ಬುಧವಾರ, ನವೆಂಬರ್ 25, 2020
19 °C

ಲವ್ ಜಿಹಾದ್ ಹೆಸರಿನಲ್ಲಿ ಮತಾಂತರ ತಡೆಗೆ‌ ರಾಜ್ಯದಲ್ಲಿ ಬಿಗಿ ಕ್ರಮ: ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಲವ್‌ ಜಿಹಾದ್ ಹೆಸರಿನಲ್ಲಿ ಮತಾಂತರ ಮಾಡಲಾಗುತ್ತಿದ್ದು, ರಾಜ್ಯದಲ್ಲಿ‌ ಇದಕ್ಕೆ ಕಡಿವಾಣ ಹಾಕಲಾಗುತ್ತದೆ.‌ ಯಾರು ಮಾಡುತ್ತಾರೊ, ಬಿಡುತ್ತಾರೊ ಗೊತ್ತಿಲ್ಲ.‌ ಸಮಗ್ರವಾಗಿ ‌ಚರ್ಚಿಸಿ ರಾಜ್ಯದಲ್ಲಿ ಇದಕ್ಕೆ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ನಗರದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಉದ್ಘಾಟಿಸಿ‌ ಅವರು ಮಾತನಾಡಿದರು.

ಶಿರಾ, ಮತ್ತು ಆರ್.ಆರ್. ನಗರದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ‌. ಇದರಿಂದಾಗಿಯೇ ಕಾಂಗ್ರೆಸ್‌ನಾಯಕರು ಇಲ್ಲಸಲ್ಲದ‌ ಹೇಳಿಕೆ ‌ನೀಡುತ್ತಿದ್ದಾರೆ. ಚುನಾವಣಾ ಫಲಿತಾಂಶ ಕಾಂಗ್ರೆಸ್ಸಿಗರಿಗೆ ಉತ್ತರ ಸಿಗಲಿದೆ.

ಆರ್.ಆರ್. ನಗರದಲ್ಲಿ 40 ಸಾವಿರ, ಶಿರಾದಲ್ಲಿ‌ 20 ಸಾವಿರ‌ ಮತಗಳ ಅಂತರದಿಂದ‌ ಬಿಜೆಪಿ ಜಯಗಳಿಸಲಿದೆ. ವಿಧಾನಪರಿಷತ್‌ ಚುನಾವಣೆಯಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದರು.

2018 ರ‌ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ ಗೆದ್ದಿತ್ತು.‌ ಕಾಂಗ್ರೆಸ್- ಜೆಡಿಎಸ್ ಮೈತ್ರಿ‌ ಸರ್ಕಾರ ರಚನೆಯಾಗಿತ್ತು. ಆದರೆ, ಆಡಳಿತ ಪಕ್ಷದ 18 ಶಾಸಕರು ರಾಜೀನಾಮೆ ನೀಡಿ, ಬಿಜೆಪಿ‌ ಸೇರಿದರು. 18 ಜನರ ಸಹಕಾರದಿಂದ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ‌ಸಾಧ್ಯವಾಯಿತು. ಬಹುಶಃ ದೇಶದಲ್ಲಿ‌ ಆಡಳಿತ ಪಕ್ಷದ‌ ಇಷ್ಟೊಂದು ಶಾಸಕರು ರಾಜೀನಾಮೆ‌ ನೀಡಿರುವುದು ಇದೇ ಮೊದಲು ಎಂದು ಹೇಳಿದರು.

ಡ್ರಗ್ಸ್ ಮಾಫಿಯಾಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕಠಿಣ ಕ್ರಮ‌ ಕೈಗೊಂಡಿದೆ. ಡ್ರಗ್ಸ್ ಮುಕ್ತ‌ ರಾಜ್ಯ ಮಾಡುವ‌ ಮೂಲಕ ವಿದ್ಯಾರ್ಥಿಗಳು, ಯುವಜನರು ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸಲಾಗುವುದು ಎಂದರು.

ಕೋವಿಡ್ ನಿಂದ ಆರ್ಥಿಕತೆ ಹದಗೆಟ್ಟಿತ್ತು. ಇದೀಗ ಚೇತರಿಸುತ್ತಿದೆ.‌ ಈಗಾಗಲೇ ಶಾಸಕರ‌ ಅಭಿವೃದ್ಧಿ ನಿಧೊಗೆ ₹50 ಲಕ್ಷ‌ ಬಿಡುಗಡೆ ಮಾಡಲಾಗಿದೆ. ಮಹಾತ್ಮಾ ಗಾಂಧಿ ನಗರ ‌ವಿಕಾಸ ಯೋಜನೆಯಡಿ ಮಂಗಳೂರು‌ ಸೇರಿದಂತೆ ರಾಜ್ಯದ 10 ನಗರಗಳಿಗೆ ತಲಾ ₹50 ಕೋಟಿ‌ ಮಂಜೂರು ಮಾಡಲಾಗಿದೆ. ಈ ಯೋಜನೆಯಡಿ‌ ಪ್ರತಿ ನಗರದ ಅಭಿವೃದ್ಧಿಗೆ ₹125 ಕೋಟಿ ಬಳಸಲು ಅವಕಾಶವಿದೆ ಎಂದು ತಿಳಿಸಿದರು.

ಯಾವುದೇ ಚುನಾವಣೆಯನ್ನು ಕಾರ್ಯಕರ್ತರು ಹಗುರವಾಗಿ ಪರಿಗಣಿಸಬಾರದು.‌ ಗ್ರಾಮ ಪಂಚಾಯಿತಿಯಿಂದ ಲೋಕಸಭೆಯವರೆಗೆ ಎಲ್ಲೆಡೆಯೂ ಪಕ್ಷ‌ ಅಧಿಕಾರಕ್ಕೆ ಬರಬೇಕು. ಅಧಿಕಾರದ ಮೂಲಕ ಜನರ‌ ಕಲ್ಯಾಣ ಮಾಡುವುದಕ್ಕಾಗಿ ಪಕ್ಷದ‌ ಸಂಘಟನೆ ಮಾಡಬೇಕು ಎಂದು ಸಲಹೆ‌ ನೀಡಿದರು.

ಪಕ್ಷ‌ ಸಂಘಟನೆಗೆ‌ ದಕ್ಷಿಣ ಕನ್ನಡ ರಾಜ್ಯಕ್ಕೆ‌ ಮಾದರಿ. ಇದೇ‌ ಮಾದರಿಯಲ್ಲಿ ಪಕ್ಷ‌ ಸಂಘಟಿಸುವ‌ ಮೂಲಕ ಮುಂಬರುವ ‌ವಿಧಾನಸಭೆ ಚುನಾವಣೆಯಲ್ಲಿ ಪಕ್ಷ 140-150 ಸ್ಥಾನ ಗೆಲ್ಲುವಂತಾಗಲಿ.‌ಇದಕ್ಕೆ ನಳಿನ್ ಕುಮಾರ್‌ ನೇತೃತ್ವದಲ್ಲಿ ಎಲ್ಲರೂ ಅಗತ್ಯ ‌ಸಹಕಾರ ನೀಡಬೇಕು ಎಂದು ಹೇಳಿದರು.

ಸಾಗರದ‌ ಅಲೆಗಳಿಂದ ವಿದ್ಯುತ್‌ ಉತ್ಪಾದನೆ ಮಾಡಲು ಸರ್ಕಾರ ಆದ್ಯತೆ ನೀಡಲಿದೆ. ಸಾಗರೋತ್ಪನ್ನಗಳ ‌ಮೌಲ್ಯವರ್ಧನೆ ಮಾಡುವ‌ ಮೂಲಕ ಉದ್ಯೋಗಾವಕಾಶ ಒದಗಿಸಲು ರಾಜ್ಯ‌ ಸರ್ಕಾರ ಕಾರ್ಯಕ್ರಮ ರೂಪಿಸುತ್ತಿದೆ ಎಂದು ತಿಳಿಸಿದರು.

ಪ್ರವಾಸೋದ್ಯಮದ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದ್ದು, ಕಾಮಗಾರಿ ‌ಆರಂಭಿಸಲು ಈಗಾಗಲೇ ಸೂಚನೆ ನೀಡಲಾಗಿದೆ. 6 ತಿಂಗಳಲ್ಲಿ ಬದಲಾವಣೆ‌ ಕಾಣಲಿದೆ ಎಂದರು.

ಇದನ್ನೂ ಓದಿ... ಮುಂದಿನ ವರ್ಷ ಭಾರತ 8.5ರಷ್ಟು ಜಿಡಿಪಿ ಸಾಧಿಸಲಿದೆ: ಡಿ.ವಿ.ಸದಾನಂದ ಗೌಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು