ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಸದ ಲಿಂಕ್ ಒತ್ತಿದ್ದಕ್ಕೆ ಸೌದಿ ಅರೇಬಿಯಾದಲ್ಲಿ ಚಂದ್ರಶೇಖರ್‌ಗೆ ಶಿಕ್ಷೆ

Published 24 ನವೆಂಬರ್ 2023, 5:00 IST
Last Updated 24 ನವೆಂಬರ್ 2023, 5:00 IST
ಅಕ್ಷರ ಗಾತ್ರ

ಮಂಗಳೂರು: ‘ಬ್ಯಾಂಕೊಂದರ ಹೆಸರಿನಲ್ಲಿ ಮೊಬೈಲ್‌ ಫೋನ್‌ಗೆ ಬಂದಿದ್ದ ಲಿಂಕ್ ಒತ್ತಿದ್ದೆ. ಅದು ಮೋಸಗಾರರು ವಂಚಿಸಲು ಕಳುಹಿಸಿದ್ದು ಎಂದು ತಿಳಿಯುವಾಗ ಒಂದು ವರ್ಷ ಕಳೆದಿತ್ತು. ಅಷ್ಟರಲ್ಲಿ ನನ್ನ ಮೇಲೆ ದೂರು ದಾಖಲಾಗಿತ್ತು. ಪೊಲೀಸರು ವಿಚಾರಣೆಗೆ ಕರೆದರು. ಅನಾಮಧೇಯ ವ್ಯಕ್ತಿಗಳು ಕಳುಹಿಸಿದ ಲಿಂಕ್ ಒತ್ತಿದ ಕಾರಣಕ್ಕೆ ಜೈಲಿಗೆ ಹಾಕಿದರು....’

ಆರ್ಥಿಕ ವಂಚನೆಯ ಆರೋಪದಡಿ ಸೌದಿ ಅರೆಬಿಯಾದ ರಿಯಾದ್‌ನಲ್ಲಿ ಏಳು ತಿಂಗಳು ಜೈಲು ಶಿಕ್ಷೆ ಅನುಭವಿಸಿದ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲ್ಲೂಕು ಐತ್ತೂರು ಗ್ರಾಮದ ಮೂಜೂರಿನ ಚಂದ್ರಶೇಖರ್ ಎಂ.ಕೆ ಇಷ್ಟು ಹೇಳುತ್ತಿದ್ದಂತೆ ಗದ್ಗದಿತರಾದರು. ಕೊಂಚ ಸುಧಾರಿಸಿಕೊಂಡ ಅವರು ರಿಯಾದ್‌ನಲ್ಲಿ ಅನುಭವಿಸಿದ ಮಾನಸಿಕ ಯಾತನೆಯನ್ನು ಬಿಚ್ಚಿಟ್ಟರು.

ಸಿರಾಮಿಕ್ಸ್ ಕಂಪನಿಯೊಂದರಲ್ಲಿ ಮೆಷಿನ್ ಆಪರೇಟರ್ ಆಗಿದ್ದ ಚಂದ್ರಶೇಖರ್ ಅವರ ಹೆಸರಿನಲ್ಲಿ ಬ್ಯಾಂಕ್‌ ಖಾತೆ ತೆರೆದ ವಂಚಕರು  ಮಹಿಳೆಯೊಬ್ಬರ ಖಾತೆಯಿಂದ 22.5 ರಿಯಾಲ್‌ ತೆಗೆದಿದ್ದರು. ಚಂದ್ರಶೇಖರ್ ಅವರೇ ವಂಚನೆ ನಡೆಸಿದ್ದಾರೆ ಎಂದು ಆರೋಪಿಸಿ ಜೈಲು ಶಿಕ್ಷೆ ನೀಡಲಾಗಿತ್ತು. ಹೇಮಾವತಿ ಮತ್ತು ದಿವಂಗತ ಕೆಂಚಪ್ಪ ಅವರ ಪುತ್ರ ಚಂದ್ರಶೇಖರ್ ನ.20ರಂದು ತಾಯ್ನಾಡಿಗೆ ಮರಳಿದ್ದರು. ಅವರ ಬಿಡುಗಡೆಗೆ ಪ್ರಯತ್ನಿಸಿದ ಕೊಕ್ಕಡದ ಎಂಡೊ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ್ ಗೌಡ ಜೊತೆ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

‘ಗೆಳೆಯರ ಪ್ರಯತ್ನದಿಂದ ಮಹಿಳೆಯನ್ನು ಒಪ್ಪಿಸಿ ದೂರು ವಾಪಸ್ ತೆಗೆದುಕೊಂಡ ಕಾರಣ ಜೈಲಿನಿಂದ ಬಿಡುಗಡೆಯಾಯಿತು. ಮಹಿಳೆ ಕಳೆದುಕೊಂಡ ಮೊತ್ತವನ್ನೂ ಪಾವತಿಸಲಾಗಿತ್ತು. ವಕೀಲರ ಶುಲ್ಕ ಮತ್ತಿತರ ವೆಚ್ಚಕ್ಕಾಗಿ ಲಕ್ಷಾಂತರ ಮೊತ್ತ ವ್ಯಯಿಸಲಾಗಿತ್ತು. ಆದರೆ ಎಂಬಸಿ ಅಧಿಕಾರಿಗಳು ಮತ್ತು ಇಲ್ಲಿನ ಜನಪ್ರತಿನಿಧಿಗಳ ಉದಾಸೀನದಿಂದಾಗಿ ಚಂದ್ರಶೇಖರ್ 4 ತಿಂಗಳು ಪೊಲೀಸ್ ಠಾಣೆಯಲ್ಲಿ ಕಳೆಯಬೇಕಾಯಿತು’ ಎಂದು ಶ್ರೀಧರ್ ಗೌಡ ಹೇಳಿದರು.

‘ಸೌದಿಯಲ್ಲಿ ಬ್ಯಾಂಕ್ ಖಾತೆಗೆ ಮೊಬೈಲ್ ಫೋನ್ ಸಂಖ್ಯೆ ಅಟ್ಯಾಚ್ ಆಗಿರುವುದಿಲ್ಲ. ಸರ್ಕಾರ ನೀಡಿದ ಇಕಾಮ ಸಂಖ್ಯೆ ಮಾತ್ರ ಇರುತ್ತದೆ. ಹೀಗಾಗಿ ನನಗೆ ಒಟಿಪಿ ಬಂದಿರಲಿಲ್ಲ. ನನ್ನ ಇಕಾಮ ಸಂಖ್ಯೆಯಲ್ಲಿ ಬ್ಯಾಂಕ್ ಖಾತೆ ತೆರೆದಿದ್ದ ಕಾರಣ ನಾನೇ ಹಣ ತೆಗೆದದ್ದು ಎಂದು ಮಹಿಳೆ ದೂರು ನೀಡಿದ್ದರು’ ಎಂದು ಅವರು ವಿವರಿಸಿದರು.

‘ಮೋಸದ ಹಿಂದೆ ಪಾಕಿಸ್ತಾನಕ್ಕೆ ಸಂಬಂಧಿಸಿದ ವಂಚಕರ ಜಾಲ ಇದೆ ಎಂದು ಊಹಿಸಲಾಗಿದೆ. ಆದರೆ ಈ ಬಗ್ಗೆ ತನಿಖೆ ನಡೆಯಲೇ ಇಲ್ಲ. ಭಾರತೀಯ ಎಂಬ ಕಾರಣಕ್ಕೆ ಅಧಿಕಾರಿಗಳು ಉದಾಸೀನ ಮಾಡಿದ್ದಾರೆ. ಅವರಿಗೆ ನಮ್ಮ ರಾಜಕಾರಣಿಗಳು ಒತ್ತಡ ಹಾಕಲಿಲ್ಲ. ಎಂಬಸಿಯವರು ಇದು ವೈಯಕ್ತಿಕ ಪ್ರಕರಣ ಎಂದು ಹೇಳಿ ನುಣುಚಿಕೊಳ್ಳಲು ಪ್ರಯತ್ನಿಸಿದರು’ ಎಂದು ಶ್ರೀಧರ್ ಗೌಡ ದೂರಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT