ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಕೊಳವೆಬಾವಿಗೆ ಮಾರಕವಾಗುತ್ತಿದೆ ಕಬ್ಬಿಣದ ಅಂಶ

Published 21 ಡಿಸೆಂಬರ್ 2023, 7:05 IST
Last Updated 21 ಡಿಸೆಂಬರ್ 2023, 7:05 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೊಳವೆಬಾವಿಗಳಿಗೆ ಅಳವಡಿಸುವ ಕೇಸಿಂಗ್‌ ಕೊಳವೆಗಳು ಇಲ್ಲಿನ ಮಣ್ಣಿನಲ್ಲಿ ಕಬ್ಬಿಣಾಂಶ ಜಾಸ್ತಿ ಇರುವ ಕಾರಣಕ್ಕೆ ಬೇಗನೇ ತುಕ್ಕು ಹಿಡಿದು ಹದಗೆಡುತ್ತಿವೆ. ಇದು ನೀರು ಕಲುಷಿತಗೊಳ್ಳುವುದಕ್ಕೂ ಕಾರಣವಾಗುತ್ತಿವೆ ಎಂಬುದು ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆ ನಡೆಸಿದ ಅಧ್ಯಯನದಲ್ಲಿ ಗೊತ್ತಾಗಿದೆ.

‘ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದಾಗ ದಕ್ಷಿಣ ಕನ್ನಡವೂ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಕೊಳವೆಬಾವಿಗಳು ಬೇಗನೇ ವಿಫಲವಾಗುತ್ತಿದ್ದವು. ಇದಕ್ಕೆ ಕಾರಣ ತಿಳಿದುಕೊಳ್ಳುವ ಸಲುವಾಗಿ ಕೊಳವೆಬಾವಿಗಳ ನೀರಿನ ಗುಣಮಟ್ಟವನ್ನು ಅಧ್ಯಯನಕ್ಕೆ ಒಳಪಡಿಸಿದೆವು. ಆಗ ಇಲ್ಲಿನ ಮಣ್ಣಿನಲ್ಲಿ ಕಬ್ಬಿಣದ ಅಂಶ ಜಾಸ್ತಿ ಇರುವ ಕಡೆ ಕೇಸಿಂಗ್‌ ಪೈಪ್‌ಗಳು ಬೇಗನೇ ತುಕ್ಕು ಹಿಡಿಯುತ್ತಿರುವುದು ಗೊತ್ತಾಯಿತು’ ಎಂದು ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ರಘುನಾಥ್‌ ’ಪ್ರಜಾವಾಣಿ‘ಗೆ ತಿಳಿಸಿದರು.

‘ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ವಿವಿಧ ನೀರಿನ ಮೂಲಗಳನ್ನು ತಪಾಸಣೆಗೆ ಒಳಪಡಿಸಿದಾಗ ಮುಂಗಾರು ಪೂರ್ವ ಅವಧಿಯಲ್ಲಿ ಒಟ್ಟು 138 ಮೂಲಗಳಲ್ಲಿ ನೀರು ಕಲುಷಿತಗೊಂಡಿರುವುದು (ಕೆಲವು ತೆರೆದ ಬಾವಿಗಳ ನೀರೂ ಸೇರಿದೆ) ಗೊತ್ತಾಗಿತ್ತು. ಇವುಗಳಲ್ಲಿ 109 ಕಡೆ ರಾಡಿ ಸಮಸ್ಯೆ, 58 ಕಡೆ ನೀರಿನಲ್ಲಿ ಕಬ್ಬಿಣಾಂಶ ಹಾಗೂ 27 ಕಡೆ ನೀರಿನ ಪಿಎಚ್‌ ಮೌಲ್ಯ  ವ್ಯತ್ಯಯವಾಗಿರುವುದು ಪತ್ತೆಯಾಗಿತ್ತು. ಮುಂಗಾರು ನಂತರ ಅವಧಿಯಲ್ಲಿ ಒಟ್ಟು 159 ನೀರಿನ ಮೂಲಗಳಲ್ಲಿ ನೀರು ಕಲುಷಿತವಾಗಿರುವುದು ಪತ್ತೆಯಾಗಿತ್ತು. ಅದರಲ್ಲಿ 105 ಕಡೆ ರಾಡಿ ಸಮಸ್ಯೆ, 79 ಕಡೆ ಕಬ್ಬಿಣದ ಅಂಶ ಜಾಸ್ತಿ ಇರುವುದು ಹಾಗೂ 31 ಕಡೆ ಪಿಎಚ್‌ ಮೌಲ್ಯ ವ್ಯತ್ಯಯ ಇರುವುದು ತಿಳಿದುಬಂದಿತ್ತು.’

‘ಸಾಮಾನ್ಯವಾಗಿ ಎಂ.ಎಸ್‌ ಕೊಳವೆಗಳನ್ನು ಕೇಸಿಂಗ್‌ ಕೊಳವೆಗಳನ್ನಾಗಿ ಬಳಸುತ್ತೇವೆ. ಅವು ಕಬ್ಬಿಣದ ಜೊತೆ ರಾಸಯನಿಕ ಪ್ರಕ್ರಿಯೆಗೆ ಒಳಪಡುವುದರಿಂದ ತುಕ್ಕು ಹಿಡಿದು ಬೇಗನೇ ಹದಗೆಡುತ್ತವೆ. ಹಾಗಾಗಿ ಮಣ್ಣಿನಲ್ಲಿ ಕಬ್ಬಿಣದ ಅಂಶ ಹೆಚ್ಚು ಇರುವಲ್ಲೆಲ್ಲ ಕೇಸಿಂಗ್‌ ಕೊಳವೆ ಹದಗೆಡುವ ಸಾಧ್ಯತೆ ಜಾಸ್ತಿ’ ಎಂದು ವಿವರಿಸುತ್ತಾರೆ ರಘುನಾಥ್‌.

ಕೊಳವೆಬಾವಿ  ಬೇಗನೇ ಹಾಳಾಗುವುದನ್ನು ತಡೆಯಲು ಮೈಲ್ಡ್‌ ಸ್ಟೀಲ್‌ (ಎಂಎಸ್‌) ಕೊಳವೆಗಳ ಬದಲು ಸತುವನ್ನು ಸವರಿದ ಕಬ್ಬಿಣದ ಕೊಳವೆಗಳನ್ನು (ಜಿ.ಐ ಪೈಪ್‌) ಕೇಸಿಂಗ್‌ ಪೈಪ್‌ಗಳನ್ನಾಗಿ ಅಳವಡಿಸಬಹುದು ಎಂದು ಅಧ್ಯಯನದ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

‘ಎಂ.ಎಸ್‌. ಪೈಪ್‌ಗಳಷ್ಟು ಬೇಗ ಜಿ.ಐ ಪೈಪ್‌ಗಳು ತುಕ್ಕು ಹಿಡಿಯುವುದಿಲ್ಲ. ಜಿ.ಐ ಪೈಪ್‌ಗಳು ಕಡಿಮೆ ಎಂದರೂ 15ರಿಂದ 20 ವರ್ಷ ಬಾಳಿಕೆ ಬರುತ್ತವೆ. ಆದರೆ, ಜಿ.ಐ ಪೈಪ್‌ಗೆ ದರ ಜಾಸ್ತಿ.  ನೀರಿನಲ್ಲಿ ಕಬ್ಬಿಣಾಂಶ ಹೆಚ್ಚು ಇರುವ ಕಡೆ ಎಂ.ಎಸ್‌ ಕೊಳವೆ ಅಳವಡಿಸಿದ ಕೊಳವೆಬಾವಿ ನಾಲ್ಕೈದು ವರ್ಷಗಳಲ್ಲೇ ನಿರುಪಯುಕ್ತವಾಗುತ್ತಿದೆ. ಕರಾವಳಿಯಲ್ಲಿ ಸರಾಸರಿ ಸುಮಾರು  400 ಮೀ ಆಳದಲ್ಲೇ ನೀರು ಸಿಗುವುದರಿಂದ ಕೊಳವೆಬಾವಿಗಳಿಗೆ ಜಿ.ಐ ಕೊಳವೆ ಅಳವಡಿಸಿದರೆ ಅವುಗಳ ನಿರ್ಮಾಣ ವೆಚ್ಚ ಸುಮಾರು ₹ 25 ಸಾವಿರದಷ್ಟು ಹೆಚ್ಚಾಗುತ್ತದೆ. ಆದರೆ  ಬೋರ್‌ವೆಲ್‌ ಹೆಚ್ಚು ಕಾಲ ಬಾಳಿಕೆ ಬರುತ್ತದೆ’ ಎಂದು ಅವರು ವಿವರಿಸಿದರು.

‘ಈ ಬಗ್ಗೆ ಈಚೆಗೆ ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ಅವರು ಒಪ್ಪಿಗೆ ನೀಡಿದ್ದೇ ಆದರೆ, ಜಿಲ್ಲೆಯ ಬೋರ್‌ವೆಲ್‌ಗಳಿಗೆ ಎಂ.ಎಸ್‌ ಕೊಳವೆಗಳ ಬದಲು ಜಿ.ಐ ಕೊಳವೆ ಬಳಕೆಗೆ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT