್ಚರಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ರವಿಕಿರಣ ಪುಣಚ, ದೇಶದಲ್ಲಿ ರೈತರು ಹಾಗೂ ಬ್ಯಾಂಕ್‌ ನೌಕರರು ನಡೆಸುತ್ತಿರುವ ಮುಷ್ಕರ ಎರಡನೇ ಸ್ವಾತಂತ್ರ್ಯ ಚಳವಳಿಯಾಗಿದೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ, ಮುಂದೆ ತೊಂದರೆ ಅನುಭವಿಸುವಂತಾಗಲಿದೆ ಎಂದು ಹೇಳಿದರು.

ಅಖಿಲ ಭಾರತ ಬ್ಯಾಂಕ್‌ ಅಧಿಕಾರಿಗಳ ಒಕ್ಕೂಟ, ಅಖಿಲ ಭಾರತ ಬ್ಯಾಂಕ್‌ ಉದ್ಯೋಗಿಗಳ ಸಂಘ, ಬ್ಯಾಂಕ್‌ ನೌಕರರ ರಾಷ್ಟ್ರೀಯ ಒಕ್ಕೂಟ, ಭಾರತೀಯ ಬ್ಯಾಂಕ್‌ ನೌಕರರ ಒಕ್ಕೂಟ, ಭಾರತೀಯ ರಾಷ್ಟ್ರೀಕೃತ ಬ್ಯಾಂಕ್‌ ನೌಕರರ ಒಕ್ಕೂಟ, ಭಾರತೀಯ ರಾಷ್ಟ್ರೀಕೃತ ಬ್ಯಾಂಕ್‌ ಅಧಿಕಾರಿಗಳ ಕಾಂಗ್ರೆಸ್‌ ಸೇರಿದಂತೆ ಒಂಬತ್ತು ಸಂಘಟನೆಗಳ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT