ಸೋಮವಾರ, ಮೇ 23, 2022
28 °C
ಬಿಜೆಪಿ ಚುನಾವಣೆ ತಾಲೀಮು ಶುರು

ಮಂಗಳೂರು, ಬಂಟ್ವಾಳ ಕ್ಷೇತ್ರದ ಮೇಲೆ ದೃಷ್ಟಿ: ಎರಡು ದಿನ ಸಿಎಂ ಠಿಕಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ವಿಧಾನಸಭೆ ಚುನಾವಣೆಗೆ ಇನ್ನೂ 8–10 ತಿಂಗಳು ಇರುವಾಗಲೇ ರಾಜಕೀಯ ಪಕ್ಷಗಳ ಕಸರತ್ತು ಶುರುವಾಗಿದೆ. ಬಿಜೆಪಿ ನಾಯಕರು ಕರಾವಳಿಯ ಕ್ಷೇತ್ರಗಳ ಮೇಲೆ ದೃಷ್ಟಿ ನೆಟ್ಟಿದ್ದು, ಇದೀಗ ಕರಾವಳಿ ಪ್ರವಾಸ ಆರಂಭಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರಾವಳಿಯ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಉಡುಪಿ ಜಿಲ್ಲೆಯ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸಿದ್ದ ಅವರು, ಉಡುಪಿಯ ಕೃಷ್ಣ ಮಠಕ್ಕೂ ಭೇಟಿ ನೀಡಿ, ಕೃಷ್ಣನ ದರ್ಶನ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪೊಳಲಿ ದೇವಸ್ಥಾನಕ್ಕೂ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಟೆಂಪಲ್‌ ರನ್‌ ಮೂಲಕ, ಕರಾವಳಿಯಲ್ಲಿ ಚುನಾವಣೆಯ ತಯಾರಿ ಆರಂಭಿಸಿದ್ದಾರೆ.

ಬಿಜೆಪಿಯಲ್ಲಿ ರಾಜ್ಯ ಪ್ರವಾಸಕ್ಕೆ ಮೂರು ತಂಡಗಳನ್ನು ರಚಿಸಲಾಗಿದ್ದು, ಆ ಪೈಕಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ತಂಡ ಕರಾವಳಿ ಪ್ರವಾಸ ಆರಂಭಿಸಿದೆ. ಮಂಗಳವಾರ ಬೆಳಿಗ್ಗೆ ನಗರಕ್ಕೆ ಬರಲಿರುವ ಬಸವರಾಜ ಬೊಮ್ಮಾಯಿ ನೇತೃತ್ವದ ತಂಡ, ಬೆಳಿಗ್ಗೆ 9ರಿಂದ ಸಂಜೆ 7ಗಂಟೆಯವರೆಗೆ ಪಕ್ಷ ಸಂಘಟನೆಯ ಸಭೆಯಲ್ಲಿ ಪಾಲ್ಗೊಳ್ಳಲಿದೆ.

ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ ಪ್ರಮುಖರ ಜೊತೆಗೆ ಚರ್ಚೆ ನಡೆಸಲಾಗುತ್ತಿದೆ. ನಂತರ ಮೂರು ಜಿಲ್ಲೆಗಳ ಕೋರ್‌ ಸಮಿತಿ ಸಭೆ ನಡೆಯಲಿದೆ. ಪ್ರಮುಖವಾಗಿ ಮುಂದಿನ ವಿಧಾನಸಭಾ ಚುನಾವಣೆಯ ಕುರಿತು ಚರ್ಚೆ ಆಗಲಿದ್ದು, ಉಭಯ ಜಿಲ್ಲೆಗಳ 13 ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳು ಯಾರು? ಈಗಿರುವ ಶಾಸಕರು ಎಷ್ಟರ ಮಟ್ಟಿಗೆ ವರ್ಚಸ್ಸು ಹೊಂದಿದ್ದಾರೆ? ಮುಂದಿನ ಬಾರಿ ಅವರಿಗೇ ಟಿಕೆಟ್‌ ನೀಡಬೇಕೆ ಎನ್ನುವ ಬಗ್ಗೆ ಕೂಲಂಕಷ ಚರ್ಚೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ತವರು ಜಿಲ್ಲೆಯಾಗಿದ್ದು, ಈಗಾಗಲೇ ಬಿಜೆಪಿ ಪಕ್ಷ ಸಂಘಟನೆಯಲ್ಲಿ ಒಂದು ಹೆಜ್ಜೆ ಮುಂದಿದೆ. ಹಾಗಾಗಿ ಹಾಲಿ ಇರುವ ಶಾಸಕರ ಜೊತೆಗೆ, ಕಾಂಗ್ರೆಸ್‌ ವಶದಲ್ಲಿರುವ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿ ಬಾವುಟ ಹಾರಿಸುವ ನಿಟ್ಟಿನಲ್ಲಿಯೇ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ.

ಬಿಜೆಪಿಯಲ್ಲಿ ಹಾಲಿ ಇರುವ ಏಳು ಶಾಸಕರಿಗೇ ಮತ್ತೊಮ್ಮೆ ಟಿಕೆಟ್‌ ದೊರೆಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಮಂಗಳೂರು ಕ್ಷೇತ್ರದಲ್ಲಿ ಈ ಬಾರಿ ಹೊಸಬರಿಗೆ ಟಿಕೆಟ್‌ ನೀಡಬೇಕು ಎನ್ನುವ ಇರಾದೆ ಇದ್ದಂತಿದೆ. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸಂತೋಷ್‌ಕುಮಾರ್‌ ರೈ ಬೋಳಿಯಾರ್‌, ಕಾಂಗ್ರೆಸ್‌ನ ಯು.ಟಿ. ಖಾದರ್ ವಿರುದ್ಧ 19 ಸಾವಿರ ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದರು. ಹೀಗಾಗಿ ಈ ಬಾರಿ ಮಂಗಳೂರು ಕ್ಷೇತ್ರದಲ್ಲಿ ಶರಣ್‌ ಪಂಪ್‌ವೆಲ್‌ ಅಥವಾ ರಹೀಂ ಉಚ್ಚಿಲ್‌ ಅವರನ್ನು ಕಣಕ್ಕೆ ಇಳಿಸುವ ಕುರಿತೂ ಚರ್ಚೆಗಳು ಆರಂಭವಾಗಿವೆ.

ಬಂಟ್ವಾಳ ಕ್ಷೇತ್ರದಲ್ಲಿ ಮಾಜಿ ಸಚಿವ ರಮಾನಾಥ ರೈ ಮತ್ತೊಮ್ಮೆ ಸ್ಪರ್ಧಿಸುವ ನಿಟ್ಟಿನಲ್ಲಿ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಹೀಗಾಗಿ ಬಂಟ್ವಾಳ ಕ್ಷೇತ್ರದಲ್ಲೂ ಬಿಜೆಪಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಆದ್ಯತೆ ನೀಡಬೇಕಾಗಿದೆ. ರಮಾನಾಥ ರೈ ಕಣಕ್ಕೆ ಇಳಿದರೆ, ಪ್ರಬಲ ಸ್ಪರ್ಧೆ ಎದುರಾಗುವ ಸಾಧ್ಯತೆ ಇದ್ದು, ಈಗಿನಿಂದಲೇ ಪಕ್ಷವನ್ನು ತಳಮಟ್ಟದಿಂದ ಚುರುಕಾಗಿಸುವ ಪ್ರಯತ್ನ ಆರಂಭಿಸಲು ಚಿಂತನೆ ನಡೆದಿದೆ.

ಇತರ ಮತ ಬೇಟೆಗೆ ಯೋಜನೆ

ಕರಾವಳಿಯಲ್ಲಿ ಹಿಂದೂ ಸಂಘಟನೆಗಳು ಪ್ರಬಲವಾಗಿದ್ದು, ಇಲ್ಲಿ ಸಂಘಟನೆಗಳನ್ನು ಎದುರು ಹಾಕಿಕೊಳ್ಳುವಂತಿಲ್ಲ. ಆದರೆ, ಕೇವಲ ಹಿಂದೂ ಮತಗಳನ್ನು ಅವಲಂಬಿಸಿ, ಚುನಾವಣೆ ಎದುರಿಸುವುದೂ ಕಷ್ಟ. ಹಾಗಾಗಿ ಹಿಂದೂ ಮತಗಳ ಜೊತೆಗೆ ಇತರ ಮತಗಳನ್ನು ಸೆಳೆಯುವ ನಿಟ್ಟಿನಲ್ಲೂ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರಮುಖವಾಗಿ ಮಂಗಳೂರು ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ನಿರ್ಣಾಯಕವಾಗಿವೆ. ಇಂತಹ ಕ್ಷೇತ್ರಗಳಲ್ಲಿ ಜಯಗಳಿಸಲು ಎಲ್ಲ ಧರ್ಮಗಳ ಮತಗಳನ್ನು ಪಡೆಯುವುದು ಅನಿವಾರ್ಯ. ಹಾಗಾಗಿ ಸ್ಪಷ್ಟ ಕಾರ್ಯಸೂಚಿಯನ್ನು ಸಿದ್ಧಪಡಿಸಿ, ರಾಜ್ಯದಾದ್ಯಂತ ಇದೇ ಮಾದರಿಯನ್ನು ಅನುಸರಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ.

‘ನಮ್ಮದು ಸಂವಿಧಾನ ಬದ್ಧವಾಗಿ ರಚಿಸಿರುವ ಸರ್ಕಾರ. ಕಾನೂನು ಸುವ್ಯವಸ್ಥೆ ಹಾಗೂ ಎಲ್ಲರನ್ನು ಸಮಾನ ದೃಷ್ಟಿಕೋನ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳುವ ಮೂಲಕ ಬಿಜೆಪಿಗೆ ಎಲ್ಲರೂ ಸಮಾನರು ಎನ್ನುವ ಸಂದೇಶ ನೀಡುವ ಪ್ರಯತ್ನವನ್ನು ಸಿ.ಎಂ. ಬೊಮ್ಮಾಯಿ ಉಡುಪಿಯಿಂದಲೇ ಆರಂಭಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು