ಗುರುವಾರ , ಮಾರ್ಚ್ 23, 2023
30 °C
ಫೆ. 10ರೊಳಗೆ ಮಾತುಕತೆ ನಡೆಸಿ: ಬೀಡಿ ಗುತ್ತಿಗೆದಾರರ ಯೂನಿಯನ್

ಮಂಗಳೂರು: ಬೀಡಿಗೆ ಹೆಚ್ಚುವರಿ ಕಮಿಷನ್ ನೀಡದಿದ್ದರೆ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ‘ಬೀಡಿ ಗುತ್ತಿಗೆದಾರರಿಗೆ 2022–23ನೇ ಸಾಲಿಗೆ ₹ 10 ಹೆಚ್ಚುವರಿ ಕಮಿಷನ್‌ ನೀಡಬೇಕು. ಈ ಕುರಿತು ಫೆ.10ರೊಳಗೆ ಮಾತುಕತೆಗೆ ಆಹ್ವಾನಿಸದಿದ್ದಲ್ಲಿ, ಅಂದಿನಿಂದ ಕೆಲಸ ಸ್ಥಗಿತಗೊಳಿಸಿ, ಬೇಡಿಕೆ ಈಡೇರುವ ತನಕ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದೇವೆ’ ಎಂದು ಬೀಡಿ ಗುತ್ತಿಗೆದಾರರ ಒಕ್ಕೂಟ ತಿಳಿಸಿದೆ.

ಈ ಕುರಿತು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಬೀಡಿ ಗುತ್ತಿಗೆದಾರರ ಒಕ್ಕೂಟದ (ಎಚ್‌ಎಂಎಸ್‌) ಕಾರ್ಯಾಧ್ಯಕ್ಷ ಮಹಮ್ಮದ್ ರಫಿ, ‘ಜ.16ರ ಒಳಗೆ ಹೆಚ್ಚುವರಿ ಕಮಿಷನ್ ನೀಡಲು ಮನವಿ ಸಲ್ಲಿಸಿದರೂ ಆಡಳಿತ ವರ್ಗವು ಕ್ರಮ ಜರುಗಿಸಿಲ್ಲ. ಈ ಬಗ್ಗೆ ಜ. 30ರಂದು ಜಂಟಿ ಸಭೆ ಕರೆದು ಚರ್ಚಿಸುವುದಾಗಿ ಮಾಲೀಕರ ಒಕ್ಕೂಟದ ಕಾರ್ಯದರ್ಶಿ ಬಿ.ಸತೀಶ ಪೈ ಭರವಸೆ ನೀಡಿದ್ದರು. ಆ ಸಭೆಯನ್ನು ವಿನಾಕಾರಣ ರದ್ದುಪಡಿಸಲಾಗಿದೆ. ಫೆ 10ರ ಗಡುವಿಗೆ ಸ್ಪಂದನೆ ಸಿಗದಿದ್ದರೆ ದಕ್ಷಿಣ ಕನ್ನಡ ಉಡುಪಿ ಹಾಗೂ ಕಾಸಗೋಡು ಜಿಲ್ಲೆಗಳ ಸುಮಾರು 60 ಡಿಪೊಗಳ ಎದುರು ಧರಣಿ ಸತ್ಯಾಗ್ರಹ ನಡೆಸುತ್ತೇವೆ. ಬೀಡಿ, ಎಲೆ, ತಂಬಾಕು, ಲೇಬಲ್ ಬೀಡಿ, ಸಾಗಾಟ ತಡೆಹಿಡಿಯಲಿದ್ದೇವೆ. ನಗರದ ಗಣೇಶ್ ಬೀಡಿ ಕಚೇರಿ ಮತ್ತು ಭಾರತ್ ಬೀಡಿ ಸಮೂಹ ಸಂಸ್ಥೆಯ ಎದುರು ಬೀಡಿ ಗುತ್ತಿಗೆದಾರರು ಮತ್ತು ಬೀಡಿ ಕಾರ್ಮಿಕರನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ’ ಎಂದು ತಿಳಿಸಿದರು. 

‘ಕರ್ನಾಟಕ ರಾಜ್ಯ ಬೀಡಿ ಕಂಟ್ರಾಕ್ಟ್ರುದಾರರ ಸಂಘ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಬೀಡಿ ಕಂಟ್ರಾಕ್ಟ್ರುದಾರರ ಸಂಘ, ಸೌತ್ ಕೆನರಾ-ಉಡುಪಿ ಜಿಲ್ಲಾ ಬೀಡಿ ಕಂಟ್ರಾಕ್ಟರ್ ಯೂನಿಯನ್, ಪುತ್ತೂರಿನ ಜಯ ಕರ್ನಾಟಕ ಬೀಡಿ ಗುತ್ತಿಗೆದಾರರ ಸಂಘ
ಕಾಸರಗೋಡು ಜಿಲ್ಲಾ ಬೀಡಿ ಗುತ್ತಿಗೆದಾರರ ಸಂಘದ ಸದಸ್ಯರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

‘ಗುತ್ತಿಗೆದಾರರ ದುಡಿಮೆಗೆ ತಕ್ಕ ಸೌಲಭ್ಯ ಸಿಗುತ್ತಿಲ್ಲ. ಗುತ್ತಿಗೆದಾರರ ವಿವಿಧ ಸಂಘಟನೆಗಳು ಹೆಚ್ಚುವರಿ ಕಮಿಷನ್‌ಗಾಗಿ ಪ್ರತಿ ವರ್ಷ ಆಡಳಿತ ವರ್ಗಕ್ಕೆ ಮನವಿ ಸಲ್ಲಿಸುತ್ತಿದ್ದರೂ ಸ್ಪಂದನೆ ಸಿಕ್ಕಿಲ್ಲ. ಎಪ್ರಿಲ್‌ನಲ್ಲಿ ಹೆಚ್ಚುವರಿ ಕಮಿಷನ್ ನೀಡದೇ ಸತಾಯಿಸಿ, ಡಿಸೆಂಬರ್, ಜನವರಿಯಲ್ಲಿ ನೀಡಲಾಗುತ್ತಿದೆ‘ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಗೌರವಾಧ್ಯಕ್ಷ ಎಂ.ಸುರೇಶ್ಚಂದ್ರ ಶೆಟ್ಟಿ, ಅಧ್ಯಕ್ಷ ರವಿ ಉಡುಪಿ, ಹರೀಶ್ ಕೆ. ಎಸ್., ಕೃಷ್ಣಪ್ಪ ತೊಕ್ಕೊಟ್ಟು, ಗಂಗಾಧರ್ ಶೆಟ್ಟಿ, ಕೃಷ್ಣ ಕಾಸರಗೋಡು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು