ಮಂಗಳೂರು: ಕಂಕನಾಡಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಗು ಅಪಹರಣ ಪ್ರಕರಣವನ್ನು ದೂರು ಬಂದ ಕೆಲವೇ ಗಂಟೆಯೊಳಗೆ ಭೇದಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿ, ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆ.
‘ಆರೋಪಿಯನ್ನು ಕೇರಳ ಎರ್ನಾಕುಳಂ ಜಿಲ್ಲೆಯ ಪರವೂರ್‌ನ ಅನೀಶ್ ಕುಮಾರ್ ( 49) ಎಂದು ಗುರುತಿಸಲಾಗಿದೆ. ಮೂರು ಗಂಡು ಮಕ್ಕಳನ್ನು ಹೊಂದಿರುವ ಆತ ಹೆಣ್ಣು ಮಗು ಸಾಕಬೇಕೆಂಬ ಉದ್ದೇಶದಿಂದ ಮಗುವನ್ನು ಕರೆದುಕೊಂಡು ಹೋಗಿದ್ದೇನೆ’ ಎಂದು ತಿಳಿಸಿದ್ದಾನೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
‘ಅಳಪೆ ಪಡೀಲ್ ಅರಣ್ಯ ಇಲಾಖೆಯ ಸಸ್ಯವನದಲ್ಲಿ ಕೆಲಸ ಮಾಡಿಕೊಂಡಿದ್ದ ಕೆಲಸಗಾರರ ಎರಡೂವರೆ ವರ್ಷದ ಹೆಣ್ಣು ಮಗು ಶನಿವಾರ ಸಂಜೆ 4.30 ಗಂಟೆಗೆ ಕಾಣೆಯಾಗಿತ್ತು. ಎಲ್ಲ ಕಡೆ ಹುಡುಕಾಡಿ ಸಂಜೆ 7.30 ಗಂಟೆಗೆ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಕಂಕನಾಡಿ ನಗರ ಪೊಲೀಸರು ಎಲ್ಲ ಕಡೆ ಮಾಹಿತಿ ಹಂಚಿಕೊಂಡಿದ್ದರು.’
‘ಮಂಗಳೂರು ಜಂಕ್ಷನ್ ರೈಲು ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಗಳನ್ನು ಪರಿಶೀಲಿಸಿದಾಗ, ವ್ಯಕ್ತಿಯೊಬ್ಬರು ಮಗುವನ್ನು ಕರೆದೊಯ್ಯುತ್ತಿರುವುದು ಕಂಡು ಬಂದಿತ್ತು. ಆತ ಕೇರಳ ಕಡೆಗೆ ಹೋದ ರೈಲಿನಲ್ಲಿ ಪ್ರಯಾಣಿಸಿದ್ದನ್ನು ಕಂಡು, ಈ ಬಗ್ಗೆ ಕಾಸರಗೋಡು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಲ್ಲಿನ ಪೊಲೀಸರು ಮಗುವಿನೊಂದಿಗೆ ಆರೋಪಿಯನ್ನು ರಾತ್ರಿ 9.30ರ ಸುಮಾರಿಗೆ ವಶಕ್ಕೆ ಪಡೆದಿದ್ದರು. ಕಂಕನಾಡಿ ಠಾಣೆಯ ಪಿ.ಎಸ್.ಐ.ಶಿವಕುಮಾರ್ ಮತ್ತು ಸಿಬ್ಬಂದಿ ರೈಲ್ವೆ ಪೊಲೀಸರಿಂದ ಮಗುವನ್ನು ಪಡೆದುಕೊಂಡು ಪೋಷಕರಿಗೆ ರಾತ್ರಿಯೇ ಹಸ್ತಾಂತರಿಸಿದರು’ ಎಂದು ಅವರು ಮಾಹಿತಿ ನೀಡಿದರು
ಎಎಸ್ಐ ಅಶೋಕ್, ಸಿಬ್ಬಂದಿ ಆಶಿತ್ ಡಿಸೋಜ, ಕುಶಾಲ್ ಹೆಗ್ಡೆ, ರಾಘವೇಂದ್ರ, ಪೂಜಾ ಈ ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.