ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜಮುಖಿ ಚಿಂತಕ ಜಯ ಸಿ. ಸುವರ್ಣ

Last Updated 22 ಅಕ್ಟೋಬರ್ 2020, 3:28 IST
ಅಕ್ಷರ ಗಾತ್ರ

‘ಪ್ರತಿಭೆ ಹುಟ್ಟುವುದು ಗುಡಿಸಲಿನಲ್ಲಿ, ಅರಳುವುದು ಅರಮನೆಯಲ್ಲಿ’ ಎಂಬಂತೆ ತುಳುನಾಡಿನ ಯಾವುದೋ ಮೂಲೆಯಲ್ಲಿ ಹುಟ್ಟಿದ ಅದೆಷ್ಟೋ ಪ್ರತಿಭೆಗಳು ದೇಶ– ವಿದೇಶಗಳ ನಗರದಲ್ಲಿ ಅರಳಿಕೊಂಡು ಹುಟ್ಟಿದ ನೆಲಕ್ಕೆ ನೆರಳು ಕೊಟ್ಟಿವೆ. ಅಂತಹ ತುಳುನೆಲದ ಒಂದು ಅಪೂರ್ವ ಪ್ರತಿಭೆ, ಜನಸೇವಕ, ಶಿಕ್ಷಣಪ್ರೇಮಿ, ಹೋಟೆಲ್‌ ಉದ್ಯಮಿ, ಬ್ಯಾಂಕಿಂಗ್‌ ಕ್ಷೇತ್ರದ ಮುತ್ಸದ್ದಿ, ಸರ್ವ ಧರ್ಮದ ಜನರ ಅಭಿಮಾನದ ‘ಜಯಣ್ಣ’ (ಜಯ ಶೇಠ್‌) ನಿನ್ನೆಯ ದಿನ ಉಸಿರು ಬಿಟ್ಟು, ಹೆಸರು ಇಟ್ಟು ನಮ್ಮನ್ನು ಅಗಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಹಾರಾಷ್ಟ್ರದ ಮಣ್ಣಿನ ಕೊಂಡಿಯಾಗಿದ್ದ ಜಯ ಸಿ. ಸುವರ್ಣ ಅವರು ಕಾಪು ತಾಲ್ಲೂಕಿನ ನಂದಿಕೂರು ಸಮೀಪದ ಅಡ್ವೆ ಗ್ರಾಮದ ಬಿಲ್ಲವ ಮನೆತನಕ್ಕೆ ಸೇರಿದ ಚಂದು ಪೂಜಾರಿ ಮತ್ತು ಅಚ್ಚು ಪೂಜಾರ್ತಿ ದಂಪತಿಗೆ ಮಗನಾಗಿ 1946 ಮೇ 15ರಂದು ಜನಿಸಿದರು. ಗದ್ದೆ, ಬಯಲು ಕೃಷಿ ಭೂಮಿಯ ಮಧ್ಯೆ ಮಣ್ಣು ಗೊಬ್ಬರದ ಬಣ್ಣದೊಂದಿಗೆ ಬೆಳೆದು, ಪಕ್ಕದ ಪಲಿಮಾರಿನ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, 14ನೇ ವಯಸ್ಸಿನಲ್ಲಿ ಅಂದರೆ 1960ರ ಜುಲೈ 20ರಂದು ಮುಂಬೈ ಮಹಾನಗರಿಗೆ ಪಯಣ ಬೆಳೆಸಿದರು.

ತನ್ನ ಮಾವಂದಿರನ್ನು ಹಿಂಬಾಲಿಸುತ್ತಾ ಮುಂಬೈ ಸೇರಿದ ಜಯ ಸುವರ್ಣರು, ಹಸಿವಿನ ಬೆಲೆ ಅರಿತವರು. ಸಣ್ಣ–ಪುಟ್ಟ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಾ ರಾತ್ರಿ ಕಾಲೇಜಿನಲ್ಲಿ ಓದುತ್ತಾ ಅಂಧೇರಿಯ ಚಿನ್ಮಯ ಕಾಲೇಜಿನಲ್ಲಿ ಪದವಿ ಮುಗಿಸಿದರು.

ಬ್ರಹ್ಮಶ್ರೀ ಗುರುನಾರಾಯಣ ಗುರುಗಳ ತತ್ವ, ಚಿಂತನೆ, ತನ್ನ ಬಾವ ರುಕ್ಕ ಶೇಠ್‌ ಅವರ ಮಾರ್ಗದರ್ಶನ, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರ ಬೆಂಬಲ ಜಯ ಸುವರ್ಣರನ್ನು ಇಷ್ಟು ಎತ್ತರಕ್ಕೆ ಬೆಳೆಸಿತು. ಮುಂಬೈನ ಗೋರೆಗಾಂ ನಗರದಲ್ಲಿ ಅವರು ಆರಂಭಿಸಿದ ‘ಜಯಪ್ರಕಾಶ್’ ಎಂಬ ಸಣ್ಣ ಹೋಟೆಲ್‌ ಇಂದು ಅವರ ಪ್ರಾಮಾಣಿಕ ದುಡಿಮೆ, ಶಿಸ್ತುಬದ್ಧ ವ್ಯವಹಾರ, ನಂಬಿಕೆ, ಗ್ರಾಹಕರ ಪ್ರೀತಿ ಮತ್ತು ಹಿರಿಯರ ಆಶೀರ್ವಾದದ ಮೂಲಕ ಹೋಟೆಲ್‌ ಉದ್ಯಮದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಕಾರಣವಾಯಿತು.

ಮುಂಬೈನ ಬಿಲ್ಲವರ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಅವರಿಗೆ ಸಲ್ಲುತ್ತದೆ. ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಮೂಲ್ಕಿ ಇದರ ಸ್ಥಾಪಕಾಧ್ಯಕ್ಷರು, ಗೌರವಾಧ್ಯಕ್ಷರು, ಬಿಲ್ಲವ ಸಮಾಜದ ಭೀಷ್ಮ ಎನಿಸಿಕೊಂಡ 74ರ ಹರೆಯದ ಜಯ ಸಿ. ಸುವರ್ಣ ಇನ್ನು ನೆನಪು ಮಾತ್ರ. ಅವರು ಪತ್ನಿ ಲೀಲಾವತಿ ಜಯ ಸುವರ್ಣ, ಮಕ್ಕಳಾದ ಸೂರ್ಯಕಾಂತ್ ಜೆ. ಸುವರ್ಣ, ಸುಭಾಷ್‌ ಜೆ. ಸುವರ್ಣ, ಯೋಗೇಶ್‌ ಜೆ. ಸುವರ್ಣ ಮತ್ತು ದಿನೇಶ್‌ ಜೆ. ಸುವರ್ಣ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಭಾರತ್‌ ಬ್ಯಾಂಕಿನ ಅಭಿವೃದ್ಧಿಯ ರೂವಾರಿ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ವೈಭವದ ಕಣ್ಮಣಿ, ಕಟಪಾಡಿ ವಿಶ್ವನಾಥ ಕ್ಷೇತ್ರದ ಏಳಿಗೆಯ ನೇತಾರ, ತುಳುನಾಡಿನ ಅವಳಿ ವೀರರಾದ ಕೋಟಿ– ಚನ್ನಯ್ಯರ ಮೂಲಕ್ಷೇತ್ರ ಗೆಜ್ಜೆಗಿರಿ ನಂದನದ ಪುನರುತ್ಥಾನದ ಗುರಿಕಾರ, ಮುಂಬೈ ಬಿಲ್ಲವ ಭವನ ಮತ್ತು ಬಿಲ್ಲವ ಮಹಾಮಂಡಲ ಮೂಲ್ಕಿಯ ಹರಿಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜಸೇವಕ, ಸರ್ವ ಜಾತಿ, ಧರ್ಮಗಳ ಜನರ ಪ್ರೀತಿಯ ಸರದಾರ ಜಯ ಸಿ. ಸುವರ್ಣರಿಗೆ ಅಭಿಮಾನದ ನುಡಿನಮನಗಳು.

(ಲೇಖಕರು: ಮಂಗಳೂರು ಸಂತ ಅಲೋಶಿಯಸ್‌ ಪದವಿಪೂರ್ವ ಕಾಲೇಜಿನ ಕನ್ನಡ ಪ್ರಾಧ್ಯಾಪಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT