ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ವೇಳೆ ಕೈಹಿಡಿದ ನರೇಗಾ: ಬೆಳ್ತಂಗಡಿಯಲ್ಲಿ ₹18.11 ಕೋಟಿ ವೆಚ್ಚದ ಕಾಮಗಾರಿ

ಬೆಳ್ತಂಗಡಿ ತಾಲ್ಲೂಕಿನಲ್ಲಿ ₹18.11 ಕೋಟಿ ವೆಚ್ಚದ ಕಾಮಗಾರಿ
Last Updated 6 ಮೇ 2022, 23:15 IST
ಅಕ್ಷರ ಗಾತ್ರ

ಬೆಳ್ತಂಗಡಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಬೆಳ್ತಂಗಡಿ ತಾಲ್ಲೂಕಿನಲ್ಲಿ ಶೇ 103ರಷ್ಟು ಸಾಧನೆಯಾಗಿದೆ. ಕಳೆದ ಸಾಲಿನಲ್ಲಿ ₹18.11 ಕೋಟಿ ವೆಚ್ಚದ ಕಾಮಗಾರಿಗಳು ನಡೆದಿವೆ.

ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ಬಹಳಷ್ಟು ಜನ ಉದ್ಯೋಗ ಖಾತ್ರಿ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ಉಜಿರೆ ಗ್ರಾಮ ಪಂಚಾಯಿತಿಯಲ್ಲಿ ಉದ್ಯಾನ ನಿರ್ಮಾಣ, ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್‌ ನಿರ್ಮಾಣ, ಗ್ರಾಮೀಣ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನರೇಗಾದಿಂದ ಸಾಧ್ಯವಾಗಿವೆ ಎಂಬುದು ಗ್ರಾಮಸ್ಥರಿಗೆ ಹೆಮ್ಮೆ.

ಕಳೆದ ಸಾಲಿನಲ್ಲಿ ತಾಲ್ಲೂಕಿನಲ್ಲಿ ಒಟ್ಟು 4,27,278 ಮಾನವ ದಿನಗಳನ್ನು ಸೃಜಿಸುವ ಗುರಿ ಹೊಂದಲಾಗಿತ್ತು. ಆದರೆ, ಅದನ್ನು ಮೀರಿ 4,42,786 ಮಾನವ ದಿನಗಳ ಬಳಕೆಯಾಗಿದೆ. ಇದರಲ್ಲಿ ಮಹಿಳೆಯರ ಭಾಗವಹಿಸುವಿಕೆ ಶೇ 47.19 ರಷ್ಟಾಗಿದೆ. ಒಟ್ಟು ಖರ್ಚಾದ ಹಣದಲ್ಲಿ ಕೂಲಿಗಾಗಿ ಶೇ 72.82 ಹಾಗೂ ಸಾಮಗ್ರಿಗಳಿಗೆ ಶೇ 27.18ರಷ್ಟು ಬಳಕೆಯಾಗಿದೆ.

ತಾಲ್ಲೂಕಿನಲ್ಲಿ ಒಟ್ಟು 39,296 ಉದ್ಯೋಗ ಕಾರ್ಡ್ ಮಾಡಲಾಗಿದೆ. ಇದರಲ್ಲಿ 15,994 ಕ್ರಿಯಾಶೀಲ ಉದ್ಯೋಗ ಕಾರ್ಡ್‌ಗಳು ಇವೆ. ವೈಯಕ್ತಿಕ ಕಾಮಗಾರಿಗಳಲ್ಲಿ 2,539 ತೋಟಗಾರಿಕಾ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳು ನಡೆದಿವೆ. 60 ಎರೆಹುಳ ಗೊಬ್ಬರ ಘಟಕ ತಯಾರಿ, ತೆರೆದ ಬಾವಿ 3, ಕೃಷಿ ಹೊಂಡ 31, ದನದ ಶೆಡ್ಡು 588, ಕುರಿ ಮತ್ತು ಆಡು ಸಾಕಾಣಿಕೆ ಶೆಡ್ 38, ಹಂದಿ ಸಾಕಾಣಿಕೆ ಶೆಡ್ 17, ಕೋಳಿ ಸಾಕಾಣಿಕೆ ಶೆಡ್ 37, ತೋಟದ ಕಾಲುವೆ ರಚನೆ 6, ಕಾಂಪೋಸ್ಟ್ ಪಿಟ್ 120, ಬಚ್ಚಲು ಗುಂಡಿ 746 ಹಾಗೂ ಇತರ ಕಾಮಗಾರಿ 290 ಹೀಗೆ ಒಟ್ಟು 4672 ಕಾಮಗಾರಿಗಳನ್ನು ಮಾಡಲಾಗಿದೆ.

ಸಾರ್ವಜನಿಕ ಕಾಮಗಾರಿಗಳಲ್ಲಿ ಮಳೆ ನೀರು ಕೊಯ್ಲು 31, ನೀರಿಂಗಿಸುವಿಕೆ 3, ಗ್ರಾಮೀಣ ರಸ್ತೆ (ಸಿಸಿ ರಸ್ತೆ) 19, ತೋಡಿನ ಹೂಳೆತ್ತುವ ಕಾಮಗಾರಿ 76, ಪಂಚಾಯಿತಿ ಕೆರೆಗಳ ದುರಸ್ತಿ 6, ಅಂಗನವಾಡಿ ಕಟ್ಟಡ 1, ಪೌಷ್ಟಿಕಾಂಶವುಳ್ಳ ಗಿಡಗಳ ತೋಟ ರಚನೆ 7, ಸಾರ್ವಜನಿಕ ಬಾವಿ 3, ಸಾರ್ವಜನಿಕ ಬಚ್ಚಲು ಗುಂಡಿ 11, ತೋಟಗಾರಿಕಾ ಇಲಾಖೆಯ 81 ಹಾಗೂ ಇತರ ಸಣ್ಣಪುಟ್ಟ 64 ಹೀಗೆ ಒಟ್ಟು 307 ಕಾಮಗಾರಿಗಳನ್ನು ಮಾಡಲಾಗಿದೆ.

ಕಳೆಂಜ, ಚಾರ್ಮಾಡಿ, ಮಾಲಾಡಿ, ಇಂದಬೆಟ್ಟು ಮುಂತಾದ ಪಂಚಾಯಿತಿಗಳಲ್ಲಿ ಕೊರೊನಾ ಸಂದರ್ಭದಲ್ಲಿ ಆದ ತೋಡಿನ ಹೂಳೆತ್ತುವ ಕಾಮಗಾರಿಗಳಿಂದಾಗಿ ನೀರು ಸರಾಗವಾಗಿ ಹರಿದು ಹೋಗಲು ಅನುಕೂಲವಾಗಿದೆ.

ತಾಲ್ಲೂಕಿನಲ್ಲಿ ಉಜಿರೆ ಪಂಚಾಯಿತಿ ಎರಡನೇ ಸ್ಥಾನದಲ್ಲಿದ್ದು 15,925 ಮಾನವ ದಿನಗಳ ಗುರಿ ಹೊಂದಲಾಗಿತ್ತು. ಇಲ್ಲಿ 17,938 ಮಾನವ ದಿನಗಳ ಕೆಲಸಗಳಾಗಿವೆ.

ಪ್ರತಿ ಮನೆಯ ಬಳಿ ಬಚ್ಚಲು ಗುಂಡಿ ನಿರ್ಮಾಣಕ್ಕೆ ಸರ್ಕಾರ ₹12 ಸಾವಿರ ನೀಡುತ್ತಿದೆ. ಸರ್ಕಾರ ನೀಡುವ ಇಂತಹ ಸೌಲಭ್ಯಗಳನ್ನು ಜನರು ಪಡೆದುಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ. ಕುಸುಮಾಧರ ಸಲಹೆ ಮಾಡಿದ್ದಾರೆ.

ಬಂದಾರು ಗ್ರಾ.ಪಂ ಮೊದಲ ಸ್ಥಾನ

ತಾಲ್ಲೂಕಿನ ಒಟ್ಟು 48 ಪಂಚಾಯಿತಿಗಳಲ್ಲಿ 20 ಪಂಚಾಯಿತಿಗಳು ಶೇ 100 ಕಾಮಗಾರಿ ಮಾಡಿವೆ. ಬಂದಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ 157 ಅತಿ ಹೆಚ್ಚು ಕೆಲಸಗಳು ಆಗಿದ್ದು, ತಾಲ್ಲೂಕಿನಲ್ಲಿ ಪ್ರಥಮ ಸ್ಥಾನ ಪಡೆದಿದೆ. ಇಲ್ಲಿ 16,989 ಮಾನವ ದಿನಗಳ ಗುರಿ ಹೊಂದಲಾಗಿತ್ತು. 25,108 ಮಾನವ ದಿನಗಳ ಕೆಲಸಗಳಾಗಿವೆ. ಇಲ್ಲಿ ₹69,13,000 ಕೂಲಿ ಸಂದಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT