ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ದೂರು

Published 16 ಆಗಸ್ಟ್ 2024, 13:25 IST
Last Updated 16 ಆಗಸ್ಟ್ 2024, 13:25 IST
ಅಕ್ಷರ ಗಾತ್ರ

ಬೆಳ್ತಂಗಡಿ: ‘ಶಾಸಕ ಹರೀಶ್ ಪೂಂಜ ಅವರು ಸರ್ಕಾರಿ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ಕುರಿತು ಅವಮಾನದ ರೀತಿಯಲ್ಲಿ ಭಾಷಣ ಮಾಡಿದ್ದು, ಸಮಾಜದಲ್ಲಿ ಹಿಂದೂ–ಮುಸ್ಲಿಂ ಸಮುದಾಯದ ಮಧ್ಯೆ ಒಡಕು ಉಂಟುಮಾಡಿ ಸಮಾಜದ ನೆಮ್ಮದಿ ಮತ್ತು ಶಾಂತಿ ಕದಡುವಂತೆ ಪ್ರೇರೇಪಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಶುಕ್ರವಾರ ದೂರು ನೀಡಲಾಗಿದೆ.

ತಾಲ್ಲೂಕು ಆಡಳಿತದಿಂದ ಆಡಳಿತ ಸೌಧದ ಮುಂಭಾಗದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ‘ಈ ದೇಶಕ್ಕೆ ಸ್ವಾತಂತ್ರ್ಯ ಕೇವಲ ಶಾಂತಿಯಿಂದ, ಚರಕ ತಿರುಗಿಸುವುದರಿಂದ ಬಂದಿಲ್ಲ. ಅಖಂಡ ಭಾರತ ವಿಭಜನೆಯಿಂದಾಗಿ ಹಿಂದೂಗಳಿಗೆ ಸಮಸ್ಯೆಯಾಗಿದೆ. ಅದರಿಂದಾಗಿಯೇ ಬಾಂಗ್ಲಾ ದೇಶದ, ಪಾಕಿಸ್ತಾನದ ಹಿಂದೂಗಳಿಗೆ ಶೋಚನೀಯ ಸ್ಥಿತಿ ಬಂದಿದೆ. ಹಿಂದುಗಳಿರುವ ಏಕೈಕ ದೇಶ ಭಾರತ. ಅಂದು ಹಿಂದೂಗಳಿಗೆ ಭಾರತ, ಮುಸ್ಲಿಮರಿಗೆ ಪಾಕಿಸ್ತಾನ ಎಂದು ದೇಶ ವಿಭಜನೆ ಮಾಡಿದ್ದರಿಂದ ಲಕ್ಷಾಂತರ ಹಿಂದೂಗಳ ಮಾರಣ ಹೋಮ ಆಗಿದೆ. ಅದನ್ನು ಇಂದು ನಾವು ನೆನೆಯಬೇಕಾಗಿದೆ. ಈಗ ಬಾಂಗ್ಲಾ ದೇಶದ ಹಿಂದೂಗಳ ಮೇಲಾಗುತ್ತಿರುವ ಅನ್ಯಾಯಕ್ಕೆ ಅಂದು ನಾವು ಮಾಡಿದ ತಪ್ಪೇ ಕಾರಣವಾಗಿದೆ. ಬಹು ಸಂಖ್ಯಾತ ಹಿಂದೂಗಳು ಭಾರತದಲ್ಲಿ ಅಲ್ಪಸಂಖ್ಯಾತರಾದರೆ ಬಾಂಗ್ಲಾ ದೇಶದಲ್ಲಿರುವ ಹಿಂದೂಗಳು ಅನುಭವಿಸುವ ಸ್ಥಿತಿ ಭಾರತದಲ್ಲೂ ನಿರ್ಮಾಣವಾಗಲಿದೆ ಎಂಬುದನ್ನು ನೆನೆಪು ಮಾಡಬೇಕಾಗಿದೆ’ ಎಂದು ಹೇಳಿ ಕಾರ್ಯಕ್ರಮದಲ್ಲಿ ಸೇರಿದ್ದ ಜನ ಹಾಗೂ ಶಾಲಾ ಮಕ್ಕಳ ಮನಸ್ಸಿನಲ್ಲಿ ದ್ವೇಷ, ಅನುಮಾನ ತುಂಬುವ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ದೂರು ನೀಡಿದ ಸಂದರ್ಭ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ನಾಗೇಶ್ ಕುಮಾರ್ ಗೌಡ, ಸಿಪಿಎಂ ಮುಖಂಡ ಬಿ.ಎಂ.ಭಟ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶೇಖರ್ ಕುಕ್ಕೆಡಿ, ಅರೋಗ್ಯ ರಕ್ಷಾ ಸಮಿತಿ ಸದಸ್ಯ ಸೆಬಾಸ್ಟಿಯನ್, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್ ಮಾಲಾಡಿ, ಬಳಂಜ ಗ್ರಾಮ ಪಂಚಾಯಿತಿ ಸದಸ್ಯ ರವೀಂದ್ರ ಅಮೀನ್, ಸದಾನಂದ ನಾಲ್ಕೂರು ಜತೆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT