ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹಪ್ರವೇಶಕ್ಕೆ ಸಜ್ಜಾದ 12 ಮನೆಗಳು

ಕೊಳಂಬೆ: ನೆರೆ ಸಂತ್ರಸ್ತರ ಮುಖದಲ್ಲಿ ಮಂದಹಾಸ
Last Updated 8 ಮೇ 2022, 3:04 IST
ಅಕ್ಷರ ಗಾತ್ರ

ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಚಾರ್ಮಾಡಿ ಗ್ರಾಮದ ಕೊಳಂಬೆ ಪರಿಸರ ದಲ್ಲಿ ನೆರೆ ಸಂತ್ರಸ್ತರಿಗಾಗಿ ಉಜಿರೆಯ ‘ಬದುಕು ಕಟ್ಟೋಣ’ ತಂಡದಿಂದ ದಾನಿಗಳ ನೆರವು, ಸ್ವಯಂಸೇವಕರ ಶ್ರಮದಾನದಿಂದ ನಿರ್ಮಿಸಲಾದ 12 ಮನೆಗಳ ಗೃಹಪ್ರವೇಶ ಸಮಾರಂಭ ಭಾನುವಾರ ನಡೆಯಲಿದೆ.

ಹೊಸ ಮನೆಗಳಿಗೆ ಲಹರಿ, ಪ್ರೇರಣಾ, ಓಂಕಾರ, ಚಂದನ, ಸಂಪಿಗೆ, ಕನಸು, ಇಂಚರ, ಐಶ್ವರ್ಯ, ಗೋಕುಲ, ನಕ್ಷತ್ರ, ಭ್ರಾಮರಿ ಮತ್ತು ಸಮೃದ್ಧಿ ಎಂದು ನಾಮಕರಣ ಮಾಡಲಾಗಿದೆ. ರಾಜಪ್ಪ ಪೂಜಾರಿ, ಕಮಲಾ, ಪ್ರೇಮಾ, ನಿಶಾಂತ್, ದಿನೇಶ್, ವೇದಾವತಿ, ಯಶೋದಾ, ಪೂವಪ್ಪ ಗೌಡ, ಸಂಜೀವ ಗೌಡ, ಕಲ್ಯಾಣಿ, ಗಣೇಶ ಗೌಡ ಮತ್ತು ಬೊಮ್ಮಕ್ಕ ಅವರು ನೂತನ ಮನೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ.

‘ಸರ್ಕಾರದಿಂದ ಪ್ರತಿ ಮನೆಗೆ ₹5 ಲಕ್ಷ ಅನುದಾನ, ಶಾಸಕರ ಶ್ರಮಿಕ ಕಾಳಜಿ ನಿಧಿಯಿಂದ ಪ್ರತಿ ಮನೆಗೆ ₹1 ಲಕ್ಷ ಹಾಗೂ ಫಲಾನುಭವಿಗಳು ಪ್ರತಿ ಮನೆಗೆ ₹2 ಲಕ್ಷ ನೀಡಿದ್ದಾರೆ. ಅನೇಕ ದಾನಿಗಳು ವಸ್ತು ರೂಪದಲ್ಲಿ ದಾನ ನೀಡಿದ್ದಾರೆ. ಪ್ರತಿ ಮನೆಗೆ ಒಟ್ಟು ₹13.50 ಲಕ್ಷ ವೆಚ್ಚ ಮಾಡಲಾಗಿದೆ’ ಎಂದು ಬದುಕು ಕಟ್ಟೋಣ ತಂಡದ ಸಂಚಾಲಕ ಉಜಿರೆಯ ಮೋಹನ ಕುಮಾರ್ ತಿಳಿಸಿದ್ದಾರೆ.

ಸ್ವಯಂಸೇವಕರ ಸೇವೆ, ಶ್ರಮದಾನ ಮತ್ತು ಸಹಕಾರವನ್ನು ಸ್ಮರಿಸುವ ತಂಡದ ನಾಯಕ ಉಜಿರೆಯ ಉದ್ಯಮಿ ರಾಜೇಶ್ ಪೈ, ಈ ಪುಣ್ಯದ ಕೆಲಸದಿಂದ ಎಲ್ಲರಿಗೂ ಮಾನಸಿಕ ಶಾಂತಿ, ನೆಮ್ಮದಿ ದೊರಕಿದೆ’ ಎನ್ನುತ್ತಾರೆ. ‘ಇನ್ನೂ ಒಂದು ವರ್ಷ ಸಂತ್ರಸ್ತರ ಜೊತೆಗಿದ್ದು ಸ್ವಾವಲಂಬಿ ಬದುಕಿಗೆ ಪ್ರೇರಣೆ, ಸಹಕಾರ ನೀಡಲಾ
ಗುವುದು’ ಎಂದು ಭರವಸೆ ನೀಡಿದ್ದಾರೆ.

2019ರಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕೊಳಂಬೆಯ ಈ ಸಂತ್ರಸ್ತರು, ಚಾರ್ಮಾಡಿ ದೇವಸ್ಥಾನದಲ್ಲಿ ತಾತ್ಕಾಲಿಕ ತಂಗಿದ್ದರು. ಇದೀಗ ಅವರಿಗೆ ಸ್ವಂತ ಸೂರು ದೊರೆಯುತ್ತಿದ್ದು, ಸಂಘಟನೆಯ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಹೆಗ್ಗಡೆ ಅಭಿನಂದನೆ: 2019ರಲ್ಲಿ ಕೊಳಂಬೆಯಲ್ಲಿ ನೆರೆ ಬಂದಾಗ ಚಾರ್ಮಾಡಿ ದೇವಸ್ಥಾನದಲ್ಲಿ ತಾತ್ಕಾಲಿಕ ತಂಗಿದ ಸಂತ್ರಸ್ತರನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಅಭಯದಾನದೊಂದಿಗೆ ಭೇಟಿಯಾಗಿದ್ದರು. ಆರ್ಥಿಕ ನೆರವು, ಶ್ರಮದಾನ ಮೂಲಕ ಈ ಪುಣ್ಯಕಾರ್ಯದಲ್ಲಿ ಭಾಗವಹಿಸಿದ ಎಲ್ಲರನ್ನೂ ಅವರು ಅಭಿನಂದಿಸಿದ್ದಾರೆ.

ಇಂದು ಮನೆಗಳ ಗೃಹಪ್ರವೇಶ

ಶನಿವಾರ ರಾತ್ರಿ ಎಲ್ಲ ಹೊಸ ಮನೆಗಳಲ್ಲಿ ವಾಸ್ತು ಹೋಮ ಹಾಗೂ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಗಿದೆ. ಭಾನುವಾರ ಬೆಳಿಗ್ಗೆ ಸತ್ಯನಾರಾಯಣ ಪೂಜೆ ಬಳಿಕ ಗೃಹ ಪ್ರವೇಶ ನಡೆಯುತ್ತದೆ.

ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮನೆಗಳನ್ನು ಉದ್ಘಾಟಿಸುವರು. ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌, ಬೆಳ್ತಂಗಡಿ ರೋಟರಿ ಕ್ಲಬ್‌ ಅಧ್ಯಕ್ಷ ಶರತ್‌ಕೃಷ್ಣ ಪಡುವೆಟ್ನಾಯ, ಆರ್‌ಎಸ್‌ಎಸ್‌ನ ದಕ್ಷಿಣ ಪ್ರಾಂತ ಸೇವಾ ಪ್ರಮುಖ್‌ ಸುಬ್ರಾಯ ನಂದೊಡಿ, ಉದ್ಯಮಿ ಶಶಿಧರ ಶೆಟ್ಟಿ, ಚಿತ್ರನಟ ಅರವಿಂದ ಬೋಳಾರ್‌ ಭಾಗವಹಿಸುವರು ಎಂದು ಸಂಘಟಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT