ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಧುವಿನ ಮನೆಯಲ್ಲಿ ಈಗ ನೀರವ ಮೌನ

ದಿಬ್ಬಣದ ಬಸ್‌ ಪಲ್ಟಿ ಪ್ರಕರಣ: ಚಾಲಕನ ನಿರ್ಲಕ್ಷವೇ ಕಾರಣ
Last Updated 5 ಜನವರಿ 2021, 8:01 IST
ಅಕ್ಷರ ಗಾತ್ರ

ಮಂಗಳೂರು: ಕಾಸರಗೋಡು ಜಿಲ್ಲೆಯ ಪಾಣತ್ತೂರಿನಲ್ಲಿ ಸಂಭವಿಸಿದ ಬಸ್‌ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದವರ ಪೈಕಿ ಇಬ್ಬರ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಮಂಗಳೂರು ಆಸ್ಪತ್ರೆಗೆ ದಾಖಲಾಗಿರುವ 11 ಜನರು ಚೇತರಿಸಿಕೊಳ್ಳುತ್ತಿದ್ದಾರೆ.

ಮದುವೆ ದಿಬ್ಬಣದ ಬಸ್‌ ಅಪಘಾತದ ಬಳಿಕ ಪುತ್ತೂರು ತಾಲ್ಲೂಕಿನ ಬಲ್ನಾಡು ಗ್ರಾಮದ ಪಾಲೆಚ್ಚಾರಿನ ವಧುವಿನ ಮನೆಯಲ್ಲಿ ನೀರವ ಮೌನ ಆವರಿಸಿತ್ತು. ಬಲ್ನಾಡಿನ ಕೊಗ್ಗು ನಾಯ್ಕ ಅವರ ಪುತ್ರಿ ಅರುಣಾ ಅವರ ವಿವಾಹವು ಕರಿಕೆಯ ಪ್ರಶಾಂತ್‌ ಅವರೊಂದಿಗೆ ಭಾನುವಾರ ವರನ ಮನೆಯಲ್ಲಿ ನಿಗದಿಯಾಗಿತ್ತು. ವಧುವಿನ ಸಂಬಂಧಿಕರು, ಅಕ್ಕಪಕ್ಕದ ಊರುಗಳಲ್ಲಿನ ಪರಿಚಯಸ್ಥರು ಬಸ್‌ನಲ್ಲಿ ಮದುವೆಗೆ ತೆರಳುತ್ತಿದ್ದರು.

‘ಅಪಘಾತ ಸ್ಥಳವು ವರನ ಮನೆಯಿಂದ 5 ಕಿ.ಮೀ. ದೂರದಲ್ಲಿತ್ತು. ಧಾರೆ ಮುಹೂರ್ತ ಮುಗಿದು, ವಧುವಿನ ಕಡೆಯ ಸಂಬಂಧಿಕರ ನಿರೀಕ್ಷೆಯಲ್ಲಿರುವಾಗಲೇ ದುರಂತದ ಸುದ್ದಿ ಬಂದಿತ್ತು. ಬಸ್‌ ವೇಗವಾಗಿ ಚಲಿಸುತ್ತಿತ್ತು. ನಾನು ಹಿಂಬದಿಯ ಸೀಟ್‌ನಲ್ಲಿದ್ದೆ. ಮುಂದಿನ ಸೀಟ್‌ನಲ್ಲಿದ್ದ ಹೆಚ್ಚಿನವರು ಗಾಯಗೊಂಡಿದ್ದಾರೆ’ ಎಂದು ಬಸ್‌ನಲ್ಲಿದ್ದ ದಯಾನಂದ ತಿಳಿಸಿದ್ದಾರೆ.

ಚಾಲಕನ ನಿರ್ಲಕ್ಷ್ಯ: ‘ಪಾಣತ್ತೂರಿನಲ್ಲಿ ಉಂಟಾದ ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯ ಹಾಗೂ ಅಜಾಗರೂಕತೆ ಕಾರಣ’ ಎಂದು ಕಾಸರಗೋಡು ಜಿಲ್ಲಾಧಿಕಾರಿ, ಸಾರಿಗೆ ಸಚಿವರಿಗೆ ಸಲ್ಲಿಸಿದ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಬಸ್‌ನ ಎಂಜಿನ್‌ನಲ್ಲಿ ತೊಂದರೆ ಕಾಣಿಸಿಕೊಂಡಿಲ್ಲ, ಟಯರ್, ಬ್ರೇಕ್ ವೈಫಲ್ಯ ಪ್ರಾಥಮಿಕ ತಪಾಸಣೆಯಿಂದ ಕಂಡು ಬಂದಿಲ್ಲ. ಇಳಿಜಾರು ರಸ್ತೆಯಾಗಿದ್ದರಿಂದ ಚಾಲಕನ ಅಜಾಗರೂಕತೆ ಹಾಗೂ ಈ ರಸ್ತೆಯ ಬಗ್ಗೆ ತಿಳಿವಳಿಕೆಯ ಕೊರತೆ ಮುಂತಾದವು ಅಪಘಾತಕ್ಕೆ ಕಾರಣವಾಗಿರಬಹುದು’ ಎಂದು ಕಾಸರಗೋಡು ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಧಾಕೃಷ್ಣನ್ ತಿಳಿಸಿದ್ದಾರೆ.

ಅಪಘಾತದ ಬಗ್ಗೆ ತನಿಖೆ ನಡೆಸುವಂತೆ ಉಪ ಜಿಲ್ಲಾಧಿಕಾರಿ ಮೇಘಶ್ರೀ ಹಾಗೂ ಸಾರಿಗೆ ಇಲಾಖೆಗೆ ಆದೇಶ ನೀಡಲಾಗಿತ್ತು. ಅದರಂತೆ ಪ್ರಾಥಮಿಕ ವರದಿ ತಯಾರಿಸಿ ಸಾರಿಗೆ ಸಚಿವರಿಗೆ ಸಲ್ಲಿಸಲಾಗಿದೆ.

ಈ ನಡುವೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿರುವ 11 ಮಂದಿ ಚೇತರಿಸುತ್ತಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ವೀರೇಂದ್ರ ಹೆಗ್ಗಡೆ ಸಂತಾಪ

ಉಜಿರೆ: ಕೇರಳದ ಪೆರಿಯಾರಂ ಘಾಟ್ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟವರ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಬೇಗ ಗುಣಮುಖರಾಗಲೆಂದು ಹಾರೈಸಿದ್ದಾರೆ. ಇಂತಹ ಅಪಘಾತಗಳನ್ನು ತಪ್ಪಿಸಲು ವಿದೇಶಗಳಲ್ಲಿರುವಂತೆ ಭಾರತದಲ್ಲಿಯೂ ಶಿಸ್ತು ಮತ್ತು ಕಾನೂನುಬದ್ಧ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT