ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಸಿಟಿವಿಟಿ ಕಡಿಮೆ ಮಾಡಲು ಕ್ರಮ ಕೈಗೊಳ್ಳಿ ಸಚಿವ ಎಸ್. ಅಂಗಾರ

ಗ್ರಾಮ ಪಂಚಾಯಿತಿ, ನಗರಗಳಲ್ಲಿ ಕೋವಿಡ್‌–19 ತಪಾಸಣೆ ತೀವ್ರಗೊಳಿಸಿ:
Last Updated 7 ಆಗಸ್ಟ್ 2021, 3:01 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್–19 ಪಾಸಿಟಿವಿಟಿ ದರ ಕಡಿಮೆ ಮಾಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಚಿವ ಎಸ್. ಅಂಗಾರ, ಅಧಿಕಾರಿಗಳಿಗೆ ತಾಕೀತು ಮಾಡಿದರು.

ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್ ಹಾಗೂ ನೆರೆ ಹಾವಳಿ ಪರಿಹಾರ ಕಾರ್ಯಗಳ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್ ಹಾಗೂ ಅದರ ಪಾಸಿಟಿವಿಟಿಯನ್ನು ಕಡಿಮೆ ಮಾಡಲು ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿಯೂ ತಪಾಸಣಾ ಗುರಿಗಳನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕು. ಅದಕ್ಕಾಗಿ ನಿಗದಿಪಡಿಸಿಕೊಂಡ ಗುರಿಯನ್ನಷ್ಟೇ ದೃಷ್ಟಿಯಲ್ಲಿ ಇಟ್ಟುಕೊಳ್ಳಬಾರದು. ಎಲ್ಲ ತಾಲ್ಲೂಕುಗಳಲ್ಲಿ ವೈದ್ಯರು, ಪ್ರಯೋಗಾಲಯ ತಂತ್ರಜ್ಞರು ಹಾಗೂ ಎಎನ್‍ಎಂಗಳು ಇಲ್ಲ ಎನ್ನಬಾರದು. ಅಗತ್ಯವಿದ್ದಲ್ಲಿ ಕೂಡಲೇ ನೇಮಕಾತಿ ಆಗಬೇಕು. ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಗತ್ಯ ತಪಾಸಣಾ ಕಾರ್ಯ ಕೈಗೊಳ್ಳಬೇಕು ಎಂದು ಹೇಳಿದರು.

ತಪಾಸಣೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಮೊದಲು ಗಮನ ಹರಿಸಿ. ಅಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಿದ ಅವರು, ಕೋವಿಡ್ ಸೋಂಕು ಪತ್ತೆ ಹಚ್ಚಲು ಎಲ್ಲ ತಾಲ್ಲೂಕುಗಳಲ್ಲಿಯೂ ನಿರಂತರವಾಗಿ ತಪಾಸಣೆ ಕೈಗೊಳ್ಳಬೇಕು. ಕೋವಿಡ್ ದೃಢಪಟ್ಟವರನ್ನು ಕಡ್ಡಾಯವಾಗಿ ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸಬೇಕು ಎಂದು ಸೂಚನೆ ನೀಡಿದರು.

ಕೋವಿಡ್ ಹರಡದಂತೆ ಕ್ರಮ ಕೈಗೊಳ್ಳಬೇಕು. ಸೂಕ್ತ ರಕ್ಷಣೆ ಒದಗಿಸಬೇಕು. ಚಿಕಿತ್ಸೆ ನೀಡುವುದು ರಾಜ್ಯ ಸರ್ಕಾರದ ಮೂಲ ಉದ್ದೇಶ ಎಂದ ಅಂಗಾರ, ಕೋವಿಡ್ ಸೋಂಕಿನ ಅವಧಿಯಲ್ಲಿ ಅಧಿಕಾರಿಗಳು ವಿಳಂಬಕ್ಕೆ ಆಸ್ಪದ ನೀಡಬಾರದು. ಪ್ರಯೋಗಾಲಯ ತಂತ್ರಜ್ಞರ ವೇತನದಲ್ಲಿ ವಿಳಂಬ ಆಗಬಾರದು ಎಂದು ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಮೇಯರ್ ಪ್ರೇಮಾನಂದ ಶೆಟ್ಟಿ, ಶಾಸಕರಾದ ಡಾ. ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ಯು.ಟಿ. ಖಾದರ್, ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಅಧಿಕಾರಿಗಳು ಸಭೆಯಲ್ಲಿದ್ದರು.

ರಸ್ತೆಗಳ ಗುಂಡಿಗಳನ್ನು ಶೀಘ್ರ ಮುಚ್ಚಿ

ಮಳೆಗಾಲದಲ್ಲಿ ಹಾನಿಗೊಳಗಾದ ರಸ್ತೆಗಳ ಗುಂಡಿಗಳನ್ನು ಶೀಘ್ರದಲ್ಲೇ ಮುಚ್ಚಬೇಕು. ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದ ಮನೆ ಕಳೆದುಕೊಂಡ ಕುಟುಂಬಗಳಿಗೆ ಸರ್ಕಾರ ಘೋಷಿಸಿರುವ ₹10ಸಾವಿರ ಪರಿಹಾರ ಮೊತ್ತವನ್ನು ಶೀಘ್ರವಾಗಿ ನೀಡಬೇಕು ಎಂದು ಸಚಿವ ಎಸ್. ಅಂಗಾರ ಸೂಚಿಸಿದರು.

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ನೆರೆಯಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ತೊಂದರೆಯಾಗಿಲ್ಲ. ಏಪ್ರಿಲ್ 1 ರಿಂದ ಆಗಸ್ಟ್ 8 ರವರೆಗೆ ಒಟ್ಟು 86 ಮನೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, 490 ಮನೆಗಳು ಭಾಗಶಃ ಹನಿಯಾಗಿವೆ, ನೆರೆಯಿಂದಾಗಿ ಕೃಷಿ ವಲಯಗಳಿಗೆ ಹಾಗೂ ಪ್ರಾಣಿಗಳಿಗೆ ಯಾವುದೇ ಹಾನಿ ಉಂಟಾಗಿಲ್ಲ, ವಿದ್ಯುತ್ ಅವಘಡಗಳು ಸಂಭವಿಸಿಲ್ಲ ಎಂದರು.

ಮಳೆಯಿಂದಾಗಿ ಹಾಳಾಗಿರುವ ರಸ್ತೆಯ ಕಾಮಗಾರಿಗಳ ಕುರಿತು ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳುವಂತೆ ಅಂಗಾರ ತಿಳಿಸಿದರು.

ದ.ಕ: ರೂಪಾಂತರಿತ ‘ಇಟಾ’ ತಳಿ ಪತ್ತೆ

ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೊರೊನಾ ರೂಪಾಂತರಿ ವೈರಸ್‌ ‘ಇಟಾ’ ಪತ್ತೆಯಾಗಿದೆ.

ನಾಲ್ಕು ತಿಂಗಳ ಹಿಂದೆ ಕತಾರ್‌ನಿಂದ ಬಂದಿದ್ದ ವ್ಯಕ್ತಿಯಲ್ಲಿ ಈ ಸೋಂಕು ಪತ್ತೆಯಾಗಿದ್ದು, ನಂತರ ಅವರು ಗುಣಮುಖರಾಗಿ ಕತಾರ್‌ಗೆ ಮರಳಿದ್ದಾರೆ. ಜನತೆ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಕತಾರ್‌ನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ವ್ಯಕ್ತಿಯನ್ನು ತಪಾಸಣೆಗೆ ಒಳಪಡಿಸಿದಾಗ ಕೋವಿಡ್–19 ದೃಢಪಟ್ಟಿತ್ತು. ನಂತರ ಹೆಚ್ಚಿನ ಪರೀಕ್ಷೆಗಾಗಿ ಅವರ ಗಂಟಲು ದ್ರವ ಮಾದರಿಯನ್ನು 'ಜಿನೋಮಿಕ್ ಸ್ಟಡಿ'ಗೆ ಕಳುಹಿಸಿಕೊಡಲಾಗಿತ್ತು. ಇದೀಗ ಅದರ ವರದಿ ಬಂದಿದ್ದು, ರೂಪಾಂತರಿ ಇಟಾ ವೈರಸ್ ಇದ್ದುದು ದೃಢಪಟ್ಟಿದೆ.

ವ್ಯಕ್ತಿಯ ಸಂಪರ್ಕದಲ್ಲಿದ್ದ 150 ಮಂದಿಯನ್ನು ನಾಲ್ಕು ತಿಂಗಳ ಹಿಂದೆಯೇ ಪರೀಕ್ಷೆಗೆ ಒಳಪಡಿಸಿದ್ದು, ಎಲ್ಲರಿಗೂ ನೆಗೆಟಿವ್ ವರದಿ ಬಂದಿದೆ. ಅವರೆಲ್ಲರೂ ಈಗಲೂ ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ.

ಕೋಟ್‌:

ಕಡಲ್ಕೊರೆತದ ಭೀತಿ ಇರುವ ಮನೆಗಳನ್ನು ಬೇರೆಡೆಗೆ ಸ್ಥಳಾಂತರಿಸಿ, ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಾಣ ಮಾಡಿಕೊಡುವ ಕೆಲಸ ಆಗಬೇಕು.

ಎಸ್‌. ಅಂಗಾರ, ಸಚಿವ

ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್ ಕುಟುಂಬದವರಿಗೆ ₹1 ಲಕ್ಷ ಪರಿಹಾರ ನೀಡುವ ಬಗ್ಗೆ ರಾಜ್ಯ ಸರ್ಕಾರದಿಂದ ಸುತ್ತೋಲೆ ಬಂದಿದ್ದು, ಪಟ್ಟಿ ತಯಾರಿಸಬೇಕು.
ಡಾ. ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ

ವಾರಾಂತ್ಯದಲ್ಲಿ 50 ಜನರೊಂದಿಗೆ ಮದುವೆ ನಡೆಸಲು ಅನುಮತಿ

ಕುಕ್ಕೆ, ಕಟೀಲು, ಧರ್ಮಸ್ಥಳ ದೇವಸ್ಥಾನಗಳಿಗೆ ಭಕ್ತರ ಪ್ರವೇಶ ನಿರ್ಬಂಧ

16ರವರೆಗೆ ಕಾಸರಗೋಡು–ಮಂಗಳೂರು ಬಸ್‌ ಸಂಚಾರ ಸ್ಥಗಿತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT