ಜಿಲ್ಲಾ ಕಾರಾಗೃಹದಲ್ಲಿ ‘ಕಲಿಕೆಯಿಂದ ಬದಲಾವಣೆ’

ಮಂಗಳೂರು: ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವೆ, ಬೆಂಗಳೂರಿನ ಲೋಕ ಶಿಕ್ಷಣ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸಾಕ್ಷರತಾ ಸಮಿತಿಯ ಸಹಭಾಗಿತ್ವದಲ್ಲಿ ಕಾರಾಗೃಹದಲ್ಲಿನ ಅನಕ್ಷರಸ್ಥ ಮತ್ತು ಅರೆ ಅಕ್ಷರಸ್ಥ ಬಂದಿಗಳಿಗೆ ‘ಕಲಿಕೆಯಿಂದ ಬದಲಾವಣೆ’ ಸಾಕ್ಷರತಾ ಕಾರ್ಯಕ್ರಮದ ಕಾಯಂ ಕಲಿಕಾ ಕೇಂದ್ರವನ್ನು ನಗರದ ಜಿಲ್ಲಾ ಕಾರಾಗೃಹದಲ್ಲಿ ಸೋಮವಾರ ಉದ್ಘಾಟಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ‘ಜೈಲಿನಲ್ಲಿರುವ ಅನಕ್ಷರಸ್ಥ ಮತ್ತು ಅರೆ ಅಕ್ಷರಸ್ಥ ಬಂದಿಗಳು ಸಾಕ್ಷರರಾಗಲು ಉತ್ತಮ ಅವಕಾಶವನ್ನು ಸರ್ಕಾರದಿಂದ ಕಲ್ಪಿಸಲಾಗಿದೆ. ದೊರೆತ ಅವಕಾಶದ ಬಳಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾರಾಗೃಹದ ಅಧೀಕ್ಷಕ ಚಂದನ್ ಜೆ. ಪಟೇಲ್ ಮಾತನಾಡಿ,‘ಇದು ದೇಶದಲ್ಲಿಯೇ ವಿನೂತನ ಕಾರ್ಯಕ್ರಮವಾಗಿದೆ. ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ಏಕಕಾಲದಲ್ಲಿ ಚಾಲನೆ ದೊರೆತಿದೆ. ಕಾರಾಗೃಹಕ್ಕೆ ಬರುವಾಗ ಅನಕ್ಷರಸ್ಥರಾಗಿರುವ ಬಂದಿಗಳನ್ನು ಬಿಡುಗಡೆ ಆಗುವುದರ ಒಳಗಾಗಿ ಅಕ್ಷರಸ್ಥರನ್ನಾಗಿ ಮಾಡುವುದೇ ಈ ಕಾರ್ಯಕ್ರಮದ ಗುರಿಯಾಗಿದೆ. ಅಕ್ಷರಸ್ಥ ಬಂದಿಗಳು ಅನಕ್ಷರಸ್ಥ ಬಂದಿಗಳ ಕಲಿಕಾ ಚಟುವಟಿಕೆಯಲ್ಲಿ ನೆರವಾಗಲಿರುವುದು ವಿಶೇಷತೆಯಾಗಿದೆ’ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಧರ್ಮಗಿರಿ ರಾಮಸ್ವಾಮಿ ಸುಬ್ಬಣ್ಣ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕುಮಾರ್, ಉಪವಿಭಾಗಾಧಿಕಾರಿ ಮದನ್ ಮೋಹನ್, ಸಹಾಯಕ ಪೊಲೀಸ್ ಆಯುಕ್ತ ರವೀಶ್ ನಾಯಕ್, ಜಿಲ್ಲಾ ವಯಸ್ಕ ಶಿಕ್ಷಣಾಧಿಕಾರಿ ಸುಧಾಕರ, ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಶೀನ ಶೆಟ್ಟಿ ಇದ್ದರು. ಒಂಬತ್ತು ಜನ ಅನಕ್ಷರಸ್ಥ ಹಾಗೂ ಐವರು ಅರೆ ಅಕ್ಷರಸ್ಥ ಬಂದಿಗಳಿಗೆ ಕಲಿಕಾ ಕಿಟ್ ವಿತರಿಸಲಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.