ಬುಧವಾರ, ಫೆಬ್ರವರಿ 1, 2023
16 °C

ಕುದ್ಯಾಡಿ ಗರಡಿ: ಕಲಶಾಭಿಷೇಕಕ್ಕೆ ಚಪ್ಪರ ಮುಹೂರ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳ್ತಂಗಡಿ: ತಾಲ್ಲೂಕಿನ ಕುದ್ಯಾಡಿ ಗ್ರಾಮದ ಅಂಗಣಗುಡ್ಡೆ/ ಅಂಗಂದ ಮೇಲ್ ಬಳಿ ಕೊಡಮಣಿತ್ತಾಯ ದೈವಸ್ಥಾ‌ನ- ಬ್ರಹ್ಮಬೈದರ್ಕಳ ಗರಡಿಯು ಶಿಲಾಮಯ ಜೀರ್ಣೋದ್ಧಾರಗೊಂಡಿದ್ದು, ಜ.24ರಿಂದ 26ರವರೆಗೆ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಹಾಗೂ ವರ್ಷಾವಧಿ ನೇಮೋತ್ಸವ ನಡೆಯಲಿದ್ದು, ಈ ಪ್ರಯುಕ್ತ ಭಾನುವಾರ ಚಪ್ಪರ ಮುಹೂರ್ತ ನಡೆಯಿತು.

ಅಳದಂಗಡಿಯ ಸೋಮನಾಥೇಶ್ವರಿ ದೇವಸ್ಥಾನದ ಆಸ್ರಣ್ಣ ಪ್ರಕಾಶ್ ಭಟ್ ಅವರ ನೇತೃತ್ವದಲ್ಲಿ ಅಳದಂಗಡಿಯ ವೈದ್ಯ ಡಾ.ಎನ್.ಎಂ. ತುಳುಪುಳೆ ಚಪ್ಪರ ಮುಹೂರ್ತ ನೆರವೇರಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಧರಣೇಂದ್ರ ಕುಮಾರ್ ಮಾತನಾಡಿ, ‘ಶ್ರದ್ಧಾಕೇಂದ್ರಗಳ ಅಭಿವೃದ್ಧಿಯಿಂದ ಊರಿನ ಅಭಿವೃದ್ಧಿಯಾಗುತ್ತದೆ. ಇಲ್ಲಿನ ಗರಡಿಯು ತಾಲ್ಲೂಕಿನಲ್ಲಿಯೇ ಅತಿ ಎತ್ತರದ ಜಾಗದಲ್ಲಿ ಇರುವುದು ವಿಶೇಷ’ ಎಂದರು.

ಶ್ರೀಗುರುನಾರಾಯಣ ಸೇವಾ ಸಂಘ ಅಳದಂಗಡಿ ವಲಯದ ಅಧ್ಯಕ್ಷ ಸಂಜೀವ ಪೂಜಾರಿ ಕೊಡಂಗೆ ಮಾತನಾಡಿ, ‘ಹಿಂದೆ ಅರಸು ಮನೆತನದವರು ದೇವಸ್ಥಾನ-ದೈವಸ್ಥಾನ ಕಟ್ಟಿಸುತ್ತಿದ್ದರು. ಈಗ ಜನರಿಗೆ ಆ ಶಕ್ತಿ ಬಂದಿದೆ. ಕುದ್ಯಾಡಿಯ ಜನರು ಗರಡಿಯನ್ನು ಜೀರ್ಣೋದ್ಧಾರಗೊಳಿಸಿ ಶಿಲಾಮಯ ಗರಡಿಯನ್ನಾಗಿ ಮಾಡಿದ್ದಾರೆ’ ಎಂದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿಶ್ವನಾಥ ಪೂಜಾರಿ ಕುದ್ಯಾಡಿಗುತ್ತು, ‘ಕೊರಗಪ್ಪ ಪೂಜಾರಿ ಕೊಡಿಬಾಳೆ ಅವರಂಥ ಗ್ರಾಮದ ಹಿರಿಯರ ಮಾರ್ಗ ದರ್ಶನ, ಯುವಕರ ಶ್ರಮ, ಉಮೇದಿ ನಿಂದ ಗರಡಿಯು ನವೀಕರಣಗೊಂಡು ಎದ್ದು ನಿಂತಿದೆ’ ಎಂದರು.

ಡಾ.ಎನ್.ಎಂ. ತುಳುಪುಳೆ ಅವರು ಗರಡಿ ಜೀರ್ಣೋದ್ಧಾರಕ್ಕೆ ₹ 52,000 ಮೊತ್ತದ ದೇಣಿಗೆಯನ್ನು ಹಸ್ತಾಂತರಿಸಿದರು. ಕುದ್ಯಾಡಿ ಗರಡಿಯ ಜಾತ್ರೋತ್ಸವ ಸಮಿತಿಯ ಗೌರವಾಧ್ಯಕ್ಷ ಕೊರಗಪ್ಪ ಪೂಜಾರಿ ಕೊಡಿಬಾಳೆ ಅಧ್ಯಕ್ಷತೆ ವಹಿಸಿದ್ದರು.

ಜಾತ್ರೋತ್ಸವ ಸಮಿತಿ ಅಧ್ಯಕ್ಷ ಅನಂತರಾಜ ಜೈನ್ ಅಂತರಗುತ್ತು, ಕೊಡಮಣಿತ್ತಾಯ ದೈವದ ಭಂಡಾರದ ಮನೆಯ ಯಜಮಾನ ಶಶಿಕಾಂತ್ ಜೈನ್ ಮುಂಡಾಜೆಗುತ್ತು, ದೈವದ ಭಂಡಾರದ ಮನೆಯ ಯಜಮಾನ ಲಿಂಗಪ್ಪ ಬಂಗೇರ ಕೆಂಪನೊಟ್ಟುಗುತ್ತು, ಬೈದರ್ಕಳ ಭಂಡಾರದ ಮನೆಯ ಯಜಮಾನ ಅಚ್ಯುತ ಪೂಜಾರಿ ಕೊಡಿಬಾಳೆಗುತ್ತು, ಗ್ರಾಮದ ಗುರಿಕಾರ ವಾಸು ಪೂಜಾರಿ, ಸುಲ್ಕೇರಿ ಗ್ರಾಮ‌ ಪಂಚಾಯಿತಿ ಸದಸ್ಯ ಶುಭಕರ ಪೂಜಾರಿ, ಪದ್ಮಾಂಬ ಕೇಟರರ್ಸ್‌ನ ಸುಕೇಶ್ ಜೈನ್, ಜಾತ್ರೋತ್ಸವ ಸಮಿತಿ ಕಾರ್ಯದರ್ಶಿ ಸುಂದರ ಆಚಾರ್ಯ ಅಂತರೊತ್ತು, ಗುತ್ತು- ಬರ್ಕೆ ಮನೆಯವರು ಇದ್ದರು.

ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಸದಾನಂದ ಬಿ. ಬಾಕ್ಯರಡ್ಡ ಕಾರ್ಯಕ್ರಮ ನಿರ್ವಹಿಸಿದರು. ಜೊತೆ ಕಾರ್ಯದರ್ಶಿ ಸಜಿತ್ ಕುಮಾರ್ ಪಿಜತ್ಯರಡ್ಡ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.