ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿ.ಸಿ.ರೋಡ್‌: ಬಿಗಿಭದ್ರತೆ ನಡುವೆ ಈದ್ ಮಿಲಾದ್ ರ‍್ಯಾಲಿ

Published : 16 ಸೆಪ್ಟೆಂಬರ್ 2024, 20:52 IST
Last Updated : 16 ಸೆಪ್ಟೆಂಬರ್ 2024, 20:52 IST
ಫಾಲೋ ಮಾಡಿ
Comments

ಬಂಟ್ವಾಳ (ದಕ್ಷಿಣ ಕನ್ನಡ): ಈದ್ ಮಿಲಾದ್‌ ಆಚರಣೆಗೆ ಸಂಬಂಧಿಸಿ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ನೀಡಿದ್ದ ಹೇಳಿಕೆ ಹಾಗೂ ಅದಕ್ಕೆ ಪ್ರತಿಯಾಗಿ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ನೀಡಿದ ಹೇಳಿಕೆಗಳು ಬಿ.ಸಿ. ರೋಡ್‌ನಲ್ಲಿ ಸೋಮವಾರ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿದವು.

ಪಟ್ಟಣದಲ್ಲಿ ಸೋಮವಾರ ಬೆಳಿಗ್ಗೆಯಿಂದ ವಿಎಚ್ ಪಿ ಬಜರಂಗದಳ ಕಾರ್ಯಕರ್ತರು ಬಿ.ಸಿ.ರೋಡ್ ರಕ್ತೇಶ್ವರಿ ದೇವಸ್ಥಾನ ಬಳಿ ಜಮಾಯಿಸಿದ್ದರು. ಮಹಮ್ಮದ್ ಶರೀಫ್ ಬಂಧನಕ್ಕೆ ಆಗ್ರಹಿಸಿದ ಬಜರಂಗ ದಳ‌ ಕಾರ್ಯಕರ್ತರು, ಆತನ ವಿರುದ್ದ ಘೋಷಣೆ ಕೂಗಿದರು. ಪ್ರತಿಭಟನೆ ನಡೆಯುತ್ತಿದ್ದಂತೆಯೇ ಕೆಲವು ಮುಸ್ಲಿಂ ಯುವಕರು ಬೈಕ್‌ನಲ್ಲಿ ಮಿಲಾದ್‌ ರ‍್ಯಾಲಿ ನಡೆಸಿದರು. ‘ಅನುಮತಿ ಇಲ್ಲದೆಯೇ ಬೈಕ್‌ ರ‍್ಯಾಲಿ ನಡೆಸಲು ಹೇಗೆ ಅವಕಾಶ ನೀಡಿದಿರಿ’ ಎಂದು ಪ್ರತಿಭಟನಕಾರರು ಪೊಲೀಸ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ಹಾಗೂ ಕ್ಷಿಪ್ರ ಕಾರ್ಯಾಚರಣೆ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸಂಘಟನೆಯ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಕೆಲ ಹೊತ್ತು ವಾಗ್ವಾದ ನಡೆಯಿತು. ಪ್ರತಿಭಟನಕಾರರನ್ನು ಪೊಲೀಸರು ತಡೆಯಲೆತ್ನಿಸಿದಾಗ ತಳ್ಳಾಟವೂ ನಡೆಯಿತು.

ನಾಗಮಂಗಲದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ‌ ನಡೆದ ಗಲಭೆ ಖಂಡಿಸಿ ಮಂಗಳೂರಿನಲ್ಲಿ ಈಚೆಗೆ ನಡೆದ ಪ್ರತಿಭಟನೆ ವೇಳೆ ಶರಣ್ ಪಂಪ್‌ವೆಲ್, ‘ಹಿಂದೂಗಳು ಮನಸ್ಸು ಮಾಡಿದರೆ ಮುಸ್ಲಿಮರು ಈದ್ ಮೆರವಣಿಗೆ ನಡೆಸುವುದು ಅಸಾಧ್ಯ’ ಎಂದಿದ್ದರು. ಇದಕ್ಕೆ ಪ್ರತಿಯಾಗಿ ‘ತಾಕತ್ತಿದ್ದರೆ ಬಿ.ಸಿ. ರೋಡ್‌ಗೆ ಬನ್ನಿ’ ಎಂದು ಮಹಮ್ಮದ್ ಶರೀಫ್ ಸವಾಲೆಸೆದಿದ್ದರು. ಬಜರಂಗದಳ ಮುಖಂಡ ಪುನೀತ್ ಅತ್ತಾವರ್, ‘ನಾವು ‘ಚಲೋ ಬಿ.ಸಿ. ರೋಡ್’ ಹಮ್ಮಿಕೊಳ್ಳುತ್ತೇವೆ.‌ ತಡೆಯುವವರು ತಡೆಯಿರಿ’ ಎಂದು ಪ್ರತಿ ಸವಾಲು ಹಾಕಿದ್ದರು.

ಬಿ.ಸಿ. ರೋಡ್‌ನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶರಣ್ ಪಂಪ್ ವೆಲ್, ‘ಮಹಮ್ಮದ್ ಶರೀಫ್ ಅವರ ಸವಾಲು ಸ್ವೀಕರಿಸಿ ಬಿ.ಸಿ. ರೋಡಿಗೆ ಬಂದಿದ್ದೇನೆ. ಇದು ಇಡೀ ಹಿಂದುತ್ವ ವಾದಿ ಕಾರ್ಯಕರ್ತರಿಗೆ ಹಾಕಿದ ಸವಾಲು. ಅವಶ್ಯಕತೆ ಬಿದ್ದರೆ ಮಸೀದಿಗೆ ಹೋಗುವುದಕ್ಕೂ ಸಿದ್ಧರಿದ್ದೇವೆ’ ಎಂದು ತಿಳಿಸಿದ್ದರು.

ಸ್ಥಳಕ್ಕೆ ಧಾವಿಸಿದ್ದ ಪಶ್ಚಿಮ ವಲಯದ ಐಜಿಪಿ ಅಮಿತ್ ಸಿಂಗ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ಉಪವಿಭಾಗಾಧಿಕಾರಿ ಹರ್ಷವರ್ಧನ್, ತಹಶೀ ಲ್ದಾರ್ ಅರ್ಚನಾ ಭಟ್ ಮೊದಲಾದ ಅಧಿಕಾರಿಗಳು ಪ್ರತಿಭಟನಕಾರರ ಮನವೊಲಿಸಿ ಹಿಂದಕ್ಕೆ ಕಳುಹಿಸಿದರು.

ಮದ್ಯ ಮಾರಾಟ ನಿಷೇಧ: ಈ ಬೆಳವಣಿಗೆ ಬಳಿಕ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮುಂದಿನ 48 ಗಂಟೆಗಳ ಅವಧಿಯವರೆಗೆ ಎಲ್ಲಾ ವಿಧದ ಅಮಲು ಪದಾರ್ಥಗಳ ಮಾರಾಟ ನಿಷೇಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಆದೇಶ ಹೊರಡಿಸಿದ್ದಾರೆ.

ಪ್ರಕರಣ ದಾಖಲು: ಪ್ರಚೋದನಾಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮಹಮ್ಮದ್ ಶರೀಫ್ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ಹಾಗೂ ಶರಣ್ ಪಂಪ್‌ವೆಲ್ ಹಾಗೂ ಪುನೀತ್ ಅತ್ತಾವರ ವಿರುದ್ಧ ಮಂಗಳೂರಿನ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಟಿಪಳ್ಳ:ಮಸೀದಿಗೆ ಕಲ್ಲು– 6 ಮಂದಿ ಬಂಧನ

ಮಂಗಳೂರು: ಸುರತ್ಕಲ್ ಬಳಿಯ ಕಾಟಿಪಳ್ಳದಲ್ಲಿ ಮಸೀದಿಯೊಂದಕ್ಕೆ ಕಿಡಿಗೇಡಿಗಳು ಭಾನುವಾರ ರಾತ್ರಿ ಕಲ್ಲು ತೂರಿದ್ದಾರೆ. ಈ ಸಂಬಂಧ ಪೊಲೀಸರು ಆರು ಮಂದಿಯನ್ನು ಸೋಮವಾರ ನಗರದ ಕದ್ರಿಯಲ್ಲಿ ಬಂಧಿಸಿದ್ದಾರೆ. ಸುರತ್ಕಲ್ ಆಶ್ರಯ ಕಾಲೊನಿ ನಿವಾಸಿಗಳಾದ ಭರತ್ ಶೆಟ್ಟಿ (26 ವರ್ಷ) ಚೆನ್ನಪ್ಪ ಶಿವಾನಂದ ಚಲವಾದಿ ಮುತ್ತು (19 ) ಚೇಳಾಯ್ರು ಗ್ರಾಮದ ಖಂಡಿಗೆ ಪಾಡಿ ನಿವಾಸಿ ನಿತಿನ್ ಹಡಪ (22) ಮುಂಚೂರು ಗ್ರಾಮದ ಕೊಡಿಪಾಡಿ ನಿವಾಸಿ ಸುಜಿತ್ ಶೆಟ್ಟಿ (23) ಹೊಸಬೆಟ್ಟು ಗ್ರಾಮದ ಈಶ್ವರನಗರದ ಅಲ್ಪಪ್ಪ ಅಲಿಯಾಸ್ ಮನು (24) ಹಾಗೂ ಕಾಟಿಪಳ್ಳ ಮೂರನೇ ಬ್ಲಾಕ್ ನಿವಾಸಿ ಪ್ರೀತಮ್ ಶೆಟ್ಟಿ (34 ) ಬಂಧಿತರು.

ಸಿಹಿ ಹಂಚಿ ಸೌಹಾರ್ದ ಸಾರಿದರು

ಬಂಟ್ವಾಳ ತಾಲ್ಲೂಕಿನ ಮಾಣಿ ಮತ್ತು ಕೊಡಾಜೆ ಜುಮ್ಮಾ ಮಸೀದಿ ವತಿಯಿಂದ ಸೋಮವಾರ ನಡೆದ ಈದ್ ಮೆರವಣಿಗೆಯಲ್ಲಿ  ಹಿಂದೂಗಳು ಸಿಹಿತಿಂಡಿ ಐಸ್ ಕ್ರೀಂ ಮತ್ತು ತಂಪು ಪಾನೀಯ ವಿತರಿಸಿ ಶುಭಕೋರಿದರು. ಉಳ್ಳಾಲ ತಾಲ್ಲೂಕಿನ ಬೋಳಿಯಾರಿನಲ್ಲಿ ಮಿಲಾದ್ ರ್‍ಯಾಲಿಯ ಸಂದರ್ಭ ಊರಿನ ಹಿಂದೂ ಮತ್ತು ಕ್ರೈಸ್ತ ಸಮುದಾಯದವರು ಮುಸ್ಲಿಮರಿಗೆ ಸಿಹಿ ತಿಂಡಿ ಪಾನೀಯ ನೀಡಿ ಹಬ್ಬದ ಶುಭಾಶಯ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT