ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೈವಿಕತೆ ಮಾನವತೆಗಳ ಮಿಲನ ಕ್ರಿಸ್‌ಮಸ್‌- ಫಾದರ್ ಐವನ್ ಡಿ’ಸೋಜ ಲೇಖನ

ಇಂದು ಕ್ರಿಸ್ಮಸ್‌
Last Updated 25 ಡಿಸೆಂಬರ್ 2021, 9:36 IST
ಅಕ್ಷರ ಗಾತ್ರ

ಯಾವುದೇ ಗಡಿರೇಖೆಗಳಿಲ್ಲದೆ ದೇವರು ಮನುಕುಲದೊಂದಿಗೆ ಒಂದಾದ ಸಂಭ್ರಮವೇ ಕ್ರಿಸ್‌ಮಸ್‌. ದೇವರು ಯೇಸುವಿನಲ್ಲಿ ಎಲ್ಲರನ್ನೂ ತಬ್ಬಿಕೊಂಡರು. ಯೇಸು ಮನುಷ್ಯನಾಗಿ ಪ್ರತಿಯೊಬ್ಬ ಮನುಷ್ಯನನ್ನು ಸ್ವೀಕರಿಸಿದರು. ಜಾತಿ-ಮತಗಳ, ದೇಶ-ಭಾಷೆಗಳ ಸೀಮೆಯಿಲ್ಲದೆ ಎಲ್ಲರನ್ನೂ ಸೇರಿಸಿಕೊಂಡು ಬಾಳಲು ಕ್ರಿಸ್‌ಮಸ್‌ ನಮಗೆ ಕರೆ ನೀಡುತ್ತದೆ.

ದೇವದೂತನು ಕುರಿಮಂದೆಗಳನ್ನು ಕಾಯುತ್ತಿದ್ದ ಕುರುಬರಿಗೆ ನೀಡಿದ ಸಂದೇಶ: ‘ಭಯಪಡಬೇಡಿ, ಇಗೋ, ಜನರೆಲ್ಲರಿಗೂ ಪರಮಾನಂದವನ್ನು ತರುವ ಶುಭಸಂದೇಶವನ್ನು ನಿಮಗೆ ತಿಳಿಸುತ್ತೇನೆ. ಅದೇನೆಂದರೆ, ಇಂದೇ ದಾವೀದನ ಊರಿನಲ್ಲಿ ನಿಮಗೋಸ್ಕರ ಲೋಕೋದ್ಧಾರಕ ಜನಿಸಿದ್ದಾರೆ. ಅವರೇ ಪ್ರಭು ಕ್ರಿಸ್ತ’ (ಲೂಕ 2:10-11). ಯೇಸುವಿನ ಜನನ ಹಾಗೂ ಬಾಳು ಕೇವಲ ಕ್ರೈಸ್ತಧರ್ಮಕ್ಕೆ ಸೀಮಿತವಾಗಿರದೆ, ಅದು ಸಾರ್ವತ್ರಿಕ ಸಂದೇಶವನ್ನು ನೀಡುತ್ತದೆ. ಪರಮಾನಂದವನ್ನು ತರುವ ಯೇಸುವಿನ ಶುಭಸಂದೇಶ ಯಾವುದು?

ಪ್ರೀತಿ: ಎಲ್ಲಾ ಎಲ್ಲೆಗಳನ್ನು ಮೀರಲು ಹಾಗೂ ಎಲ್ಲಾ ಭಿನ್ನಭೇದಗಳನ್ನು ಮೆಟ್ಟಿ ನಿಲ್ಲಲು ಪ್ರೀತಿಯೊಂದೇ ಬಲವಾದ ಅಸ್ತ್ರ. ಪ್ರೀತಿಗೆ ಮೇಲು-ಕೀಳು, ಜಾತಿ-ಮತ, ದೇಶ-ಭಾಷೆ ಎಂಬ ಭೇದಭಾವವಿಲ್ಲ. ‘ನಿಮ್ಮ ಶತ್ರುಗಳನ್ನು ಪ್ರೀತಿಸಿರಿ’ ಎಂದು ಯೇಸು ಹೇಳಿದ್ದಾರೆ. ಯೇಸುವಿನ ಪ್ರಕಾರ ದೇವರ ಪ್ರೀತಿ ಹಾಗೂ ಪರರ ಪ್ರೀತಿಯೇ ಎಲ್ಲಾ ಶಾಸ್ತ್ರಗಳ ಸಾರ. ದುರ್ಬಲರನ್ನು ಬಲಪಡಿಸಲು ಮತ್ತು ದಾರಿ ತಪ್ಪಿದವರಿಗೆ ಸರಿಯಾದ ಹಾದಿಗೆ ತರಲು ಯೇಸು ಪ್ರೀತಿಯನ್ನೇ ಆಯ್ಕೆ ಮಾಡಿದರು. ಅವರು ಪರರನ್ನು ಪ್ರೀತಿ-ಮಮತೆಯಿಂದ ಬರಮಾಡಿಕೊಂಡು ಸತ್ಕರಿಸಿದ್ದು ಮಾತ್ರವಲ್ಲದೆ, ತಪ್ಪಿತಸ್ಥರನ್ನು ದಯೆ-ಕರುಣೆಯಿಂದ ಅಪ್ಪಿಕೊಂಡರು.

ಶಾಂತಿ: ‘ನನ್ನ ಶಾಂತಿ ಸಮಾಧಾನವನ್ನು ನಿಮಗೆ ಕೊಡುತ್ತೇನೆ‘ ಎಂದ ಯೇಸು ಅಂತರಿಕ ಹಾಗೂ ಬಾಹ್ಯಶಾಂತಿಗಾಗಿ ಶ್ರಮಿಸಲು ಕರೆ ನೀಡಿದರು. ಅನ್ಯಾಯವನ್ನು ಖಂಡಿಸಿ ಸತ್ಯ ಮತ್ತು ನ್ಯಾಯಕ್ಕಾಗಿ ಹೋರಾಟ ಮಾಡಿದರು. ಕೊನೆಯವನು ಮೊದಲಾಗಬೇಕು ಎಂಬುದೇ ಅವರ ಧೋರಣೆಯಾಗಿತ್ತು.

ಸೇವೆ: ದೇವರ ಪ್ರೀತಿಯನ್ನು ಕಾರ್ಯರೂಪಕ್ಕೆ ತರಲು ನಿಃಸ್ವಾರ್ಥಸೇವೆ ಪೂರಕವಾಗಿದೆ. ಯೇಸು ದೀನ-ದಲಿತರ, ಅಸ್ವಸ್ಥರ, ದಬ್ಬಾಳಿಕೆಗೆ ಒಳಗೊಂಡವರ ಪರವಾಗಿ ನಿಂತರು. ಜೀವನದಲ್ಲಿ ಕುಗ್ಗಿಹೋದ, ಕಳೆಗುಂದಿದ, ಕಳೆದುಹೋದ, ಕಂಗಾಲಾದ, ಕೆಳವರ್ಗದ, ಕಟ್ಟಕಡೆಯ ಕನಿಷ್ಠರನ್ನೂ ತನ್ನೊಡನೆ ಸೇರಿಸಿ ಅವರಿಗಾಗಿ ಸ್ಪಂದಿಸಿದರು. ತನ್ನ ಕೊನೆಯ ಭೋಜನದಲ್ಲಿ ಶಿಷ್ಯರ ಪಾದಗಳನ್ನು ತೊಳೆದು ‘ನಾನು ನಿಮಗೆ ಮಾಡಿದಂತೆಯೇ ನೀವೂ ಇತರರಿಗೆ ಮಾಡಿರಿ’ ಎಂದರು. ಕಾಲು ತೊಳೆಯುವುದೆಂದರೆ ಪರರ ಅಗತ್ಯಗಳಿಗೆ ಸ್ಪಂದಿಸುವುದು.

ಕ್ಷಮೆ: ‘ದೇವರಿಗೆ ಕಾಣಿಕೆ ಅರ್ಪಿಸುವಾಗ ನಿನ್ನ ಸೋದರನಿಗೆ ನಿನ್ನ ಮೇಲೆ ಏನೋ ಮನಸ್ತಾಪವಿದೆ ಎಂದಾದರೆ ಮೊದಲು ಹೋಗಿ ಸಮಾಧಾನ ಮಾಡಿಕೊ’ ಎಂಬ ಯೇಸುವಿನ ವಾಕ್ಯಕ್ಕೆ ಆಳವಾದ ಅರ್ಥವಿದೆ. ನಮಗೆ ಇತರರ ಮೇಲೆ ಇರುವ ಕೋಪವಲ್ಲದೆ, ಅವರಿಗೆ ನಮ್ಮ ಮೇಲೆ ಇರುವ ಹಗೆತನದ ಸಂದರ್ಭಗಳಲ್ಲೂ ಕ್ಷಮಿಸಬೇಕು. ಶಿಲುಬೆಯ ಮೇಲೆ ತನ್ನನ್ನು ಶಿಕ್ಷಿಸಿದವರನ್ನು ಕ್ಷಮಿಸಿದ್ದು ಯೇಸುವಿನ ಕ್ಷಮೆಯ ಆದರ್ಶವನ್ನು ಸಾರಿಹೇಳುತ್ತದೆ.

ತ್ಯಾಗ: ಬೆತ್ಲೆಹೇಮಿನ ಬಡಕುಟುಂಬದಲ್ಲಿ, ಪ್ರಾಣಿಗಳ ಗುಹೆ ಅಥವಾ ಗೋದಲಿಯಲ್ಲಿ ಜನಿಸಿದ ಯೇಸು ವಿನಯತೆ ಹಾಗೂ ತ್ಯಾಗದ ಪ್ರತೀಕ. ಯೇಸು ಶಿಲುಬೆಯ ಮೇಲೆ ತನ್ನ ಪ್ರಾಣವನ್ನೇ ಧಾರೆಯೆರೆದರು. ಕೂಡಿಹಾಕುವುದಕ್ಕಿಂತ ಕೊಡುವ ಮತ್ತು ಹಂಚುವ ತ್ಯಾಗದ ಮನೋಭಾವದಲ್ಲಿ ಸಂತೋಷ ಅಡಕವಾಗಿದೆ ಎಂದು ಯೇಸು ಕಲಿಸುತ್ತಾರೆ.

ಮುಕ್ತ ಮನಸ್ಸು: ನಮಗ್ಯಾರೂ ವಿರೋಧಿಗಳಿರಬಾರದು. ನಿರ್ಮಲ ಹೃದಯ ಹಾಗೂ ತೆರೆದ ಮನಸ್ಸು ಇರುವವರೇ ಭಾಗ್ಯಶಾಲಿಗಳು ಎಂಬುದು ಯೇಸುವಿನ ಅಂಬೋಣ. ಮುಕ್ತ ಮನಸ್ಸು ಇದ್ದಾಗ ಎಲ್ಲರೊಂದಿಗೆ ಎಲ್ಲರಿಗಾಗಿ ಬಾಳಲು ಸಾಧ್ಯ. ಇಂದಿನ ದಿನಗಳಲ್ಲಿ ನಮ್ಮ ಮನೆ-ಮನಗಳು ಸಂಕುಚಿತಗೊಂಡು ಎಲ್ಲವನ್ನು ನಾವು ಧರ್ಮ-ರಾಜಕೀಯದ ಕನ್ನಡಿಯಲ್ಲಿ ನೋಡುತ್ತಿದ್ದೇವೆ. ‘ನನ್ನದೇ ಸರಿ ಮತ್ತು ಉತ್ತಮವಾದುದು’ ಎಂಬ ಕಿರಿದಾದ ದೃಷ್ಟಿ ಹಲವಾರು ಸಮಸ್ಯೆಗಳಿಗೆ ಎಡೆಮಾಡಿ ಕೊಟ್ಟಿದೆ. ನಮ್ಮ ಇಂದಿನ ಜನಾಂಗಕ್ಕೆ ಬಹುತ್ವವನ್ನು ಗೌರವಿಸುವುದನ್ನು ಕಲಿಸಲು ಹೃದಯ ವೈಶಾಲ್ಯವಿಲ್ಲದೆ ಸಾಧ್ಯವಿಲ್ಲ.

ಭಾರತೀಯ ಸಂಪ್ರದಾಯದಲ್ಲಿ ಧರ್ಮ ಎಂದರೆ ಎತ್ತಿ ಹಿಡಿಯುವುದು, ಆಸರೆಯಾಗುವುದು, ನೆರವಿಗೆ ಬರುವುದು, ಸಹಾಯ ಮಾಡುವುದು, ಧರಿಸುವುದು, ಪಾಲಿಸುವುದು, ರಕ್ಷಿಸುವುದು, ಕಟ್ಟುವುದು, ಪೋಷಿಸುವುದು ಎಂದು ಅರ್ಥೈಸುತ್ತೇವೆ. ಯೇಸು ಮನುಕುಲವನ್ನು ದೇವರೆಡೆಗೆ ಎತ್ತಲು ಹಾಗೂ ಜನರೆಲ್ಲರೂ ಮನುಷ್ಯತ್ವದಲ್ಲಿ ಬಾಳಲು ಮನುಜರಾದರು. ಅಸತ್ಯ, ಅನೀತಿ, ಕಚ್ಚಾಟ, ಸಂಶಯ, ಘರ್ಷಣೆಗಳಿಂದ ಸಾಮಾಜಿಕ ಸ್ವಾಸ್ಥ್ಯವನ್ನು ಕೆಡುವ ಕಿರುಚಾಟದ ಇಂದಿನ ಪರಿಸ್ಥಿತಿಯಲ್ಲಿ ಸತ್ಯ, ಶಾಂತಿ, ಐಕ್ಯ, ಸಹನೆ, ಸಂಬಂಧದ ಭಾಷೆಗಳು ಸಂವಹನದಲ್ಲಿರಲಿ. ಯೇಸುವಿನ ಉನ್ನತ ಹಾಗೂ ಸಾರ್ವತ್ರಿಕ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಬಾಳುವಂತಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT